ಕನ್ನಡಪ್ರಭ ವಾರ್ತೆ ಉಳ್ಳಾಲ
ಶಾಕೀರ್ (28), ಅಬ್ದುಲ್ ರಜಾಕ್ (40), ಅಬೂಬಕರ್ ಸಿದ್ದಿಕ್ (35), ಸವಾದ್ (18) ಹಾಗೂ ಹಫೀಝ್(24) ಬಂಧಿತರು. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಇವರನ್ನು ಬಂಧಿಸಲಾಗಿದೆ. ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್ ಬಾರ್ ಮುಂಭಾಗದಲ್ಲಿ ಭಾನುವಾರ ತಡರಾತ್ರಿ ಚೂರಿ ಇರಿತ ಪ್ರಕರಣ ನಡೆದಿತ್ತು. ಮೋದಿ ಪದಗ್ರಹಣ ಬಳಿಕದ ವಿಜಯೋತ್ಸವದ ನಂತರ ಮೂವರು ಬಿಜೆಪಿ ಕಾರ್ಯಕರ್ತರು ಬೋಳಿಯಾರ್ ಮಸೀದಿ ಮುಂದೆ ಹೋಗುವಾಗ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಕೆಲ ಬೈಕ್‌ಗಳಲ್ಲಿ 20-25 ಮುಸ್ಲಿಂ ಯುವಕರ ತಂಡ ಅವರನ್ನು ಹಿಂಬಾಲಿಸಿಕೊಂಡು ಬಂದು ಬೋಳಿಯಾರ್ ಬಾರ್‌ಗೆ ಬಂದಿದ್ದರು. ಬಾರ್ ಬಳಿ ವಾಗ್ವಾದ ನಡೆದು ಮೂವರು ಯುವಕರನ್ನು ಥಳಿಸಿದ್ದರು. ಇವರಲ್ಲಿ ಹರೀಶ್ (41) ಹಾಗೂ ನಂದಕುಮಾರ್ (24) ಅವರಿಗೆ ಇರಿದಿದ್ದರು. ಘಟನೆ ಸಂಬಂಧ ಇನ್ನೂ ಹಲವರ ಪತ್ತೆಗಾಗಿ ಬಲೆ ಬೀಸಲಾಗಿದೆ.-------------
ಮಸೀದಿ ಎದುರು ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪದಡಿ ಸುರೇಶ್, ವಿನಯ್, ಸುಭಾಷ್, ರಂಜಿತ್ ಹಾಗೂ ಧನಂಜಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬೋಳಿಯಾರ್ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ.ಅಬ್ದುಲ್ಲ ನೀಡಿದ ದೂರಿನಡಿ ಎಫ್ಐಆರ್ ದಾಖಲಾಗಿದೆ.
ಸಿಸಿ ಟಿವಿ ದೃಶ್ಯ ಲಭ್ಯ: ಘಟನೆಗೂ ಮುನ್ನ ಬೋಳಿಯಾರು ಮಸೀದಿ ಮುಂಭಾಗ ನಡೆದ ಗಲಾಟೆ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಮಸೀದಿ ಮುಂದೆ ಸಾಗಿದ ವಿಜಯೋತ್ಸವ ಮೆರವಣಿಗೆಯಲ್ಲಿ ಘೋಷಣೆ ಕೂಗಿದ್ದಾರೆ. ಅಲ್ಲಿಂದ ಮತ್ತೆ ಮಸೀದಿ ಬಳಿ ಬೈಕ್ ನಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರು ಮಸೀದಿ ಎದುರು ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಹೇಳಿದ್ದಾರೆ.