ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ೫೦ನೇ ಜನ್ಮದಿನದ ಅಂಗವಾಗಿ ವರ್ಷವಿಡೀ ಆಯೋಜಿಸಲು ಉದ್ದೇಶಿಸಿರುವ ಸಮಾಜೋಪಯೋಗಿ ಕಾರ್ಯಕ್ರಮಗಳಡಿ ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ೧೮೦ ಜನರನ್ನು ತಪಾಸಣೆಗೆ ಒಳಪಡಿಸಿ, ೫೦ ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.ಶಿಬಿರ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಯಾಸೀರಖಾನ್ ಪಠಾಣ ಮಾತನಾಡಿ, ಶಾಸಕ ಶ್ರೀನಿವಾಸ ಮಾನೆ ಅವರೊಬ್ಬ ಬಡವರ ಬಗ್ಗೆ ಸದಾ ಚಿಂತಿಸುವ ನೇತಾರ. ಅವರ ೫೦ನೇ ಜನ್ಮದಿನವನ್ನು ವರ್ಷವಿಡೀ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಉದ್ಯೋಗ ಮೇಳ, ಸಸಿ ನಾಟಿ ಇನ್ನಿತರ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಪ್ರಮುಖ ಈ ಮೂರು ಕ್ಷೇತ್ರಗಳಲ್ಲಿ ವಿಶೇಷ ಒತ್ತು ನೀಡಿ ಶಾಸಕ ಮಾನೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ಶಿಬಿರದ ಸಂಯೋಜಕ ಗಿರೀಶ ಧಾರೇಶ್ವರ ಮಾತನಾಡಿ, ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯಿಂದ ಕಣ್ಣುಗಳು ಬಹುಬೇಗ ಹಾಳಾಗುತ್ತಿದ್ದು, ಕಣ್ಣುಗಳ ಸುರಕ್ಷತೆಗೆ ಕಾಳಜಿ ಬೇಕಿದೆ. ಶಿಬಿರದಲ್ಲಿ ಆಯ್ಕೆಯಾಗುವರಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗುವುದು ಎಂದರು. ನೇತ್ರ ತಜ್ಞ ಡಾ.ಆದಿತ್ಯ ಪಡ್ನಿಸ್, ವೈದ್ಯಾಧಿಕಾರಿ ಡಾ. ವಿಶಾಲಕುಮಾರ, ಕೆಡಿಪಿ ಸದಸ್ಯ ಮಹ್ಮದ್‌ಹನೀಫ್ ಬಂಕಾಪೂರ, ಮುಖಂಡರಾದ ಚನ್ನಬಸಪ್ಪ ಬಿದರಗಡ್ಡಿ, ರಾಜೂ ಬೇಂದ್ರೆ, ಚನ್ನವೀರಗೌಡ ಪಾಟೀಲ, ಪುಷ್ಪಾ ಪಾಟೀಲ, ನಾಗರಾಜ ಮಲ್ಲಮ್ಮನವರ, ಬಸಲಿಂಗಯ್ಯ ಹಿರೇಮಠ, ರಸೂಲ್ ವಾಗಿಕೊಪ್ಪ, ಪತಂಗ ಮಕಾನದಾರ, ಲಕ್ಷ್ಮೀ ಕಲಾಲ, ಪದ್ಮಾ ಬೇಂದ್ರೆ, ಅರುಣ ಮಲ್ಲಮ್ಮನವರ, ಮಲ್ಲೇಶಪ್ಪ ಕ್ಷೌರದ, ಶಂಭಣ್ಣ ಕ್ಯಾಲಕೊಂಡ ಸೇರಿದಂತೆ ಗ್ರಾಪಂ ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಶಿರಸಿಯ ರೋಟರಿ ಚಾರಿಟೇಬಲ್ ಆಸ್ಪತ್ರೆ ಹಾಗೂ ಟೀಂ ಆಪತ್ಬಾಂಧವ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು.