ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ 5 ಸಾವಿರ ಕ್ಯುಸೆಕ್ ನೀರು ಬಿಡುಗಡೆ

KannadaprabhaNewsNetwork | Published : Jun 23, 2025 11:47 PM

ಕೆಆರ್‌ಎಸ್ ಜಲಾನಯದ ಮೇಲ್ಬಾಗದ ಕೊಡಗು ಸೇರಿದಂತೆ ಸುತ್ತಮತ್ತಲಿನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿ, ಅಣೆಕಟ್ಟೆಗೆ ಹೆಚ್ಚಿನ ಒಳ ಹರಿವು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆ ಭದ್ರತಾ ದೃಷ್ಟಿಯಿಂದ ಅಣೆಕಟ್ಟೆಯ 2 ಗೇಟ್‌ಗಳ ಮೂಲಕ 5 ಸಾವಿರ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಹರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಜಲಾನಯದ ಮೇಲ್ಬಾಗದ ಕೊಡಗು ಸೇರಿದಂತೆ ಸುತ್ತಮತ್ತಲಿನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿ, ಅಣೆಕಟ್ಟೆಗೆ ಹೆಚ್ಚಿನ ಒಳ ಹರಿವು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆ ಭದ್ರತಾ ದೃಷ್ಟಿಯಿಂದ ಅಣೆಕಟ್ಟೆಯ 2 ಗೇಟ್‌ಗಳ ಮೂಲಕ 5 ಸಾವಿರ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಹರಿಸಲಾಗಿದೆ.

ಸೋಮವಾರ ಸಂಜೆ ವೇಳೆ ಕೆಆರ್‌ಸಾಗರ ಅಣೆಕಟ್ಟೆಗೆ 120.80 ಅಡಿಗೆ ತಲುಪಿದ್ದು, 13,856 ಸಾವಿರ ಕ್ಯುಸೆಕ್ ಒಳಹರಿವು ಇದ್ದು, ಇನ್ನು ಹೆಚ್ಚಿನ ಒಳಹರಿವು ಬರುವ ಸೂಚನೆಯಲ್ಲಿ ಕೆಆರ್‌ಎಸ್ ಅಣೆಕಟ್ಟೆಯಿಂದ 106 ಮಟ್ಟದ 2 ಗೇಟುಗಳ ಮೂಲಕ 5 ಸಾವಿರ ಕ್ಯುಸೆಕ್ ನೀರನ್ನು ನದಿ ಪಾತ್ರಕೆ ಬಿಡಲಾಗಿದೆ.

ಕೆ.ಆರ್.ಸಾಗರ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟಿಯಿಂದ 5 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗಿದೆ. ಪ್ರಸ್ತುತ ಅಣೆಕಟ್ಟೆಯಿಂದ ನದಿಗೆ ಮತ್ತು ನಾಲೆಗಳಿಗೆ ಸೇರಿ ಹೊರಹರಿವು 6 ಸಾವಿರ ಕ್ಯುಸೆಕ್ ಇದ್ದು, 43.298 ಟಿ.ಎಂ.ಸಿ ನೀರಿನ ಸಂಗ್ರಹವಿದೆ.

ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 87.62 ಅಡಿ, ಒಳಹರಿವು 1214 ಕ್ಯುಸೆಕ್, ಹೊರಹರಿವು 983 ಕ್ಯೂಸೆಕ್ ದಾಖಲಾಗಿತ್ತು.

ಎಚ್ಚರಿಕೆ ವಹಿಸಲು ಸೂಚನೆ

ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಂಬಾಡಿ ಜಲಾಶಯದ ಗರಿಷ್ಠ ನೀರಿನ ಮಟ್ಟವು 120.80 ಅಡಿಗಳಾಗಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದ್ದು, ಜಲಾಶಯದ ಭದ್ರತೆ ದೃಷ್ಟಿಯಿಂದ ನದಿಗೆ 5 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.

ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರ, ನದಿ ದಂಡೆ ಮತ್ತು ನದಿಯ ಆಸುಪಾಸಿನಲ್ಲಿ ವಾಸಿಸುವ ಎಲ್ಲಾ ಗ್ರಾಮಸ್ಥರು, ಸ್ಥಳೀಯ ವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇ ತೆರಳಲು ವಿನಂತಿಸಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಕೃಷ್ಣರಾಜಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನೆಗಳ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 120.80 ಅಡಿ

ಒಳ ಹರಿವು – 13,856 ಕ್ಯುಸೆಕ್

ಹೊರ ಹರಿವು – 1965 ಕ್ಯುಸೆಕ್

ನೀರಿನ ಸಂಗ್ರಹ – 43.298 ಟಿಎಂಸಿ