ನೂರಾರು ಜನ ಕಬ್ಬು ಬೆಳೆಗಾರರಿಂದ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ
ಮುಂಡರಗಿ: ತಾಲೂಕಿನಲ್ಲಿ ಇದೀಗ ಬರಗಾಲ ಬಿದ್ದಿದ್ದು, ಕಬ್ಬಿನ ಇಳುವರಿ ಕಡಿಮೆಯಾಗಿದೆ. ವಿದ್ಯುತ್ ಸಹ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಇಲ್ಲಿನ ವಿಜಯನಗರ ಸಕ್ಕರೆ ಕಾರ್ಖಾನೆಯವರು ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದ ಜತೆಗೆ ಪ್ರತಿ ಟನ್ ಕಬ್ಬಿಗೆ 500 ಹೆಚ್ಚುವರಿಯಾಗಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶನಿವಾರ ಸಕ್ಕರೆ ಕಾರ್ಖಾನೆ ಎದುರಿನಲ್ಲಿ ನೂರಾರು ಜನ ಕಬ್ಬು ಬೆಳೆಗಾರ ರೈತರು ಬೃಹತ್ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, 2023-24ನೇ ಸಾಲಿನ ಕೇಂದ್ರ ಸರಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರದ ಪ್ರಕಾರ10.25 ರಿಕವರಿ ಗೆ 3150 ರು.ಗಳನ್ನು ನಿಗದಿ ಮಾಡಿದ್ದು, ವಿಜಯನಗರ ಸಕ್ಕರೆ ಕಾರ್ಖಾನೆ ಇಲ್ಲಿನ ರೈತರು ಬೆಳೆದ ಕಬ್ಬಿಗೆ 9.78 ರಿಕವರಿ ಕೊಟ್ಟಿದ್ದು, ಒಂದು ಟನ್ ಕಬ್ಬಿಗೆ 3006 ರು.ಗಳನ್ನು ಇಲ್ಲಿನ ರೈತರಿಗೆ ನಿಗದಿ ಮಾಡಿದೆ. ಸಕ್ಕರೆ ಕಾರ್ಖಾನೆಯು ರಿಕವರಿಯಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಹೇಳಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚೆಯಾಗಿದೆ. ಈ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ರೈತರ ಕಬ್ಬಿನ ಹೊಲದಲ್ಲಿಯೇ ರಿಕವರಿಯನ್ನು ಚೆಕ್ ಮಾಡಿ, ರೈತರ ಹೊಲದಲ್ಲಿಯೇ ಅವರು ಬೆಳೆದ ಕಬ್ಬಿಗೆ ದರ ನಿಗದಿಪಡಿಸುವಂತೆ ಜಿಲ್ಲೆಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ರೈತರಿಗೆ ಹೆಚ್ಚುವರಿಯಾಗಿ ಪ್ರತಿ ಟನ್ ಕಬ್ಬಿಗೆ 500 ರು.ಗಳನ್ನು ನಿಗದಿಗೊಳಿಸುವಂತೆ ಒತ್ತಾಯಿಸಿದರು.
ಜತೆಗೆ ಕಬ್ಬು ಕಟಾವ್ ಮಾಡುವ ಸಂದರ್ಭದಲ್ಲಿ ರೈತರಿಂದ ಕಟಾವ್‌ದಾರರು 50 ರು.ಗಳಿಂದ 500 ರು.ಗಳವರೆಗೆ ಖುಷಿಗೆ ಕೊಡಬೇಕಾಗಿದೆ. ಇದು ತಪ್ಪಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಕ್ಕರೆ ಕಾರ್ಖಾನೆಯ ಎಜಿಎಂ ಮಂಜುನಾಥ, ಮುಂಡರಗಿ ತಹಸೀಲ್ದಾರ್ ಧನಂಜಯ ಮಾಲಗತ್ತಿ ಮತ್ತು ಸಿಪಿಐ ಮಂಜುನಾಥ ಕುಸುಗಲ್ ಸಮ್ಮುಖದಲ್ಲಿ ಮಾತುಕತೆ ನಡೆಯಿತು. ಕಾರ್ಖಾನೆಯಿಂದ ಪ್ರತಿ ಟನ್‌ಗೆ 50 ರು.ಗಳನ್ನು ಮಾತ್ರ ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇದಕ್ಕೆ ರೈತರು ಒಪ್ಪಲಿಲ್ಲ. ಕೊನೆ ಪಕ್ಷ ಪ್ರತಿ ಟನ್‌ಗೆ 150 ರು.ಗಳನ್ನಾದರೂ ಕೊಡಲು ರೈತರು ಪಟ್ಟು ಹಿಡಿದರು. ನಂತರ ಕಾರ್ಖಾನೆಯ ಹಣಕಾಸು ಇಲಾಖೆಯ ಧರ್ಮೇಂದ್ರ ಅವರು ಸ್ಥಳೀಯವಾಗಿ ಇರದ ಕಾರಣ ರೈತರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕಾರ್ಖಾನೆಯ ಕೆಲವು ಸಮಸ್ಯೆಗಳನ್ನು ರೈತರ ಗಮನಕ್ಕೆ ತಂದರು. ಮೊದಲಿನಂತೆ ವಿದ್ಯುತ್‌ನ್ನು ಹೊರಗಡೆ ಕೊಡದೆ, ಬರಗಾಲದ ಕಾರಣದಿಂದಾಗಿ ರಾಜ್ಯ ಸರಕಾರಕ್ಕೆ ನಿಗದಿತ ದರದಲ್ಲಿ ವಿದ್ಯುತ್ ಕಡ್ಡಾಯವಾಗಿ ಪೂರೈಸಬೇಕಾಗಿದೆ. ಹೀಗಾಗಿ ರೈತರಿಗೆ ಹೆಚ್ಚುವರಿಯಾಗಿ ಹಣ ನಿಗದಿ ಮಾಡಲು ಆರ್ಥಿಕ ತೊಂದರೆಯಾಗುತ್ತಿದೆ ಎಂದು ತಿಳಿಸಿ ಈ ಬಗ್ಗೆ ತಾವು ತಕ್ಷಣವೇ ಎಂಡಿ ಅವರ ಜತೆಗೆ ಚರ್ಚಿಸಿ ತಿಳಿಸಲಾಗುವದು ಎಂದರು. ಇದಕ್ಕೆ ಒಪ್ಪದ ರೈತರು, ಹೆಚ್ಚುವರಿ ಹಣ ನಿಗದಿ ಮಾಡುವವರೆಗೂ ಕಾರ್ಖಾನೆ ಆರಂಭಗೊಳ್ಳಲು ಬಿಡಸುವದಿಲ್ಲ ಎಂದು ಪಟ್ಟು ಹಿಡಿದರು. ನಂತರ ಎಜಿಎಂ ಮಂಜುನಾಥ ಹಾಗೂ ಹಣಕಾಸು ವಿಭಾಗದ ಧಮೇಂದ್ರ ಅವರು ಎಂಡಿ ಜತೆಗೆ ಮಾತನಾಡಿ, ರೈತರ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ 100 ರು.ಗಳನ್ನು ಕೊಡುವ ಭರವಸೆ ನೀಡಿದ ಮೇಲೆ ರೈತರು ಪ್ರತಿಭಟನೆ ಹಿಂಪಡೆದುಕೊಂಡರು. ನಂತರ ಕಟಾವ್‌ದಾರರು ರೈತರಿಂದ ಹೆಚ್ಚುವರಿ ಹಣ ಪಡೆಯುವದನ್ನು ನಿಯಂತ್ರಣ ಮಾಡಲು ಶೀಘ್ರದಲ್ಲಿ ಎಜಿಎಂ ಸಭೆ ಕರೆದು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಪ್ರಯತ್ನಿಸುವ ಭರವಸೆ ನೀಡಿ, ರೈತರು ಕೂಡಾ ತಮ್ಮ ಕಬ್ಬು ಬೇಗನೆ ಕಟಾವ್ ಆಗಬೇಕು ಎಂದು ಸ್ಪರ್ಧಾ ರೀತಿಯಲ್ಲಿ ಹೆಚ್ಚುವರಿ ಹಣ ಕೊಡಲು ಮುಂದಾಗಬಾರದು. ಕಟಾವಿಗೆ ವಿಳಂಬವಾಗಿದ್ದು ಕಂಡು ಬಂದಲ್ಲಿ ಕಾರ್ಖಾನೆಯ ಅಧಿಕಾರಿಗಳ ಗಮನಕ್ಕೆ ತರಬೇಕು. ಅಂತವರ ಕಟಾವ್ ಅನುಮತಿಯನ್ನು ನಾವು ರದ್ದು ಪಡಿಸಲು ಕ್ರಮಕೈಗೊಳ್ಳುವ ಅವಕಾಶ ಇದೆ. ದಯವಿಟ್ಟು ಸಕ್ಕರೆ ಕಾರ್ಖಾನೆ ಜತೆ ರೈತರು ಸಹಕಾರ ನೀಡಬೇಕು. ಈಗಾಗಲೇ ಕಾರ್ಖಾನೆ ಆರಂಭವಾಗಲು ತಡವಾಗಿದೆ. ರೈತರು ಕಬ್ಬು ಕೂಡಾ ಒಣಗುವ ಸ್ಥಿತಿಗೆ ಬರುತ್ತದೆ. ಆದ್ದರಿಂದ ತಕ್ಷಣವೇ ಕಾರ್ಖಾನೆ ಪ್ರಾರಂಭಿಸಲು ಅವಕಾಶ ನೀಡುವಂತೆ ಎಂದು ಕಾರ್ಖಾನೆಯ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿಕೊಂಡರು. ರೈತರ ಬೇಡಿಕೆಯಂತೆ ಕಬ್ಬಿನ ಹಣವನ್ನು ಆದಷ್ಟು 20 ರಿಂದ 30 ದಿನದೊಳಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಜಿಎಂ ಮಂಜುನಾಥ, ಹಾಗೂ ಧರ್ಮೇಂದ್ರ ತಿಳಿಸಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಗೌ.ಅಧ್ಯಕ್ಷ ಪ್ರಕಾಶ ಸಜ್ಜನರ, ತಾಲೂಕು ಅಧ್ಯಕ್ಷ ಹುಸೇನಸಾಬ್ ಕುರಿ, ಕೊಟೆಪ್ಪ ಚೌಡಕಿ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿ ಕೊಳಲ, ರವಿಕುಮಾರ ದೊಡ್ಡಮನಿ, ಹಾಲೇಶ ಬೆನ್ನೂರು, ಸಂತೋಷ ಹಳ್ಳಿಯವರ, ವೀರಣ್ಣ ಕವಲೂರು, ಪ್ರವೀಣ ಹಂಚಿನಾಳ, ಬಾಪೂಜಿ ಮದ್ಯಪಾಟಿ, ಶಿವಾನಂದ ಇಟಗಿ, ಶಿವಪುತ್ರಪ್ಪ ಪೂಜಾರ, ಈರಣ್ಣ ಮಲ್ಲಾಡದ, ರಾಜಶೇಖರ ಕೊಂತನ್ನವರ, ಹನಮಂತಪ್ಪ ಶೀರನಹಳ್ಳಿ, ಶರಣಪ್ಪ ಕಂಬಳಿ ಸೇರಿದಂತೆ ಹಡಗಲಿ, ಶಿರಹಟ್ಟಿ ಇತರ ಭಾಗದ ಅನೇಕರು ಪಾಲ್ಗೊಂಡಿದ್ದರು.