-ಕಡೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಘಟಕಗಳ ಉದ್ಘಾಟನೆ.
ಕನ್ನಡಪ್ರಭ ವಾರ್ತೆ, ಕಡೂರುವಿದ್ಯಾಥಿಗಳಿಗೆ ಜಾಗದ ಕೊರತೆ ನೀಗಿಸುವ ಜೊತೆಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ನೂತನ ಸರಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ 5 ಎಕರೆ ಜಮೀನು ಗುರುತಿಸುವ ಕಾರ್ಯ ಆರಂಭವಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಪ್ರಕಟಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 2023-24 ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ ಮತ್ತು ಎನ್.ಎಸ್.ಎಸ್. ರೇಂಜರ್ಸ್ ಮತ್ತು ರೋವರ್ಸ್ ಹಾಗು ವಿವಿಧ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಗಳ ಜೀವನದ ಪ್ರತೀ ಹಂತದಲ್ಲಿ ಬದಲಾವಣೆ ಆಗುತ್ತದೆ. ನಾವು ಶೈಕ್ಷಣಿಕವಾಗಿ ಎಷ್ಟು ಶ್ರಮ ಹಾಕುತ್ತೇವೆ ಎಂಬುದರ ಮೇಲೆ ಭವಿಷ್ಯದ ಜೀವನ ಉಜ್ವಲವಾಗಿ ರೂಪುಗೊಳ್ಳುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಅನ್ಯ ವಿಷಯದ ಕಡೆ ಗಮನ ಹರಿಸದೆ ಓದಿನ ಕಡೆ ಗಮನ ಹರಿಸಬೇಕು ಎಂದರು.ನಮ್ಮೂರಿನ ಈ ಕಾಲೇಜು ಕುವೆಂಪು ವಿವಿಯ ಪ್ರತಿಷ್ಟಿತ ಕಾಲೇಜು ಎಂದು ಖ್ಯಾತಿ ಪಡೆದಿದೆ. ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಈ ಕಾಲೇಜು ಕಟ್ಟಡ ಕಿರಿದಾಗಿದೆ. ಆದಷ್ಟು ಬೇಗ ಸೂಕ್ತ ಸ್ಥಳದಲ್ಲಿ ಐದು ಎಕರೆ ಜಾಗ ಗುರುತಿಸಿ ಅಲ್ಲಿಗೆ ಈ ಕಾಲೇಜನ್ನು ಸ್ಥಳಾಂತರಗೊಳಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನ ಆರಂಭಿಸಿದ್ದೇನೆ. ಕಡೂರಿನ ಸ್ನಾತಕೋತ್ತರ ಕೇಂದ್ರ ದಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಲು ಗಮನ ಹರಿಸಿದ್ದೇವೆ. ಈ ಕುರಿತು ಉನ್ನತ ಶಿಕ್ಷಣ ಸಚಿವರ ಬಳಿ ಮನವರಿಕೆ ಮಾಡಿದ್ದೇನೆ. ಒಟ್ಟಾರೆ ಕಡೂರು ಅತ್ಯುತ್ತಮ ಶೈಕ್ಷಣಿಕ ಕೇಂದ್ರವಾಗಬೇಕೆಂಬ ಆಶಯ ನನ್ನದಾಗಿದೆ. ಅದನ್ನು ಸಾಕಾರ ಗೊಳಿಸುವ ಗುರಿ ನನ್ನದು ಎಂದರು.
ಸನ್ಮಾನ ಸ್ವೀಕಿರಿಸಿದ ಚಿತ್ರನಟ ಕಡೂರು ಧರ್ಮಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಸೃಜನಶೀಲತೆ ಬಹುಮುಖ್ಯ. ಇದೇ ಕಾಲೇಜಿನಲ್ಲಿ ಓದಿ ಕಲಾ ಜೀವನದಲ್ಲಿ ರಾಜ್ಯದ ಜನರ ಅಭಿಮಾನ ಗಳಿಸುತ್ತಿರುವುದು ನನಗೆ ಹೆಮ್ಮೆಯೆನಿಸುತ್ತದೆ. ತಮ್ಮ ಈ ಎಲ್ಲ ಯಶಸ್ಸಿಗೆ ಕಡೂರಿನ ಜನತೆಯ ಪ್ರೋತ್ಸಾಹ ಬಹುದೊಡ್ಡದು ಎಂದರು.ಪ್ರಾಚಾರ್ಯ ಡಾ. ಕೆ.ಎ.ರಾಜಪ್ಪ ಮಾತನಾಡಿ, ಶಾಸಕರು ಕಾಲೇಜು ಅಭಿವೃದ್ದಿಗೆ ಕಂಕಣ ತೊಡುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಆದ್ಯತೆ ನೀಡುತ್ತಿರುವುದು ಅಭಿನಂದನೀಯ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಆನಂದ್ ಕಾಲೇಜಿನ ಲಾಂಛನ ಅನಾವರಣಗೊಳಿಸಿ ಕಾಲೇಜಿನ ವೇದಾ ಸಂಚಿಕೆ ಬಿಡುಗಡೆಗೊಳಿಸಿದರು. ಮಂಡ್ಯದ ಮಹಿಳಾ ಕಾಲೇಜು ಪ್ರಾಧ್ಯಾಪಕ ಪ್ರಸನ್ನ ಕುಮಾರ್ ಉಪನ್ಯಾಸ ನೀಡಿದರು.ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಮುಗುಳಿ ಲಕ್ಷ್ಮಿದೇವಮ್ಮ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಬಾಸೂರು ಚೌಡಮ್ಮ,ಬಸವರಾಜ ಉಮ್ರಾಣಿ ಮತ್ತು ಹೆಚ್ಚು ಅಂಕಗಳಿಸಿದ ವಿದ್ಯಾಥಿಗಳನ್ನು ಗೌರವಿಸಲಾಯಿತು. ಶಾಸಕ ಆನಂದ್ ವೈಯಕ್ತಿಕವಾಗಿ ವಿದ್ಯಾಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಿದರು.
ಕಾಲೇಜಿನ ಸಾಂಸ್ಕೃತಿಕ ಸಂಚಾಲಕ ಡಾ.ಜಯಪ್ರಕಾಶ್, ಉಪನ್ಯಾಸಕರಾದ ಎಸ್ ಪಿ ಮಂಜುನಾಥ್,ಶಿವಕುಮಾರ್ , ಮಂಜುನಾಥ್ ,ಆನಂದ್ ಸೇರಿದಂತೆ ಮತ್ತಿತರರು ಇದ್ದರು.---ಬಾಕ್ಸ್ ---
ಮನುಷ್ಯನಿಗೆ ಯಾವುದೇ ರೀತಿಯ ತೊಂದರೆ ಇಲ್ಲದಿದ್ದಾಗಲೂ ಆತ್ಮ ವಿಶ್ವಾಸದ ಕೊರತೆ ಇರುತ್ತದೆ. ಪ್ರತಿಯೊಬ್ಬರಲ್ಲೂ ಪ್ರತಿಭೆಯಿರುತ್ತದೆ. ಎಲ್ಲವೂ ಇದ್ದರೂ ಮಾನಸಿಕ ಅಸ್ವಸ್ಥರಾಗಿರುವವರೇ ಅಂಗವಿಕಲರು. ಸಾಧನೆಗೆ ಧೃಢ ನಿರ್ಧಾರ ಮುಖ್ಯ ಎಂದು ಮಾನವ ಕಂಪ್ಯೂಟರ್ ಖ್ಯಾತಿಯ ಅಥಣಿಯ ಬಸವರಾಜ ಉಮ್ರಾಣಿ ಹೇಳಿದರು.ಅರ್ಧ ಗಂಟೆಗೂ ಹೆಚ್ಚು ಕಾಲ 30 ಅಂಕಿಗಳ ಗುಣಾಕಾರ, ಭಾಗಾಕಾರ, ಜೊತೆಗೆ ಜನ್ಮದಿನಾಂಕ ,ಹುಟ್ಟಿದ ವಾರ ಹೀಗೆ ಗಣಿತದ ಚಮತ್ಕಾರಗಳನ್ನು ತೋರಿಸಿ ವಿದ್ಯಾರ್ಥಿಗಳನ್ನು ಚಕಿತಗೊಳಿಸಿದ್ದು ವಿದ್ಯಾಥಿಗಳ ಕುತೂಹಲಕ್ಕೆ ಕಾರಣವಾಯಿತು.
16ಕೆಕೆಡಿಯು2.ಕಡೂರೆು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2023-24 ನೇ ಸಾಲಿನ ಕ್ರೀಡಾ,ಸಾಂಸ್ಕೃತಿಕ ಮತ್ತು ಎನ್.ಎಸ್.ಎಸ್. ರೇಂಜರ್ಸ್ ಮತ್ತು ರೋವರ್ಸ್ ಹಾಗು ವಿವಿಧ ಘಟಕಗಳನ್ನು ಉದ್ಘಾಟನಾ ಕಾಯಕ್ರಮದಲ್ಲಿ ಸಾಧನೆಗೈದವರನ್ನು ಸನ್ಮಾನಿಸಿದರು.
16ಕೆಕೆಡಿಯು2ಎ.ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2023-24 ನೇ ಸಾಲಿನ ಕ್ರೀಡಾ,ಸಾಂಸ್ಕೃತಿಕ ಮತ್ತು ಎನ್.ಎಸ್.ಎಸ್. ರೇಂಜರ್ಸ್ ಮತ್ತು ರೋವರ್ಸ್ ಹಾಗು ವಿವಿಧ ಘಟಕಗಳನ್ನು ಉದ್ಘಾಟನೆ ಕಾಯಕ್ರಮದಲ್ಲಿ ವೇದಾ ಸಂಚಿಕೆ ಬಿಡುಗಡೆ ಮಾಡಲಾಯಿತು.ಶಾಸಕ ಕೆ ಎಸ್ ಆನಂದ್ ಮತ್ತಿತರರು ಇದ್ದರು.