ಕನ್ನಡಪ್ರಭ ವಾರ್ತೆ ಕೊರಟಗೆರೆ
ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಶಿಕ್ಷಣವನ್ನು ಕಲಿಸಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ೪ನೇ ಸಂಸ್ಕಾರ ಶಿಬಿರದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು. ಮಕ್ಕಳಲ್ಲಿ ಆತ್ಮವಿಶ್ವಾಸ, ಸಾಮಾಜಿಕ ಜವಾಬ್ದಾರಿ, ಶ್ರದ್ಧಾ, ಶಿಸ್ತು, ಸಹಾನುಭೂತಿ ಹಾಗೂ ಉನ್ನತ ಮೌಲ್ಯಗಳನ್ನು ಬೆಳೆಸುವ ಮೂಲಕ ಅವರನ್ನು ಭವಿಷ್ಯದ ಸಜ್ಜನ ನಾಗರಿಕರನ್ನಾಗಿ ರೂಪಿಸುತ್ತಿದೆ, ಈ ಶಿಬಿರವು ಮಕ್ಕಳಲ್ಲಿ ಶ್ರದ್ಧೆ, ಶಿಸ್ತು, ಧಾರ್ಮಿಕ ಭಾವನೆ, ಸಾಮಾಜಿಕ ನೈತಿಕತೆ ಮತ್ತು ನೈಜ ಜೀವನ ಕೌಶಲ್ಯಗಳನ್ನು ಬೆಳೆಸುವುದನ್ನು ಉದ್ದೇಶಿಸಿದೆ. ಕಳೆದ ಮೂರು ವರ್ಷಗಳಲ್ಲಿ ಭಾಗವಹಿಸಿದ ಮಕ್ಕಳು ಇವತ್ತಿಗೂ ಆ ಸಂಸ್ಕಾರಗಳನ್ನು ಬದುಕಿನಲ್ಲಿ ಅನುಸರಿಸುತ್ತಿದ್ದಾರೆ ಎಂದರು.ಜಿಲ್ಲಾಧಿಕಾರಿ ಡಾ. ಶುಭಕಲ್ಯಾಣ್ ಮಾತನಾಡಿ ಪ್ರತಿಯೊಬ್ಬ ಮಕ್ಕಳು, ಗುರು ಹಿರಿಯರಿಗೆ ತಂದೆ ತಾಯಿಗೆ ಗೌರವ ನೀಡುವುದನ್ನ ಕಲಿಯಬೇಕು. ದಿನದಲ್ಲಿ ಒಂದು ಗಂಟೆ ದಿನಪತ್ರಿಕೆ ಓದುವ ಅಭ್ಯಾಸ ಮಾಡಿಕೊಂಡರೆ ಜ್ಞಾನಾರ್ಜನೆ ಅಭಿವೃದ್ಧಿಯಾಗುವುದರ ಜೊತೆಗೆ ಆಚಾರ ವಿಚಾರಗಳು ತಿಳಿಯುತ್ತದೆ. ಪ್ರತಿಯೊಬ್ಬರು ನಮ್ಮ ದೇಶದ ಕಾನೂನು ನಿಯಮಗಳನ್ನು ತಿಳಿದುಕೊಳ್ಳವಂತಾಗಬೇಕು ಎಂದು ತಿಳಿಸಿದರು.ತುಮಕೂರು ವಿಶ್ವ ವಿದ್ಯಾನಿಲಯದ ಕುಲಸಚಿವೆ ನಾಹೀದ ಜಮ್ ಜಮ್ ಮಾತನಾಡಿ ಈಗಿನ ತಲೆಮಾರಿಗೆ ನೀತಿ ಭದ್ರತೆ, ಶಿಸ್ತು ಮತ್ತು ಗೌರವವಂತಿಕೆ ಅತ್ಯಗತ್ಯ. ಹನುಮಂತನಾಥ ಸ್ವಾಮೀಜಿಗಳ ಶಿಬಿರ ಇಂಥ ಮೌಲ್ಯಗಳನ್ನು ಬಾಲ್ಯದ ಮನಸ್ಸಿನಲ್ಲಿ ಬಿತ್ತುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ. ಈ ಹತ್ತು ದಿನದ ಶಿಬಿರದಲ್ಲಿ ತಮ್ಮ ಮನಸ್ಸಿನಲ್ಲಿ ಕೊಳೆಯನ್ನ ತೊಳೆದು ಹಾಕಿ ಒಳ್ಳೆ ಸಂಸ್ಕಾರ ಪಡೆದು ನಿಮ್ಮ ತಂದೆ ತಾಯಿಗೆ ಕೀರ್ತಿ ತರುವಂತ ಮಕ್ಕಳಾಗಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ನಂಜುಂಡಯ್ಯ, ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ನಾಗಣ್ಣ, ತಹಶೀಲ್ದಾರ್ ಮಂಜುನಾಥ್, ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ. ಪುರುಷೋತ್ತಮ್ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.