ಚಿತ್ರದುರ್ಗ: ಚಿತ್ರದುರ್ಗ ನಗರದ ಅಭಿವೃದ್ಧಿಗೆ 50 ಕೋಟಿ ರು. ಅನುದಾನ ನೀಡುವಂತೆ ಪೌರಾಡಳಿತ ಸಚಿವರಿಗೆ ಪತ್ರ ಬರೆದಿರುವುದಾಗಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
15ನೇ ಹಣಕಾಸು ಹಾಗೂ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ನಗರದ ಕಸ ವಿಲೇವಾರಿಗಾಗಿ 95.50 ಲಕ್ಷ ರು. ವೆಚ್ಚದಲ್ಲಿ 9 ವಾಹನಗಳನ್ನು ಸಚಿವರು ಮಂಜೂರು ಮಾಡಿದ್ದು, ಇವುಗಳಿಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ 12 ಹೊಸ ಕಸ ವಿಲೇವಾರಿ ವಾಹನಗಳನ್ನು ನೀಡುವ ಭರವಸೆ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿ ರು. ಅನುದಾನ ನೀಡಿದ್ದರು. ಇದರಲ್ಲಿ 7.19 ಕೋಟಿ ರು.ಗಳನ್ನು ನಗರದ ಅಭಿವೃದ್ಧಿಗಾಗಿ ಮೀಸಲು ಇರಿಸಲಾಗಿದೆ. ಯಾವುದೇ ತಾರತಮ್ಯ ಮಾಡದೆ ನಗರ ವ್ಯಾಪ್ತಿಯ ಪ್ರತಿ ವಾರ್ಡ್‍ಗಳಿಗೂ 30.95 ಲಕ್ಷ ರು. ಅನುದಾನ ನೀಡಲಾಗಿದೆ. ಇದರಲ್ಲಿ ಸಿಸಿ ರಸ್ತೆ, ಒಳಚರಂಡಿ, ಹೈಮಾಸ್ಟ್ ದೀಪ, ಉದ್ಯಾನವನ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು. ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.ಎಂಬಿಬಿಎಸ್ ಹಾಗೂ ಬಿಇ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಾಜ್ಯ ಹಣಕಾಸು ಆಯೋಗ ಹಾಗೂ ನಗರಸಭೆಯ ಅನುದಾನದಲ್ಲಿ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಂಬಿಬಿಎಸ್ ವಿದ್ಯಾರ್ಥಿಗಳು ವಿದ್ಯಾಭ್ಯಾಸ ತರುವಾಯ ವೈದ್ಯ ವೃತ್ತಿಯಲ್ಲಿ ಬಡವರ ಸೇವೆ ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷೆ ಸುಮಿತಾ.ಬಿ.ಎಸ್, ಉಪಾಧ್ಯಕ್ಷೆ ಶ್ರೀದೇವಿ.ಜಿ.ಎಸ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ, ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ನಗರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.