ದಲಿತ ಸಂಘರ್ಷ ಸಮಿತಿಗೆ ೫೦ ವರ್ಷ. ೨೫ ರಂದು ಬೃಹತ್ ಸಮಾವೇಶ

KannadaprabhaNewsNetwork | Published : Jan 16, 2024 1:46 AM

ಸಾರಾಂಶ

ದಲಿತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ನ್ಯಾಯವನ್ನು ಒದಗಿಸುವ ಸಲುವಾಗಿ ಸ್ಥಾಪಿತಗೊಂಡಿರುವ ದಲಿತ ಸಂಘರ್ಷ ಸಮಿತಿ ಪ್ರಾರಂಭಗೊಂಡು ೫೦ ವರ್ಷಗಳು ಆಗುತ್ತಿರುವ ಈ ಸಂಧರ್ಭದಲ್ಲಿ ಜ. ೨೫ರಂದು ತುಮಕೂರು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಕುಂದೂರು ತಿಮ್ಮಯ್ಯ ಹೇಳಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ದಲಿತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ನ್ಯಾಯವನ್ನು ಒದಗಿಸುವ ಸಲುವಾಗಿ ಸ್ಥಾಪಿತಗೊಂಡಿರುವ ದಲಿತ ಸಂಘರ್ಷ ಸಮಿತಿ ಪ್ರಾರಂಭಗೊಂಡು ೫೦ ವರ್ಷಗಳು ಆಗುತ್ತಿರುವ ಈ ಸಂಧರ್ಭದಲ್ಲಿ ಜ. ೨೫ರಂದು ತುಮಕೂರು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಕುಂದೂರು ತಿಮ್ಮಯ್ಯ ಹೇಳಿದರು.

ಪಟ್ಟಣದ ಅದಿಜಾಂಬವ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾಗಿರುವ ತಾಲೂಕು ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ವಿತರಣೆ ಮಾಡಿ ಮಾತನಾಡಿ, ದಲಿತ ಸಂಘರ್ಷ ಸಮಿತಿ ಹತ್ತಾರು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದೆ. ದಲಿತ ಸಂಘರ್ಷ ಸಮಿತಿ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ದುರ್ಬಲ ವರ್ಗದ ಶೋಷಣೆಗೆ ಒಳಪಟ್ಟಿರುವ ಎಲ್ಲ ಜಾತಿಯ ಪರವಾಗಿ ಹೋರಾಟ ಮಾಡುತ್ತಿದೆ. ೫೦ ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಲೇ ಬಂದಿರುವ ದಲಿತ ಸಂಘರ್ಷ ಸಮಿತಿ ಹುಟ್ಟಿ ೫೦ ವರ್ಷಗಳು ಸಂದಿರುವ ಈ ಶುಭ ಸಂಧರ್ಭದಲ್ಲಿ ರಾಜ್ಯಾದ್ಯಂತ ಸಮಾವೇಶಗಳು ನಡೆಯಲಿವೆ. ಅಂತೆಯೇ ಪ್ರತಿ ಜಿಲ್ಲೆಯಲ್ಲೂ ಸಮಾವೇಶಗಳು ಜರುಗಲಿವೆ ಎಂದು ಕುಂದೂರು ತಿಮ್ಮಯ್ಯ ಹೇಳಿದರು.ಜನವರಿ 25ರಂದು ಜಿಲ್ಲೆಯಲ್ಲಿ ಸಮಾವೇಶ: ಜನವರಿ ೨೫ ರಂದು ಜಿಲ್ಲೆಯ ಸಮಾವೇಶ ನಡೆಯಲಿದೆ. ಅಂದು ಪ್ರತಿ ತಾಲೂಕಿನಿಂದ ಒಂದು ಸಾವಿರ ಕಾರ್ಯಕರ್ತರು ಆ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಕನಿಷ್ಠ ೧೦ ಸಾವಿರ ಕಾರ್ಯಕರ್ತರೊಂದಿಗೆ ಬೃಹತ್ ಸಮಾವೇಶ ನಡೆಯಲಿದೆ ಎಂದರು. ದಲಿತ ಸಂಘರ್ಷ ಸಮಿತಿ ಹೆಸರು ದುರ್ಬಳಕೆ:ಇತ್ತಿಚೆಗೆ ದಲಿತ ಸಂಘರ್ಷ ಸಮಿತಿಯಲ್ಲಿ ಕೆಲವು ಮಂದಿ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ದಲಿತ ಸಂಘಟನೆಯಲ್ಲಿ ಸ್ವಹಿತಾಸಕ್ತಿಗೆ ಅವಕಾಶ ಇಲ್ಲದ ಕಾರಣ ಕೆಲವು ಮುಖಂಡರುಗಳು ದಲಿತ ಸಂಘರ್ಷ ಸಮಿತಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂತವರ ಬಗ್ಗೆ ಪದಾಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ. ಗುಬ್ಬಿ ತಾಲೂಕಿನಲ್ಲಿ ದಲಿತ ಸಂಘರ್ಷ ಸಮಿತಿಯ ನೋಂದಣಿ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಾಲಾಗಿತ್ತು. ಅಂತಿಮವಾಗಿ ಅವರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಮುಂದೆ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯನ್ನು ದುರ್ಬಳಕೆ ಮಾಡದಂತೆ ಎಚ್ಚರಿಕೆ ನೀಡಲಾಯಿತು. ಹಾಗೇಯೇ ತುರುವೇಕೆರೆ ತಾಲೂಕಿನಲ್ಲೂ ಸಹ ಕೆಲವರು ಅಧಿಕೃತವಾದ ನಮ್ಮ ದಲಿತ ಸಂಘರ್ಷ ಸಮಿತಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ. ಇಂತಹ ಪ್ರಸಂಗ ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕುಂದೂರು ತಿಮ್ಮಯ್ಯ ಎಚ್ಚರಿಕೆ ನೀಡಿದರು.

ಈ ಹಿಂದೆ ರಾಜ್ಯಾದ್ಯಂತ ಎಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿತ್ತು. ಆ ಸಂಧರ್ಭದಲ್ಲಿ ತಾಲೂಕಿನ ವ್ಯಕ್ತಿಯೋರ್ವರು ರಾಜ್ಯಾಧ್ಯಕ್ಷರಿಂದ ನೇಮಕ ಪತ್ರ ತಂದಿದ್ದರು. ಈಗ ಅದನ್ನೇ ನಿಜ ಆದೇಶ ಪತ್ರವೆಂದು ಜನರನ್ನು ನಂಬಿಸುತ್ತಿದ್ದಾರೆ. ಆ ಪತ್ರ ನಗಣ್ಯವಾಗಿದೆ. ಈಗ ಜಿಲ್ಲಾಧ್ಯಕ್ಷರಾಗಿರುವ ತಾವು ರಚಿಸಿರುವ ಸಮಿತಿಯೆ ಅಧಿಕೃತವಾದ ಸಂಘಟನೆಯಾಗಿದ್ದು, ತಾಲೂಕಿನ ಜನತೆ ಈ ಸಂಘಟನೆಗೆ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.

ತಾಲೂಕು ದಲಿತ ಸಂಘರ್ಷ ಪದಾಧಿಕಾರಿಗಳ ನೇಮಕ:

ತಾಲೂಕು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ತಾಲೂಕು ಸಂಚಾಲಕರಾಗಿ ಬಾಣಸಂದ್ರ ಕೃಷ್ಣಸ್ವಾಮಿ, ಸಂಘಟನಾ ಕಾರ್ಯದರ್ಶಿಯಾಗಿ ರೋಹಿತ್, ನಗರ ಸಂಚಾಲಕರಾಗಿ ಬಡಾವಣೆ ಶಿವರಾಜು, ಮಹಿಳಾ ಸಂಚಾಲಕರಾಗಿ ಹರಿದಾಸನಹಳ್ಳಿ ಸಾವಿತ್ರಮ್ಮ, ಮಹಿಳಾ ಸಂಘಟನಾ ಸಂಚಾಲಕರಾಗಿ ಸೋಮಲಾಪುರ ನಂದಿನಿ, ನಗರ ಮಹಿಳಾ ಸಂಚಾಲಕರಾಗಿ ಅನ್ನಪೂರ್ಣ, ದಸಂಸ ವಿಭಾಗೀಯ ಸಂಚಾಲಕರಾಗಿ (ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ) ಮಾಯಸಂದ್ರ ಸುಬ್ರಹ್ಮಣ್ಯ, ಸಂಘಟನಾ ಸಂಚಾಲಕರಾಗಿ ಮಹೇಶ್, ಪುಟ್ಟರಾಜು, ಚನ್ನಕೇಶವ, ಕೊಂಡಜ್ಜಿ ಕ್ರಾಸ್ ಸುರೇಶ್‌ಬಾಬು, ಮಂಜು ದುಂಡಾ, ಪುಟ್ಟರಾಜು, ಶಶಿಕುಮಾರ್, ಮಹೇಶ್, ಮಂಜುನಾಥ್, ಶೇಖರ್ ಸೇರಿದಂತೆ ಇತರರನ್ನು ಆಯ್ಕೆ ಮಾಡಲಾಗಿದೆ ಎಂದು ಕುಂದೂರು ತಿಮ್ಮಯ್ಯ ಪ್ರಕಟಿಸಿದರು.

Share this article