ಬೆಂಗಳೂರು : ರಾಜಧಾನಿಯಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆದಿದ್ದು, ಇಬ್ಬರು ವಿದೇಶಿ ಪೆಡ್ಲರ್‌ಗಳನ್ನು ಸೆರೆ ಹಿಡಿದು ಸುಮಾರು 5.5 ಕೋಟಿ ರು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ಲೇಔಟ್‌ನ ಡ್ಯುರೋ ಮೈಕೆಲ್ ಹಾಗೂ ಇಬು ಸ್ಯಾಮ್ಯುಯಲ್ ಚ್ಯುಕ್ವಾಮ ಬಂಧಿತರಾಗಿದ್ದು, ಪ್ರಕರಣದಲ್ಲಿ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ. ಈ ಇಬ್ಬರಿಂದ 2.5 ಕೋಟಿ ರು ಸೇರಿದಂತೆ ಒಟ್ಟು 5.5 ಕೋಟಿ ಡ್ರಗ್ಸ್ ಜಪ್ತಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಅಂಚೆ ಕಚೇರಿಯಲ್ಲಿ ಡ್ರಗ್ಸ್
ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿ ಮೇಲೆ ಮತ್ತೆ ಸಿಸಿಬಿ ಕಾರ್ಯಾಚರಣೆ ನಡೆಸಿದ್ದು, ಈ ಭಾರಿ ಥೈಲ್ಯಾಂಡ್ ನಿಂದ ಬಂದಿದ್ದ 2.5 ಕೋಟಿ ರು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ನಾಪತ್ತೆಯಾಗಿರುವ ಪೆಡ್ಲರ್‌ಗಳಿಗೆ ಸಿಸಿಬಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿದೇಶಿ ಅಂಚೆ ಕಚೇರಿಗೆ ಶಂಕಾಸ್ಪದ ವಸ್ತುಗಳು ವಿದೇಶದಿಂದ ಪಾರ್ಸಲ್ ಬಂದಿರುವ ಬಗ್ಗೆ ಕಸಮ್ಟ್ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಇನ್ಸ್‌ಪೆಕ್ಟರ್ ರಕ್ಷಿತ್ ನೇತೃತ್ವದ ತಂಡ ಶ್ವಾನ ದಳದೊಂದಿಗೆ ಅಂಚೆ ಕಚೇರಿಗೆ ತೆರಳಿ ಗೋದಾಮಿನಲ್ಲಿ ಶೋಧಿಸಿತು. ಆಗ 3.5 ಕೋಟಿ ರು ಮೌಲ್ಯದ ಹೈಡ್ರೋ ಗಾಂಜಾ ಸಿಕ್ಕಿದೆ. ಆದರೆ ಈ ಡ್ರಗ್ಸ್ ಅನ್ನು ನಕಲಿ ಹೆಸರು- ವಿಳಾಸ ನೀಡಿ ಥೈಲ್ಯಾಂಡ್‌ನಿಂದ ಪೆಡ್ಲರ್‌ಗಳು ತರಿಸಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಬಿಸ್ಕೆತ್ ಹಾಗೂ ಚಾಕೊಲೇಟ್ ಡಬ್ಬಿಗಳಲ್ಲಿ ಡ್ರಗ್ಸ್ ಅಡಗಿಸಿಟ್ಟು ವಿದೇಶದಿಂದ ಪಾರ್ಸಲ್ ಕಳುಹಿಸಿದ್ದಾರೆ. ಆ ಪೆಡ್ಲರ್‌ಗಳ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕೆಲ ದಿನಗಳ ಹಿಂದೆ ಸಹ ಈ ಅಂಚೆ ಕಚೇರಿಯಲ್ಲಿ ವಿದೇಶದಿಂದ ಬಂದಿದ್ದ ಕೋಟ್ಯಾಂತರ ರು ಮೌಲ್ಯದ ಡ್ರಗ್ಸ್ ಅನ್ನು ಶ್ವಾನ ದಳ ಪತ್ತೆ ಹಚ್ಚಿದ್ದವು.
ವಿದೇಶಿ ಪೆಡ್ಲರ್‌ಗಳ ಬೇಟೆ
ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೀಲಾದ್ರಿ ಲೇಔಟ್‌ನಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ವಿದೇಶಿ ಪೆಡ್ಲರ್‌ಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ 2.5 ಕೋಟಿ ರು ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ನೈಜೀರಿಯಾ ಮೂಲದ ಮೈಕೆಲ್ ಹಾಗೂ ಸ್ಯಾಮ್ಯುಯಲ್, ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದರು. ನಂತರ ನಗರಕ್ಕೆ ಬಂದು ನೆಲೆಸಿದ್ದ ಅವರು, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದರು. ದೆಹಲಿ ಮೂಲದ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸಿ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದರು. ಈ ಜಾಲದ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಇನ್ಸ್‌ಪೆಕ್ಟರ್ ವಿ.ಡಿ.ಶಿವರಾಜ್ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.