ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ, ಬಿಡಿಎ ಸೇರಿದಂತೆ ಬೆಂಗಳೂರಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಮಂಗಳವಾರ ಡಿ.ಕೆ. ಶಿವಕುಮಾರ್ ಸಭೆ ನಡೆಸಿದರು.
ಸಭೆಯಲ್ಲಿ ಪ್ರಮುಖವಾಗಿ ಜಿಬಿಎ ಅಡಿಯಲ್ಲಿ ರಚಿಸಲಾಗಿರುವ 5 ನಗರ ಪಾಲಿಕೆಗಳ ಚುನಾವಣೆ ಕುರಿತಂತೆ ಚರ್ಚೆ ನಡೆಸಲಾಗಿದೆ. ನಗರ ಪಾಲಿಕೆಗಳ ಚುನಾವಣೆ ಕುರಿತಂತೆ ಅ. 4ಕ್ಕೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಬೇಕಿದೆ. ಅದರಂತೆ ನವೆಂಬರ್-ಡಿಸೆಂಬರ್‌ನಲ್ಲಿ ಚುನಾವಣೆ ನಡೆಸುವ ಕುರಿತು ಅಫಿಡವಿಟ್ ಸಿದ್ಧಪಡಿಸಬೇಕು. ಜತೆಗೆ, ನವೆಂಬರ್ ತಿಂಗಳೊಳಗೆ ವಾರ್ಡ್ ಮರುರಚನೆ, ಗಡಿ ಗುರುತಿಸುವಿಕೆ, ವಾರ್ಡ್ ಮೀಸಲಾತಿ ಪಟ್ಟಿ ಸಿದ್ಧಪಡಿಸುವುದು, ಚುನಾವಣೆ ಬೇಕಾಗುವ ಉಳಿದ ಸಿದ್ಧತೆಗಳ ಕುರಿತ ಸ್ಪಷ್ಟ ಮಾಹಿತಿ ಅಫಿಡವಿಟ್‌ನಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.ಒಂದು ತಿಂಗಳಲ್ಲಿ ಎಲ್ಲ ಕಾರ್ಯ ಪೂರ್ಣ
ನಗರ ಪಾಲಿಕೆಗಳಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿದ ಕೂಡಲೇ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಲ್ಳಲಾಗುವುದು. ಆ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡ ನಂತರ, ಚುನಾವಣೆಗೆ ಸಂಬಂಧಿಸಿದಂತೆ ಇನ್ನಿತರ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಬೆಂಗಳೂರು ವ್ಯಾಪ್ತಿಯಲ್ಲಿ 24 ಲಕ್ಷ ಎ ಮತ್ತು ಬಿ ಖಾತಾ ಆಸ್ತಿಗಳಿವೆ. ಅದರಲ್ಲಿ ಈಗಾಗಲೇ 6.5 ಲಕ್ಷ ಆಸ್ತಿಗಳಿಗೆ ಇ-ಖಾತಾ ವಿತರಿಸಲಾಗಿದೆ. ಜನರಿಗೆ ಆನ್‌ಲೈನ್ ಮೂಲಕವೇ ಆಸ್ತಿ ವಿವರಗಳು ನಿಖರವಾಗಿ ದೊರೆಯುವಂತೆ ಮಾಡಬೇಕು. ಭವಿಷ್ಯದಲ್ಲಿ ಆಸ್ತಿ ವಿಚಾರವಾಗಿ ಯಾವುದೇ ತೊಂದರೆಯಾಗಬಾರದು ಎಂಬುದು ನಮ್ಮ ಚಿಂತನೆಯಾಗಿದೆ. ಆ ಕಾರಣಕ್ಕಾಗಿ ಅ. 22ರಿಂದ ನ. 1ರವರೆಗೆ ಬೃಹತ್ ಇ-ಖಾತಾ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಇವುಗಳ ನಡುವೆಯೇ ಆ. 15ರಿಂದ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಪಡೆಯಲು ಅನುಸರಿಸಬೇಕಾದ ಮಾನದಂಡಗಳನ್ನು ಬಿಡುಗಡೆ ಮಾಡಲಾಗುವುದು. ಯಾರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ, ಯಾವ ರೀತಿಯ ಅರ್ಜಿ ಸಲ್ಲಿಸಬೇಕು, ಯಾವ ಮೂಲದಿಂದ ಅರ್ಜಿ ಸಲ್ಲಿಸಬೇಕು ಎಂಬಂತಹ ವಿವರಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ವಿವಿಧ ಯೋಜನೆಗಳ ಅಡಿ ಫಲಾನುಭವಿಗಳ ಆಯ್ಕೆಗಾಗಿ 10ರಿಂದ 15 ಸಾವಿರ ಜನರಿಗೆ ಸೌಲಭ್ಯಗಳ ಹಂಚಿಕೆ ಮಾಡಲಾಗುವುದು. ಅದರಲ್ಲಿ 3,700 ಬೀದಿಬದಿ ವ್ಯಾಪಾರಿಗಳು ತಳ್ಳುವ ಗಾಡಿಗಾಗಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ಸೌಲಭ್ಯ ನೀಡಲು ನಿರ್ದೇಶಿಸಿದ್ದೇನೆ ಎಂದು ತಿಳಿಸಿದರು.