ಸಾರಾಂಶ
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಮುಖ್ಯರಸ್ತೆ ಅಗಲೀಕರಣದಲ್ಲಿ ಶಾಸಕ ರಾಜುಗೌಡ ಪಾಟೀಲ ನಿಯಮಗಳನ್ನು ಗಾಳಿಗೆ ತೂರಿ ಅಗಲೀಕರಣಕ್ಕೆ ಮುಂದಾಗಿದ್ದಾರೆ. ಇದನ್ನು ವಿರೋಧಿಸಿ ಅಲ್ಲಿನ ಜನರು ಕಳೆದ ಒಂಬತ್ತು ದಿನಗಳಿಂದ ನಿರಂತರ ಧರಣಿ ನಡೆಸುತ್ತಿರುವುದನ್ನು ಶಾಸಕರು ರಾಜಕೀಯ ಪ್ರೇರಿತ ಎಂದು ಹೇಳಿರುವುದು ಬಾಲಿಶತನದ ಹೇಳಿಕೆಯಾಗಿದೆ ಎಂದು ಮುಖಂಡ ಆನಂದಗೌಡ ದೊಡಮನಿ ಹೇಳಿದರು.ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಕುದರಿಸಾಲವಾಡಗಿ ಗ್ರಾಮದ ರಸ್ತೆ ಅಗಲೀಕರಣವನ್ನು ವಿರೋಧಿಸಿ ಹಾಗೂ ಮನೆಗಳನ್ನು ದ್ವಂಸ ಮಾಡಲಾಗಿದೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಯನ್ನು 55 ಅಡಿ ಅಗಲೀಕರಣ ಮಾಡುವ ಅಗತ್ಯವಿರಲಿಲ್ಲ. ಅಗಲೀಕರಣ ವಿಷಯದಲ್ಲಿ ಅಧಿಕಾರಿಗಳ ಮೇಲೆ ಶಾಸಕರು ಒತ್ತಡ ಹೇರಿ ಅಗಲೀಕರಣ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿಗಳ ಆದೇಶ ಸಹ ಆಗಿಲ್ಲ. ಶಾಸಕರು ಮಾಡಿರುವ ಕಾರ್ಯ ಸರಿಯಲ್ಲ ಎಂದು ಪಕ್ಷಾತೀತವಾಗಿ ಧರಣಿ ನಡೆಸುತ್ತಿದ್ದರೆ ಶಾಸಕರಿಗೆ ನುಂಗಲಾರದ ತುತ್ತಾಗಿದೆ. ರಸ್ತೆಯ ನಕ್ಷೆಯ ಕುರಿತು ಸುದ್ದಿಗಾರರಿಗೆ ತೋರಿಸಿದ ಅವರು, ಶಾಸಕರು ಈಗಲಾದರೂ ರಸ್ತೆ ಅಗಲೀಕರಣದಲ್ಲಿ ಅನ್ಯಾಯಕ್ಕೆ ಒಳಗಾದ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ ಎಂದು ಒತ್ತಾಯಿಸಿದರು.ಕೆಪಿಸಿಸಿ ಕಾರ್ಯದರ್ಶಿ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ ಮಾತನಾಡಿ, ರಸ್ತೆ ಅಗಲೀಕರಣದಲ್ಲಿ ನಿರ್ಗತಿಕರ ಪರವಾಗಿ ನಾವು ಅವರಿಗೆ ಬೆಂಬಲ ವ್ಯಕ್ತಪಡಿಸಿದರೆ ದೇವರಹಿಪ್ಪರಗಿ ಶಾಸಕರು ಧರಣಿಯ ಬಗ್ಗೆ ಹಗುರವಾಗಿ ಮಾತನಾಡಿದ್ದು ಶೋಭೆ ತರುವ ಸಂಗತಿಯಲ್ಲ. ರಸ್ತೆ ಅಗಲೀಕರಣದ ಕ್ರಿಯಾಯೋಜನೆ, ಅನುದಾನ ಕುರಿತು ಸರಿಯಾದ ಮಾಹಿತಿ ನೀಡಿಲ್ಲ. ಗುತ್ತಿಗೆದಾರರ ಹೆಸರು ಸಹ ಬಹಿರಂಗಪಡಿಸಿಲ್ಲ. ರಸ್ತೆ ಅಭಿವೃದ್ಧಿಗೆ ನಮ್ಮ ತಕರಾರು ಇಲ್ಲ. ಜನರಿಗೆ ತೊಂದರೆ ಉಂಟಾಗದಂತೆ ಮಾಡಬೇಕೆಂಬುದು ನಮ್ಮ ಆಶಯ. ನಾವು ಶಾಸಕರ ಅಭಿವೃದ್ಧಿಗೆ ಯಾವುದೇ ಅಡ್ಡಿಪಡಿಸಿಲ್ಲ ಎಂದು ಹೇಳಿದರು.
ಜನರಿಗೆ ನ್ಯಾಯ ಕೊಡಿಸುವ ಉದ್ದೇಶ ನಮಗಿದೆ. ರಸ್ತೆ ಅಗಲೀಕರಣ ಮಾಡುವ ಮುನ್ನ ಶಾಸಕರು ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿತ್ತು. ಅವರಿಗೆ ಮತ ಹಾಕಿದ ಜನರಿಗೆ ಈ ರೀತಿ ಮಾಡುವುದು ಸರೀನಾ ಎಂದು ಪ್ರಶ್ನಿಸಿದ ಅವರು, ನನಗೆ ರಾಜಕೀಯ ಉದ್ಯೋಗವಲ್ಲ. ನನಗೆ ಬೇರೆ ಉದ್ಯೋಗವಿದೆ. ದೀಪಾವಳಿ ಮುನ್ನವೇ ಅವರು ಇಲ್ಲಿಗೆ ಬಂದು ಧರಣಿನಿರತರೊಂದಿಗೆ ಮಾತಾಡಿ ನ್ಯಾಯ ನೀಡಿದ್ದರೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರು ಎಂದರು.ಸುದ್ದಿಗೋಷ್ಠಿಯಲ್ಲಿ ಅದಾಂಸಾಬ ಢವಳಗಿ, ಅಶೋಕಗೌಡ ಪಾಟೀಲ, ನಜೀರ ಗುಡ್ನಾಳ, ಮುತ್ತುರಾಜ ಹಾಲಿಹಾಳ, ನಜೀರಸಾಬ ಬೀಳಗಿ, ಬಸವರಾಜ ದೇಸಾಯಿ, ಶಾಂತಗೌಡ ದೇಸಾಯಿ, ಗುರುರಾಜ ಗುಡಿಮನಿ, ಕಾಮೇಶ ಭಜಂತ್ರಿ, ಯಮನೂರಿ ಚಲವಾದಿ, ರೈತ ಮುಖಂಡ ಅರವಿಂದ ಕುಲಕರ್ಣಿ ಇತರರು ಇದ್ದರು.
-------------ಕೋಟ್.......
ರಸ್ತೆ ಅಗಲೀಕರಣದಲ್ಲಿ ನಾವು ಮನೆಗಳನ್ನು ಕಳೆದುಕೊಂಡಿದ್ದು, ನಾವು ಸ್ವಯಂ ಪ್ರೇರಿತವಾಗಿ ಧರಣಿ ಮಾಡುತ್ತಿದ್ದೇವೆ. ನಮಗೆ ಯಾರೂ ಕೂಡ ಹಣ ನೀಡಿಲ್ಲ. ನಾವು ಸಹ ಯಾರಿಗೂ ಹಣ ನೀಡಿಲ್ಲ. ನಮ್ಮ ಹೋರಾಟಕ್ಕೆ ಈ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರ ಋಣದಲ್ಲಿ ನಾವಿದ್ದೇವೆ.ಪಾವಡೆವ್ವ ಇಂಗಳಗಿ, ಶಿವಮ್ಮ ಹೊಸಮನಿ, ಹಜರತಿಬೀ ಅತ್ತಾರ, ನಿರಾಶ್ರೀತರು
---ರಸ್ತೆ ಅಗಲೀಕರಣ ವಿಷಯದಲ್ಲಿ ಶಾಸಕರು ತಪ್ಪು ನಿರ್ಣಯ ತೆಗೆದುಕೊಂಡಿದ್ದಾರೆ. ನಾವು ಬಡವರ ಧ್ವನಿಯಾಗಿ ನಿಂತಿದ್ದೇವೆ. ಈ ಹೋರಾಟಕ್ಕೆಯಾರೂ ಹಣ ನೀಡುತ್ತಿಲ್ಲ. ನಿರಾಶ್ರಿತರೇ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಬೆಂಬಲಕ್ಕೆ ನಿಂತಿದ್ದೇವೆ. ಕ್ಷೇತ್ರದಲ್ಲಿ ಶಾಸಕರು ಅಭಿವೃದ್ಧಿ ಮಾಡಲು ನಮ್ಮ ತಕರಾರಿಲ್ಲ. ದೀಪಾವಳಿ ಮುನ್ನವೇ ಶಾಸಕರು ಧರಣಿ ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡಿದ್ದರೆ ಇವರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದರು.ಡಾ.ಪ್ರಭುಗೌಡ ಲಿಂಗದಳ್ಳಿ, ಕೆಪಿಸಿಸಿ ಕಾರ್ಯದರ್ಶಿ
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))