ಹಾಸನಾಂಬೆ ಜಾತ್ರೋತ್ಸವದಲ್ಲಿ ಟಿಕೆಟ್, ಲಾಡು ಮಾರಾಟದಿಂದ ₹5.72 ಕೋಟಿ ಆದಾಯ

KannadaprabhaNewsNetwork |  
Published : Nov 04, 2026, 12:45 AM IST
3ಎಚ್ಎಸ್ಎನ್10 : ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ 5 ಲಕ್ಷ ರು. ಮೌಲ್ಯದ ಪಾಸುಗಳನ್ನು ಹಸ್ತಾಂತರಿಸಲಾಯಿತು. | Kannada Prabha

ಸಾರಾಂಶ

ಹಾಸನಾಂಬೆ ದರ್ಶನದ ವಿಚಾರದಲ್ಲಿ ಜಿಲ್ಲೆಯಲ್ಲಿ ಯಾವುದೇ ಭಿನ್ನಮತ ಅಥವಾ ಗೊಂದಲಗಳಿಲ್ಲ. ಗಣ್ಯರಿಗೆ ಆಹ್ವಾನ ನೀಡುವ ಹಾಗೂ ದರ್ಶನ ವ್ಯವಸ್ಥೆ ಕಲ್ಪಿಸುವ ವಿಚಾರದಲ್ಲಿ ಜಿಲ್ಲಾಡಳಿತ ಶಿಷ್ಟಾಚಾರ ಪಾಲಿಸುತ್ತಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೂ ಅಧಿಕಾರಿಗಳು ತೆರಳಿ ಆಹ್ವಾನ ನೀಡುವ ಸಂಬಂಧ ಮಾತುಕತೆ ನಡೆಸಿದ್ದಾರೆ. ಶಾಸಕರು, ಮಾಜಿ ಶಾಸಕರು ಹಾಗೂ ಗಣ್ಯರಿಗೆ ಸಂಬಂಧಪಟ್ಟ ತಹಸೀಲ್ದಾರ್‌ಗಳ ಮೂಲಕ ಆಹ್ವಾನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲರನ್ನೂ ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬೆ ದೇವಿಯ ದರ್ಶನಕ್ಕೆ ಈ ಬಾರಿ ಭಕ್ತರ ಮಹಾಪೂರವೇ ಹರಿದುಬರುತ್ತಿದ್ದು, ಇದುವರೆಗೆ ಸುಮಾರು 9 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದಲೇ ₹5.72 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದಾರೆ. ಮಧ್ಯರಾತ್ರಿ ೧೨ ಗಂಟೆಯಾದರೂ ಭಕ್ತರ ಪ್ರವಾಹ ಕಡಿಮೆಯಾಗುತ್ತಿಲ್ಲ. ತಣ್ಣೀರುಹಳ್ಳದ ಬಳಿ ಇರುವ ಎಸ್.ಡಿ.ಎಂ. ಕಾಲೇಜುವರೆಗೂ ಸಾಲು ಮುಟ್ಟಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರೂ ಅರ್ಚಕರು ತಾಳ್ಮೆಯಿಂದ ಪೂಜೆ ನೆರವೇರಿಸಿ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ. ಈ ಬಾರಿಯ ವ್ಯವಸ್ಥೆ ಮುಂದಿನ ದಿನಗಳಲ್ಲಿಯೂ ಸ್ಮರಣೀಯವಾಗಿ ಉಳಿಯಲಿದೆ ಎಂದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿವೆ. ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಧ್ಯಮದವರು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಗಮನಕ್ಕೆ ತರುವುದರ ಜತೆಗೆ ಉತ್ತಮ ಕಾರ್ಯಗಳನ್ನೂ ಗುರುತಿಸಿ ಪ್ರಶಂಸಿಸಿದ್ದಾರೆ. ಎಲ್ಲ ಮಾಧ್ಯಮ ಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಅರ್ಚಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಸಾಮಾನ್ಯ ಸರತಿ ಸಾಲಿನಲ್ಲಿ ದರ್ಶನ ಪಡೆಯುವ ಭಕ್ತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಪಾಸ್‌ಗಳನ್ನು ಮುದ್ರಿಸಿರಲಿಲ್ಲ. ಜಿಲ್ಲಾಡಳಿತದಿಂದ ಒಟ್ಟು ೨೦ ಸಾವಿರ ಪಾಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಪ್ರತಿದಿನ ಬೆಳಗ್ಗೆ ೬ರಿಂದ ೮ ಗಂಟೆಯವರೆಗೆ ಎರಡು ಗಂಟೆಗಳ ಕಾಲ ಪಾಸ್ ಹೊಂದಿದವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಾಸಕರು, ಲೋಕಸಭಾ ಸದಸ್ಯರು, ಸಚಿವರು ಸೇರಿ ವಿವಿಧ ಗಣ್ಯರಿಗೆ ಶಿಷ್ಟಾಚಾರದಂತೆ ಪಾಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಬೇಡಿಕೆ ಹೆಚ್ಚಾಗಿರುವುದರಿಂದ ಹೆಚ್ಚಿನ ಪಾಸ್‌ಗಳಿಗಾಗಿ ಒತ್ತಡ ಬಂದಿದೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಿಗೆ ₹5 ಲಕ್ಷ ಮೌಲ್ಯದ ಪಾಸ್‌:

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಧರ್ ಅವರು ತಮಗೆ ಪಾಸ್ ನೀಡಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ, ಅವರಿಗೆ ಪಾಸ್‌ಗಳ ಬದಲಾಗಿ ತಲಾ ₹1 ಸಾವಿರ ಮೌಲ್ಯದ ೫೦೦ ಟಿಕೆಟ್‌ಗಳನ್ನು ಖರೀದಿಸಿ ನೀಡಲಾಗಿದೆ. ಅವರು ಪಕ್ಷದ ಮುಖಂಡರಿಗೆ ಹಂಚಿಕೆ ಮಾಡಲಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಪಕ್ಷಪಾತದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿಲ್ಲ. ತಾಯಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ, ದೊರೆತಿರುವ ಅವಕಾಶವನ್ನು ಬಳಸಿಕೊಂಡು ಪ್ರಾಮಾಣಿಕವಾಗಿ ಹಾಸನಾಂಬೆ ಸೇವೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜಾತ್ರೆಗೆ ಕ್ರೀಡೋತ್ಸವದ ಮೆರುಗು:

ಹಾಸನಾಂಬೆ ಜಾತ್ರೆಯನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ ಸಾರ್ವಜನಿಕರಿಗೆ ಮನರಂಜನೆ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಒದಗಿಸುವ ಉದ್ದೇಶದಿಂದ ಈ ಬಾರಿ ಕ್ರೀಡೋತ್ಸವ ಆಯೋಜಿಸಲಾಗಿದೆ. ಅಲ್ಪಾವಧಿಯಲ್ಲಿ ಮೈದಾನವನ್ನು ಸ್ವಚ್ಛಗೊಳಿಸಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಕಬಡ್ಡಿ ಸೇರಿದಂತೆ ವಿವಿಧ ಕ್ರೀಡಾಕೂಟಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧ ಭಾಗಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ರಾಸುಗಳ ಪ್ರದರ್ಶನದಲ್ಲಿಯೂ ಉತ್ತಮ ತಳಿಯ ರಾಸುಗಳು ಭಾಗವಹಿಸಿದ್ದವು. ದೂರದ ಊರುಗಳಿಂದ ರಾಸುಗಳನ್ನು ಕರೆತಂದ ರೈತರು ಹಾಗೂ ಮಾಲೀಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲಾಡಳಿತದ ಮೂಲಕ ₹5 ಲಕ್ಷ ವೆಚ್ಚದಲ್ಲಿ ಸಮಾಧಾನಕರ ಬಹುಮಾನ ವಿತರಿಸಲಾಗಿದೆ. ಭಾಗವಹಿಸಿದವರಿಗೆ ತಲಾ ₹1 ಸಾವಿರ ನೀಡುವ ಮೂಲಕ ಎಲ್ಲರನ್ನೂ ಗೌರವಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಯಾವುದೇ ಭಿನ್ನಮತವಿಲ್ಲ:

ಹಾಸನಾಂಬೆ ದರ್ಶನದ ವಿಚಾರದಲ್ಲಿ ಜಿಲ್ಲೆಯಲ್ಲಿ ಯಾವುದೇ ಭಿನ್ನಮತ ಅಥವಾ ಗೊಂದಲಗಳಿಲ್ಲ. ಗಣ್ಯರಿಗೆ ಆಹ್ವಾನ ನೀಡುವ ಹಾಗೂ ದರ್ಶನ ವ್ಯವಸ್ಥೆ ಕಲ್ಪಿಸುವ ವಿಚಾರದಲ್ಲಿ ಜಿಲ್ಲಾಡಳಿತ ಶಿಷ್ಟಾಚಾರ ಪಾಲಿಸುತ್ತಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೂ ಅಧಿಕಾರಿಗಳು ತೆರಳಿ ಆಹ್ವಾನ ನೀಡುವ ಸಂಬಂಧ ಮಾತುಕತೆ ನಡೆಸಿದ್ದಾರೆ. ಶಾಸಕರು, ಮಾಜಿ ಶಾಸಕರು ಹಾಗೂ ಗಣ್ಯರಿಗೆ ಸಂಬಂಧಪಟ್ಟ ತಹಸೀಲ್ದಾರ್‌ಗಳ ಮೂಲಕ ಆಹ್ವಾನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲರನ್ನೂ ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಸ್ಪಷ್ಟಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌