ಜಿ. ಸೋಮಶೇಖರ
ಕೊಟ್ಟೂರು ಪಟ್ಟಣವು 32 ಸಾವಿರ ಜನಸಂಖ್ಯೆ ಹೊಂದಿದೆ. ಕುಡಿಯುವ ನೀರಿನ ಬವಣೆ ಹೇಳತೀರದಾಗಿದೆ. ಕಳೆದ 3 ತಿಂಗಳಿನಿಂದ 5 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.
ಪಟ್ಟಣಕ್ಕೆ ತುಂಗಭದ್ರಾ ಹಿನ್ನೀರಿನಿಂದ ಜಾಕ್‌ವೆಲ್ ನೀರನ್ನು ಎತ್ತಿ ಶುದ್ದೀಕರಿಸಿ ಸರಬರಾಜು ಮಾಡಲಾಗುತ್ತಿದ್ದು, ಭೀಕರ ಬರದಿಂದಾಗಿ ಹಿನ್ನೀರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಅಲ್ಲದೇ ಏರುತ್ತಿರುವ ಬಿಸಿಲಿನ ತಾಪಕ್ಕೆ ನೀರು ದಿನದಿಂದ ದಿನಕ್ಕೆ ಇಳಿಯುತ್ತಿದೆ. ಹೀಗಾಗಿ ಪಟ್ಟಣಕ್ಕೆ 5 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಅಲ್ಲದೇ ನೀರನ್ನು ಮಿತವಾಗಿ ಬಳಸಬೇಕೆಂದು ಪುರಸಭಾ ಅಧಿಕಾರಿಗಳೇ ಮನವಿ ಮಾಡುತ್ತಿದ್ದಾರೆ.ಕೈಕೊಡುವ ವಿದ್ಯುತ್: ಇದು ಪಟ್ಟಣದ ಪರಿಸ್ಥಿತಿಯಾದರೆ, ಗ್ರಾಮೀಣ ಭಾಗಗಳ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ತಾಲೂಕಿನ 14 ಗ್ರಾಮ ಪಂಚಾಯಿತಿಗಳಿವೆ. ಆದರೆ 3 ಗ್ರಾಪಂಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಆಗಾಗ ಕೈಕೊಡುವ ವಿದ್ಯುತ್ ಕೂಡ ನೀರಿನ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ಕೊಟ್ಟೂರು ಪಟ್ಟಣಕ್ಕೆ ಮಾತ್ರ ತುಂಗಭದ್ರಾ ಹಿನ್ನೀರಿನಿಂದ ಪೂರೈಕೆ ಮಾಡಲಾಗುತ್ತಿದೆ. ಆದರೆ ತಾಲೂಕಿನ ಹಳ್ಳಿಗಳಿಗೆ ಬೋರ್‌ವೆಲ್ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ.
ಅಗತ್ಯ ಸಿದ್ಧತೆ: ತಾಲೂಕು ಆಡಳಿತ ನೀರಿನ ತೊಂದರೆ ನಿವಾರಿಸಲು ಸಿದ್ಧತೆ ಕೈಗೊಂಡಿದೆ. ಶಾಸಕ ಕೆ. ನೇಮರಾಜನಾಯ್ಕ ಅವರ ಅಧ್ಯಕ್ಷತೆಯ ಟಾಸ್ಕ್‌ಪೋರ್ಸ್ ಈಗಾಗಲೇ ಎರಡು ಬಾರಿ ಸಭೆ ನಡೆಸಿದೆ. ಬರ ಮತ್ತು ನೀರಿನ ಸಮಸ್ಯೆ ನಿರ್ವಹಣೆಗೆ ₹45 ಲಕ್ಷ ಅನುದಾನವನ್ನು ಮೀಸಲಿಡುವ ತೀರ್ಮಾನ ಕೈಗೊಳ್ಳಲಾಗಿದೆ. ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಮಾಲೀಕರೊಂದಿಗೆ ಬಾಡಿಗೆ ಒಪ್ಪಂದ ಮಾಡಿಕೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ. ತುರ್ತು ಅಗತ್ಯ ಬಿದ್ದರೆ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಟಾರ್ಸ್‌ಪೋರ್ಸ್ ಸಮಿತಿ ಯೋಜನೆ ರೂಪಿಸಿದೆ.
ತಾಲೂಕಿನ ಪ್ರತಿಹಳ್ಳಿಗಳಲ್ಲಿ ಮನೆ ಮನೆಗೆ ನೀರಿನ ಅಳವಡಿಸಲು ಜಲಜೀವನ್ ಯೋಜನೆಯಲ್ಲಿ ಎಲ್ಲ ಗ್ರಾಮಗಳಲ್ಲಿ ಕೆಲಸ ಆರಂಭಿಸಿದರೂ ಕಾಮಗಾರಿ ಪೂರ್ಣಗೊಳಿಸುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಹೀಗಾಗಿ ನೀರಿನ ಸಮಸ್ಯೆ ಗ್ರಾಮಗಳ ಜನತೆಯಲ್ಲಿ ಮತ್ತಷ್ಟು ಕಾಡತೊಡಗಿದೆ.
ನೀರು ಪೂರೈಸಿ: ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರನ್ನು ಪಡೆಯಲು ಹೆಚ್ಚುವರಿ ಬೋರ್‌ವೆಲ್‌ಗಳನ್ನು ಕೊರೆಸುವತ್ತ ತಾಲೂಕು ಆಡಳಿತ ಮುಂದಾಗಬೇಕು. ಬಾಡಿಗೆ ಬೋರ್‌ವೆಲ್‌ಗಳನ್ನು ಪಡೆದು ನೀರು ಪೂರೈಸಲು ಗ್ರಾಮ ಪಂಚಾಯಿತಿ ಆಡಳಿತ ಮುಂದಾಗಬೇಕು ಎಂದು ರಾಜ್ಯ ರೈತ ಸಂಘ ಉಪಾಧ್ಯಕ್ಷ ಎನ್. ಭರಮಣ್ಣ ತಿಳಿಸಿದರು.