ಆಟೋ ಚಾಲಕರ ಸಂಘಕ್ಕೆ 5 ಲಕ್ಷ ರು. ಅನುದಾನ: ರವಿಕುಮಾರ್‌

KannadaprabhaNewsNetwork | Published : Oct 22, 2023 1:00 AM

ಸಾರಾಂಶ

ಆಟೋ ಚಾಲಕರ ಸಂಘಕ್ಕೆ 5 ಲಕ್ಷ ರು. ಅನುದಾನ: ರವಿಕುಮಾರ್‌, ಸೌಹಾರ್ದತೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಲಹೆ
- ಸೌಹಾರ್ದತೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಲಹೆ - ಜಿಲ್ಲಾ ಆಟೋ ಚಾಲಕರ ಸಂವಾದ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ ಮಂಡ್ಯ ಜಿಲ್ಲಾ ಆಟೋ ಚಾಲಕರ ಸಂಘಕ್ಕೆ 5 ಲಕ್ಷ ರು. ಅನುದಾನ ನೀಡುವುದಾಗಿ ಶಾಸಕ ಪಿ.ರವಿಕುಮಾರ್‌ ಭರವಸೆ ನೀಡಿದರು. ನಗರದ ಶ್ರೀಕಾಳಿಕಾಂಬ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ಪೊಲೀಸ್‌ (ಉಪ ವಿಭಾಗ), ಜಿಲ್ಲಾ ಆಟೋ ಚಾಲಕರ ನಡುವೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕರ ಅನುದಾನದಿಂದ ನೀಡಲಾಗುವ 5 ಲಕ್ಷ ರು. ಹಣದಲ್ಲಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿಕೊಂಡು ಸಂಕಷ್ಟದಲ್ಲಿರುವ ಆಟೋ ಚಾಲಕರ ನೆರವಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಆಟೋ ಚಾಲಕರು ಪರಸ್ಪರ ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಗರದ ರಸ್ತೆಗಳನ್ನು ಡಾಂಬರೀಕರಣ ಮಾಡಿ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅ.31 ರೊಳಗೆ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಅಕ್ರಮ ತಡೆಯಬಹುದು ಎಂದರು. ಪೊಲೀಸರು ಆಟೋ ಚಾಲಕರಿಗೆ ಸ್ನೇಹಿಯಾಗಿ ಕೆಲಸ ಮಾಡಬೇಕು. ಅವರ ಪರವಾಗಿ ಪೊಲೀಸರು ಇರಬೇಕು. ಪೊಲೀಸ್‌ ಮತ್ತು ಆಟೋ ಚಾಲಕರು ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದ ರವಿಕುಮಾರ್‌, ಆಟೋ ರಿಜಿಸ್ಟ್ರೇಷನ್ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ನೋಂದಣಿಯಾಗದ ಆಟೋಗಳಿಗೆ ಯಾವುದೇ ಕಾರಣಕ್ಕೂ ಚಾಲನೆ ಮಾಡಲು ಅವಕಾಶ ನೀಡುವುದಿಲ್ಲ, ನೆಲದ ಕಾನೂನು ಗೌರವಿಸಲು ಸಹಕರಿಸಬೇಕು. ಇದರ ಜೊತೆಗೆ ಆಪೇ ಆಟೋದವರನ್ನೂ ಕರೆದು ಸಭೆ ನಡೆಸುತ್ತೇವೆ. ಅವರಿಗೂ ಸಮಸ್ಯೆ ತಿಳಿಸಿಕೊಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಆಟೋ ಚಾಲಕರ ಸಂಘದವರು ಶಾಸಕರಿಗೆ ಮನವಿ ನೀಡಿದರು. ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಶಿವಮೂರ್ತಿ, ಮಂಡ್ಯ ನಗರ ಸಿಪಿಐ ಜಾಯ್‌ ಆಂಥೋನಿ, ಸಿಪಿಐ ನವೀನ್‌ ಸುಬೇದಾರ್, ರಾಜೀವ್‌ ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಸತ್ಯನಾರಾಯಣ ಸೇರಿದಂತೆ ಆಟೋ ಚಾಲಕರು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Share this article