ಬೆಂಗಳೂರು : ರಾಜಧಾನಿಯ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಪ್ರದೇಶವಾದ ತಿಗಳರಪೇಟೆಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗೃಹೋಪಯೋಗಿ ವಸ್ತುಗಳ ವ್ಯಾಪಾರಿ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನಗೊಂಡಿರುವ ದಾರುಣ ಘಟನೆ ಶನಿವಾರ ನಸುಕಿನಲ್ಲಿ ನಡೆದಿದೆ.
ತಿಗಳರಪೇಟೆ ನಿವಾಸಿಗಳಾದ ಮದನ್ ಕುಮಾರ್ ಪುರೋಹಿತ್ (36), ಪತ್ನಿ ಸಂಗೀತಾ ದೇವಿ (34), ಮಕ್ಕಳಾದ ಮಿಥೇಶ್ (8), ವಿಹಾನ್ (5) ಹಾಗೂ ಸುರೇಶ್ (23) ಮೃತ ದುರ್ದೈವಿಗಳು. ಅದೃಷ್ಟವಾಶಾತ್ ಇದೇ ಕಟ್ಟಡದಲ್ಲಿ ನೆಲೆಸಿದ್ದ ಮತ್ತೊಂದು ವ್ಯಾಪಾರಿ ಕುಟುಂಬದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದಿದ್ದು ಹೇಗೆ?:
ಮನೆ ಕಟ್ಟಡಗಳಲ್ಲೇ ಇದ್ದ ಗೋದಾಮಿನಲ್ಲಿ ನಸುಕಿನ ಜಾವ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿ ಎರಡು ಕಟ್ಟಡಗಳಿಗೆ ಅಗ್ನಿ ಜ್ವಾಲೆಗಳು ಆವರಿಸಿವೆ. ಆ ವೇಳೆ ಕಟ್ಟಡದಲ್ಲೇ ಇದ್ದ ಮದನ್ ಕುಮಾರ್, ಅವರ ಕುಟುಂಬ ಹಾಗೂ ಅವರ ಪಕ್ಕದ ಕಟ್ಟಡದ ಗೋದಾಮಿನಲ್ಲಿ ಮಲಗಿದ್ದ ಸುರೇಶ್ ಅಗ್ನಿಗೆ ಆಹುತಿಯಾಗಿದ್ದಾರೆ. ಈ ಘಟನಾ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸತತ 15 ತಾಸು ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಿದರು.
ಮನೆಗಳೇ ಗೋದಾಮು:
ರಾಜಸ್ಥಾನ ಮೂಲದ ಮದನ್ ಕುಮಾರ್ ಬಾಲ್ಯದಲ್ಲೇ ನಗರಕ್ಕೆ ಬಂದು ಮೊದಲು ತಮ್ಮ ಸಂಬಂಧಿಕರ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯಲ್ಲಿ ಕೆಲಸಕ್ಕಿದ್ದರು. 15 ವರ್ಷಗಳ ಹಿಂದೆ ಸಂಬಂಧಿಕರ ನೆರವಿನಿಂದ ಸ್ವತಂತ್ರವಾಗಿ ವ್ಯಾಪಾರ ಶುರು ಮಾಡಿದ್ದರು. ಅಂತೆಯೇ ತಿಗಳರಪೇಟೆಯ ಮುಖ್ಯರಸ್ತೆಯಲ್ಲಿ ಮಹಾಲಕ್ಷ್ಮೀ ಹೋಂ ಅಪ್ಲೈನ್ಸಸ್ ಹೆಸರಿನಲ್ಲಿ ಅಂಗಡಿ ತೆರೆದಿದ್ದರು. ಈ ಅಂಗಡಿಯಲ್ಲಿ ಚಪಾತಿ ತಯಾರಿಸುವ ಲಟ್ಟಣಿಗೆ, ಮಣೆ ಸೇರಿ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.
ಮದನ್ ತಮ್ಮ ಅಂಗಡಿ ಸಮೀಪದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಎರಡು ಹಂತ ಬಾಡಿಗೆ ಪಡೆದು ಕುಟುಂಬದ ಜತೆ ನೆಲೆಸಿದ್ದರು. ಈ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕೆಳಹಂತದಲ್ಲಿ ಅಂಗಡಿಗಳಿದ್ದು, ಇನ್ನುಳಿದ ಅಂತಸ್ತಿನಲ್ಲಿ ಮನೆಗಳಿದ್ದವು. ಆದರೆ 1, 2ನೇ ಹಂತದಲ್ಲಿ ಮನೆಗಳನ್ನು ಗೋದಾಮು ಮಾಡಿಕೊಂಡಿದ್ದ ಮದನ್, ಅದೇ ಕಟ್ಟಡದ 3ನೇ ಹಂತದಲ್ಲಿ ನೆಲೆಸಿದ್ದರು. ನಾಲ್ಕನೇ ಹಂತದಲ್ಲಿ ಬೇರೊಬ್ಬ ವ್ಯಾಪಾರಿ ಕುಟುಂಬದ ನೆಲೆಸಿತ್ತು.
ಇದೇ ಕಟ್ಟಡಕ್ಕೆ ಅಂಟಿಕೊಂಡೇ ಪಕ್ಕದಲ್ಲಿ ಮೂರು ಅಂತಸ್ತಿನ ಕಟ್ಟಡವಿದ್ದು, ಅದರಲ್ಲೂ ಸಹ ಕೆಳಹಂತದಲ್ಲಿ ಅಂಗಡಿಗಳಿವೆ. ಇನ್ನುಳಿದ ಮೂರು ಹಂತದಲ್ಲಿ ಗೋದಾಮುಗಳಿದ್ದವು. ಇದರಲ್ಲೊಂದು ಸುರೇಶ್ ಅವರಿಗೆ ಸೇರಿತ್ತು. ತಿಗಳರಪೇಟೆಯ ಮುಖ್ಯರಸ್ತೆಯಲ್ಲಿ ‘ಶ್ರೀ ಮಂಜು ಗ್ಲಾಸ್ ಆ್ಯಂಡ್ ಕ್ರೋಕರಿ’ ಹೆಸರಿನ ಅಂಗಡಿಯನ್ನು ಸುರೇಶ್ ಕುಟುಂಬ ನಡೆಸುತ್ತಿತ್ತು. ಇದರಲ್ಲಿ ಕಪ್ಪು, ಸಾಸರ್ ಸೇರಿ ಗಾಜಿನ ವಸ್ತುಗಳನ್ನು ಅವರು ಮಾರಾಟ ಮಾಡುತ್ತಿದ್ದರು. ತಮ್ಮ ಅಂಗಡಿ ಸಮೀಪವೇ ಸುರೇಶ್ ವಾಸವಾಗಿದ್ದರು. ಅವಿವಾಹಿತರಾಗಿದ್ದ ಅವರು, ಪ್ರತಿದಿನ ರಾತ್ರಿ ಗೋದಾಮಿಗೆ ಬಂದು ಮಲಗುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಬೀಗ ಹಾಕಿದ್ದ ಮದನ್:
ಮನೆ ಕೆಳಗೆಯೇ ಗೋದಾಮಿದ್ದ ಕಾರಣ ಪ್ಯಾಕಿಂಗ್ ಕೆಲಸವನ್ನು ಮದನ್ ರಾತ್ರಿ ಮಾಡುತ್ತಿದ್ದರು. ಮನೆಯಲ್ಲಿ ರಾತ್ರಿ ಪತ್ನಿ ಹಾಗೂ ಮಕ್ಕಳು ಮಲಗಿದ ಬಳಿಕ ಬಾಗಿಲಿಗೆ ಬೀಗ ಹಾಕಿಕೊಂಡು ಗೋದಾಮಿಗೆ ಬರುತ್ತಿದ್ದರು. ಅಂತೆಯೇ ಶುಕ್ರವಾರ ರಾತ್ರಿ ಸಹ ಗೋದಾಮಿನಲ್ಲಿ ಪ್ಯಾಕಿಂಗ್ ಕೆಲಸದಲ್ಲಿ ನಿರತರಾಗಿದ್ದರು. ಆ ವೇಳೆ ನಸುಕಿನ 2.45ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಗೋದಾಮಿನಲ್ಲಿ ಬೆಂಕಿ ಕಿಡಿ ಹೊತ್ತಿಕೊಂಡಿದೆ. ಅಲ್ಲಿ ತುಂಬಿಡಲಾಗಿದ್ದ ಪ್ಲ್ಯಾಸ್ಟಿಕ್ ಹಾಗೂ ಮರದ ವಸ್ತುಗಳಿಗೆ ಕಿಡಿ ಬಿದ್ದು ಬೆಂಕಿಯ ತೀವ್ರತೆ ಹೆಚ್ಚಾಗಿದೆ.
ಬಳಿಕ ಬೆಂಕಿ ಕೆನ್ನಾಲಿಗೆ ಇಡೀ ಕಟ್ಟಡವನ್ನು ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಏನಾಯಿತು ಎಂದು ಅರಿಯುವ ವೇಳೆಗೆ ಮದನ್ ಬೆಂಕಿಗೆ ಆಹುತಿಯಾಗಿದ್ದಾರೆ. ಇತ್ತ ಬಾಗಿಲಿಗೆ ಬೀಗ ಹಾಕಿದ್ದ ಪರಿಣಾಮ ಮನೆಯಿಂದ ಹೊರಬರಲಾಗದೆ ಮದನ್ ಪತ್ನಿ ಸಂಗೀತಾ ದೇವಿ ಹಾಗೂ ಮಕ್ಕಳೂ ಬೆಂಕಿಯಲ್ಲಿ ಬೆಂದಿದ್ದಾರೆ. ಇತ್ತ ಪಕ್ಕದ ಕಟ್ಟಡಕ್ಕೂ ಅಗ್ನಿ ವ್ಯಾಪಿಸಿದೆ. ಅಲ್ಲಿನ ಗೋದಾಮಿನಲ್ಲಿ ಸಹ ಮರ ಹಾಗೂ ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಬೆಂಕಿ ತೀವ್ರತೆ ಊಹಿಸಲಾರದಷ್ಟು ಹೆಚ್ಚಾಗಿದೆ. ಈ ವೇಳೆ ಗೋದಾಮಿನಲ್ಲಿ ಮಲಗಿದ್ದ ಸುರೇಶ್ ಕೂಡ ಅಗ್ನಿಗೆ ಬಲಿಯಾಗಿದ್ದಾರೆ. ಅಷ್ಟರಲ್ಲಿ ಮದನ್ ಮನೆಯ ನಾಲ್ಕನೇ ಹಂತದಲ್ಲಿ ನೆಲೆಸಿದ್ದ ವ್ಯಾಪಾರಿ ಕುಟುಂಬದ ಐವರು ಮಹಡಿಗೆ ತೆರಳಿ ಅಲ್ಲಿಂದ ಪಕ್ಕದ ಕಟ್ಟಡಕ್ಕೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ.
ಬೆಂಕಿ ನಂದಿಸಲು ಹರಸಾಹಸ:
3.14 ಗಂಟೆಗೆ ಬೆಂಕಿ ಕಂಡು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಬೆಂಕಿ ನಂದಿಸಲು ಹರಸಾಹಸಪಟ್ಟರು. ಸತತ ಕಾರ್ಯಾಚರಣೆ ಬಳಿಕ ಸಂಪೂರ್ಣವಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.