ಶಿವಾನಂದ ಗೊಂಬಿ
ಹುಬ್ಬಳ್ಳಿ: 5 ವರ್ಷದ ಬಾಲಕಿ ಅತ್ಯಾಚಾರಕ್ಕೆ ಯತ್ನ, ಹತ್ಯೆ ಪ್ರಕರಣದ ಬಳಿಕ ಒತ್ತಡದಿಂದಾಗಿ ಕಾರ್ಮಿಕ ಇಲಾಖೆ ನಡೆಸಿದ ಸಮೀಕ್ಷೆಯಿಂದ ಧಾರವಾಡ ಸೇರಿದಂತೆ 4 ಜಿಲ್ಲೆಗಳಲ್ಲಿ ಅನ್ಯರಾಜ್ಯಗಳ 4853 ಜನ ಕಾರ್ಮಿಕರು ಇದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಲ ಸೇರಿದಂತೆ 4-5 ರಾಜ್ಯಗಳಿಂದ ಬಂದವರೇ ಹೆಚ್ಚಿದ್ದಾರೆ. ಆದರೆ, ಕಾರ್ಮಿಕ ಇಲಾಖೆಯ ಈ ಸಮೀಕ್ಷೆ ಸಮರ್ಪಕವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.ಹುಬ್ಬಳ್ಳಿಯಲ್ಲಿ ಏ. 13ರಂದು 5 ವರ್ಷದ ಬಾಲಕಿ ಮೇಲೆ ಬಿಹಾರ ಮೂಲದ ಕಾರ್ಮಿಕನೊಬ್ಬ ನಿರ್ಮಾಣ ಹಂತದ ಕಟ್ಟಡದಲ್ಲಿ ಎಳೆದೊಯ್ದು ಅತ್ಯಾಚಾರಕ್ಕೆ ಯತ್ತಿಸಿದ್ದ. ಬಳಿಕ ಅಲ್ಲಿನ ಶೌಚಾಲಯಯೊಂದರಲ್ಲಿ ಬಾಲಕಿ ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಘಟನೆಗೆ ಬರೀ ಹುಬ್ಬಳ್ಳಿಯಷ್ಟೇ ಅಲ್ಲ. ಇಡೀ ರಾಜ್ಯದಲ್ಲೇ ಸಂಚಲನವನ್ನುಂಟು ಮಾಡಿತ್ತು. ಆರೋಪಿ ರಿತೇಶಕುಮಾರನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಆದರೆ, ಆತ ಬಿಹಾರದವನು ಎಂದಷ್ಟೇ ಪೊಲೀಸರಿಗೆ ಗೊತ್ತಾಗಿತ್ತು. ಬಿಹಾರದಲ್ಲಿ ಎಲ್ಲಿಯವನು?, ಆತನ ಕುಟುಂಬದ ಹಿನ್ನೆಲೆಯಲ್ಲಿ ಏನು? ಎಂಬ ಮಾಹಿತಿ ಇರಲಿಲ್ಲ. ಇದರಿಂದಾಗಿ ಆತನ ಕುಟುಂಬಕ್ಕೆ ಪೊಲೀಸರು ಎಡಬಿಡದೇ ಎಲ್ಲ ರಾಜ್ಯಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಕೋರ್ಟ್ ಆದೇಶದ ಮೇರೆಗೆ 20 ದಿನಗಳ ಬಳಿಕ ಆತನ ಅಂತ್ಯಸಂಸ್ಕಾರ ನಡೆಸಲಾಯಿತು.
ಸಮೀಕ್ಷೆಗೆ ಸೂಚನೆ: ಈ ಘಟನೆ ನಂತರ ಅನ್ಯರಾಜ್ಯಗಳಿಂದ ಬರುವ ಕಾರ್ಮಿಕರ ಮೇಲೆ ಸರ್ಕಾರಕ್ಕೇನು ನಿಗಾನೇ ಇರಲ್ಲ. ಯಾರ್‍ಯಾರೋ ಬರುತ್ತಾರೆ ಎಲ್ಲೋ ಒಂದೆಡೆ ಕೆಲಸ ಮಾಡಿ ಅಲ್ಲಿಂದ ಮತ್ತೆ ಪರಾರಿಯಾಗಿ ಬಿಡುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಹುಬ್ಬಳ್ಳಿಯಲ್ಲಂತೂ ಓಣಿ ಓಣಿ ಜನರೇ ಅಡ್ಡಾಡಿ, ಬಿಹಾರಿ, ಉತ್ತರ ಪ್ರದೇಶ ಸೇರಿದಂತೆ ಹೊರರಾಜ್ಯಗಳಿಂದ ಬರುವ ಕಾರ್ಮಿಕರಿಗೆ ಯಾರೂ ಬಾಡಿಗೆ ಕೊಡಬಾರದು ಎಂದು ಸಾರ್ವಜನಿಕರು ಪ್ರಚಾರ ಮಾಡಿದ್ದು ನಡೆಯಿತು.ಇದೆಲ್ಲದರ ನಡುವೆಯೇ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಯಿತು. ಅದರಲ್ಲಿ ಅನ್ಯರಾಜ್ಯಗಳಿಂದ ಬಂದಿರುವ ಕಾರ್ಮಿಕರನ್ನು ಪತ್ತೆ ಹಚ್ಚಬೇಕು. ಅವರ ಬಗ್ಗೆ ಎಲ್ಲ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವ ಉದ್ದೇಶದಿಂದ ಕೂಡಲೇ ಸಮೀಕ್ಷೆ ಮಾಡುವಂತೆ ಸೂಚನೆ ನೀಡಿತ್ತು.
ಅದರಂತೆ ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಆಧೀನದಲ್ಲಿ ಬರುವ ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಇಲಾಖೆ ಸಮೀಕ್ಷೆ ನಡೆಸಿದೆಯಂತೆ. ಅದರ ವರದಿ ರಾಜ್ಯ ಸರ್ಕಾರಕ್ಕೂ ಕಳುಹಿಸಿಕೊಟ್ಟಿದೆಯಂತೆ.ನಾಲ್ಕು ಜಿಲ್ಲೆಗಳು ಸೇರಿ 4853 ಕಾರ್ಮಿಕರು ಅನ್ಯರಾಜ್ಯಗಳಿಂದ ಬಂದವರು ಇದ್ದಾರೆ. ಇವರಲ್ಲಿ ಪಶ್ಚಿಮ ಬಂಗಾಲ, ಓಡಿಶಾ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಂದ ಬಂದವರೇ ಹೆಚ್ಚು ಜನರಿದ್ದಾರೆ. ಬಹುತೇಕರು ಕಟ್ಟಡ ಕಾರ್ಮಿಕರೇ ಎಂದು ಮೂಲಗಳು ತಿಳಿಸುತ್ತವೆ. ಆದರೆ, ಎಷ್ಟೋ ಜನ ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಬಗ್ಗೆ ಇದರಲ್ಲಿ ಮಾಹಿತಿ ಇಲ್ಲ.
ಸಮರ್ಪಕ ಅಲ್ಲ: ಈಗ ನಡೆಸಿರುವ ಸಮೀಕ್ಷೆ ಕಾಟಾಚಾರಕ್ಕೆಂಬಂತಿದೆ. ಸಮರ್ಪಕವಾಗಿ ನಡೆದಿಲ್ಲ. ಕಾರ್ಮಿಕ ಇಲಾಖೆಯ ಕೆಲ ಅಧಿಕಾರಿ ವರ್ಗಕ್ಕೆ ಹೀಗೊಂದು ಸಮೀಕ್ಷೆ ನಡೆಸಿರುವುದು ಗೊತ್ತಿಲ್ಲ. ಇನ್ನು ಸರ್ಕಾರದಿಂದ ಆದೇಶ ಬಂದಿಲ್ಲ ಎಂದು ಕೆಳಹಂತದ ಅಧಿಕಾರಿ ವರ್ಗ ಹೇಳಿದರೆ, ಹಿರಿಯ ಅಧಿಕಾರಿಗಳು ಸಮೀಕ್ಷೆ ನಡೆಸಲಾಗಿದೆ. 4853 ಜನ ಕಾರ್ಮಿಕರಿದ್ದಾರೆ. ನಮ್ಮಲ್ಲಿ ರಿಜಿಸ್ಟಾರ್ ನಿರ್ವಹಣೆ ಮಾಡುತ್ತೇವೆ ಎಂದು ತಿಳಿಸುತ್ತಾರೆ.ಅನ್ಯರಾಜ್ಯಗಳಿಂದ ಬಂದಿರುವ ಒಟ್ಟು ಕಾರ್ಮಿಕರು ಎಷ್ಟು? ಅದರಲ್ಲಿ ಕಟ್ಟಡ ಕಾರ್ಮಿಕರು ಎಷ್ಟು? ಕೆಲವೊಂದಿಷ್ಟು ಜನ ಟೇಲರ್‌ಗಳಾಗೂ ಕೆಲಸ ಮಾಡುತ್ತಿದ್ದರೆ, ಕೆಲವರು ಗ್ಯಾರೇಜ್, ಟೈರ್, ಕೆಲವರು ಹೋಟೆಲ್, ದಾಬಾಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆಯೂ ಮಾಹಿತಿ ದೊರೆಯಬೇಕು. ಆ ಕಾರ್ಮಿಕರ ಪೂರ್ವಾಪರ ಎಲ್ಲವೂ ದಾಖಲಾತಿ ಆಗಬೇಕು. ಯಾರೋ ಒಬ್ಬನ ಬಗ್ಗೆ ಮಾಹಿತಿ ಬೇಕು ಅಂತ ಪರಿಶೀಲಿಸಿದಾಗ, ಆತನ ಪೂರ್ವಾಪರ ಮಾಹಿತಿಯೆಲ್ಲ ಅಲ್ಲಿ ಸಿಗುವಂತಾಗಬೇಕು. ಅಂದಾಗ ಮಾತ್ರ ಸಮೀಕ್ಷೆಗೊಂದು ಅರ್ಥ ಬರುತ್ತದೆ. ಆ ನಿಟ್ಟಿನಲ್ಲಿ ಇದಕ್ಕಾಗಿ ಪ್ರತ್ಯೇಕ ತಂಡ ಮಾಡಿ ಸಮೀಕ್ಷೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರೇ ಆಗಿರುವ ಕಾರ್ಮಿಕ ಸಚಿವ ಸಂತೋಷ ಲಾಡ್, ಕೊಂಚ ಮುತುವರ್ಜಿ ವಹಿಸಿ ಇಡೀ ರಾಜ್ಯದಲ್ಲೇ ಸಮರ್ಪಕ ಸಮೀಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.ಸರ್ಕಾರಕ್ಕೆ ಮಾಹಿತಿ: ಬಾಲಕಿ ಹತ್ಯೆ ಪ್ರಕರಣದ ಬಳಿಕ ಸರ್ಕಾರ ಅನ್ಯರಾಜ್ಯದ ಕಾರ್ಮಿಕರ ಸಂಖ್ಯೆ ಕೇಳಿತ್ತು. ಅದರಂತೆ ಮಾಹಿತಿ ಕಲೆ ಹಾಕಿ ಕಳುಹಿಸಲಾಗಿದೆ. 4 ಜಿಲ್ಲೆಗಳಲ್ಲಿ 4853 ಕಾರ್ಮಿಕರು ಅನ್ಯರಾಜ್ಯದವರಿದ್ದಾರೆ. ಈ ಮಾಹಿತಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಸಚಿನ ಹಳೇಮನಿ ತಿಳಿಸಿದರು.