ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜಾತಿ, ಮತ ಬೇದವಿಲ್ಲದೆ ನಾಡಿನ ಕನ್ನಡಿಗರು ಒಂದೇ ಎಂಬ ಭಾವನೆ ಮೂಡಲು ಈ ಸುವರ್ಣ ಸಂಭ್ರಮದ 50ನೇ ವರ್ಷಕ್ಕೆ ಕಾಲಿರಿಸಿದ್ದೇವೆ ಎಂದು ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಹೇಳಿದರು.ತಾಲೂಕಿನ ಗಡಿಭಾಗ ದರಸಗುಪ್ಪೆ ಗ್ರಾಮಕ್ಕೆ ಕರ್ನಾಟಕ ಸಂಭ್ರಮ 50ರ ಅಂಗವಾಗಿ ಸಂಚರಿಸುತ್ತಿರುವ ಜ್ಯೋತಿ ರಥಯಾತ್ರೆಯನ್ನು ತಾಲೂಕು ಆಡಳಿತದ ಜೊತೆಗೂಡಿ ಸ್ವಾಗತಿಸಿ ಮಾತನಾಡಿದರು.
ಈ ಹಿಂದೆ ಮೈಸೂರು ಸಂಸ್ಥಾನ ಅಥವಾ ಮೈಸೂರು ರಾಜ್ಯ ಎಂಬ ಹೆಸರಿನಿಂದ ಕರ್ನಾಟಕವನ್ನು ಕರೆಯಲಾಗುತ್ತಿತ್ತು. 1974ರ ಸಮಯದಲ್ಲಿ ಕರ್ನಾಟಕ ಎಂಬ ನಾಮಕರಣವಾಗಿತ್ತು. ಇದಕ್ಕೆ ರಾಜ್ಯದ ಹಿರಿಯ ಸಾಹಿತಿ ಕುವೇಂಪು ಸೇರಿದಂತೆ ಇತರರು ಕರ್ನಾಟಕ ಎಂದು ಹೆಸರು ಬರಲು ಕಾರಣ ಕರ್ತರಾಗಿದ್ದಾರೆ ಎಂದರು.50ರ ಸಂಭ್ರಮದಲ್ಲಿ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೂಡ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸುದೈವ ಎನ್ನಬಹುದು. ನಾವೆಲ್ಲರೂ ಒಟ್ಟಾಗಿ ಜಾತಿ, ಮತ ಬೇದವಿಲ್ಲದೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಘೋಷಣೆಯೊಂದಿಗೆ ಈ ಬಾರಿ ಸಮ್ಮೇಳನ್ನು ಅದ್ಧೂರಿಯಾಗಿ ಆಚರಣೆ ಮಾಡೋಣ ಎಲ್ಲರೂ ಸಹಕಾರ ನೀಡಲು ಮನವಿ ಮಾಡಿದರು.
ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ರಥಯಾತ್ರೆ ಸ್ವಾಗತಿಸಿ ಮಾತನಾಡಿ, ಪಾಂಡವಪುರದಿಂದ ಶ್ರೀರಂಗಪಟ್ಟಣಕ್ಕೆ ರಥಯಾತ್ರೆ ಆಗಮಿಸಿದ್ದು, ತಾಲೂಕು ಆಡಳಿತ ಇದಕ್ಕೆ ಜೊತೆಯಲ್ಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಹಲವು ಸಂಘ ಸಂಸ್ಥೆಗಳು ಜೊತೆಯಲ್ಲಿವೆ. ಇಲ್ಲಿಂದ ಹೊರಟ ರಥಯಾತ್ರೆ ಕಿರಂಗೂರು ಬನ್ನಿ ಮಂಟಪದಲ್ಲಿ ಪೂಜೆ ನಂತರ ಪಟ್ಟಣ ಪುರಸಭೆ ಆಡಳಿತ ಮಂಡಳಿಯಿಂದ ಗೌರವ ಸಮರ್ಪಣೆ ನಡೆದಿದೆ ಎಂದರು.ಶ್ರೀರಂಗನಾಥ ದೇವಾಲಯದಲ್ಲಿ ವಿಶೇಷ ಪೂಜೆಯ ನಂತರ ಬಾಬುರಾಯನಕೊಪ್ಪಲು ಮಾರ್ಗವಾಗಿ ಶ್ರೀನಿವಾಸ ಆಗ್ರಹಾರ, ಅರಕೆರೆ ಆನಂತರ ಕೊಡಿಯಾಲದಲ್ಲಿ ಮೆರವಣಿಗೆ ನಡೆದು ಈ ದಿನ ಉಳಿದುಕೊಳ್ಳಲಿದೆ. ಕೊತ್ತತ್ತಿ ಮಾರ್ಗವಾಗಿ ಆ.23ರ ಬೆಳಗ್ಗೆ ಮಂಡ್ಯಕ್ಕೆ ಬೀಳ್ಕೊಡಿಗೆ ನೀಡಲಾಗುತ್ತದೆ. ಕನ್ನಡ ಅಭಿಮಾನಿಗಳು ರಥಯಾತ್ರೆಯ ಜೊತೆ ಸಹಕರಿಸುವಂತೆ ಕೋರಿದರು.
ಈ ವೇಳೆ ಕಸಾಪ ತಾಲೂಕು ಅಧ್ಯಕ್ಷ ಎಂ.ಬಿ.ಕುಮಾರ್ ರಥಯಾತ್ರೆಯ ನೇತೃತ್ವದಲ್ಲಿದ್ದರು. ಪಾಂಡವಪುರ ತಹಸೀಲ್ದಾರ್ ಸಂತೋಷ್, ತಾಪಂ ಇಒ ವೇಣು, ಬಿಇಒ ಆರ್.ಪಿ.ಮಹೇಶ್, ಪುರಸಭೆ ಮುಖ್ಯಾದಿಕಾರಿ ರಾಜಣ್ಣ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪ್ರಾಣೇಶ್, ದರಸಗುಪ್ಪೆ ಗ್ರಾಪಂ ಅಧ್ಯಕ್ಷೆ ರಜಿನಿ ವಿಶ್ವನಾಥ್, ನಿಕಟ ಪೂರ್ವ ಕಸಾಪ ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್, ಪುರುಷೋತ್ತಮ ಚಿಕ್ಕಪಾಳ್ಯ, ಪರಿಷತ್ತಿನ ನಗರಾಧ್ಯಕ್ಷೆ ಸರಸ್ವತಿ, ಕೆ.ಶೆಟ್ಟಹಳ್ಳಿ ಹೋಬಳಿ ಅಧ್ಯಕ್ಷ ಲೋಕೇಶ್, ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗು, ಎಂ.ಸುರೇಶ್, ಖಜಾಂಚಿ ಬಸವರಾಜು, ಜಿಲ್ಲಾ ಕಾರ್ಯದರ್ಶಿ ದರಸಗುಪ್ಪೆ ದನಂಜಯ, ಸಿ. ಸ್ವಾಮಿಗೌಡ, ಉಪಾಧ್ಯಕ್ಷ ಗಂಜಾಂ ಮಂಜು, ಕಸಬ ಹೋಬಳಿ ಅಧ್ಯಕ್ಷ ಚಂದಗಾಲು ಶಂಕರ್, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್‌ಬಾಬು, ಮರಿಸ್ವಾಮಿಗೌಡ, ಗೋಪಾಲಗೌಡ ಸೇರಿದಂತೆ ಇತರ ತಾಲೂಕು ಮಟ್ಟದ ಅಧಿಕಾರಿಗಳು, ಪರಿಷತ್ತಿನ ಪದಾಧಿಕಾರಿಗಳು, ಗ್ರಾಪಂ ಪಂಚಾಯ್ತಿ ಸಿಬ್ಬಂದಿ ಹಾಜರಿದ್ದರು.