ಬೇಸಿಗೆಗೆ ಶಿವಮೊಗ್ಗ ಜಿಲ್ಲೆಯ 500 ಗ್ರಾಮಗಳಲ್ಲಿ ನೀರಿಗೆ ಬರ !

KannadaprabhaNewsNetwork | Updated : Dec 23 2023, 01:47 AM IST

ಸಾರಾಂಶ

ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದು, ವಾಡಿಕೆಗಿಂತ ತೀರಾ ಕಡಿಮೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣವಾಗುವ ಎಲ್ಲ ಸ್ಪಷ್ಟಲಕ್ಷಣಗಳು ಗೋಚರಿಸುತ್ತಿವೆ.ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಜೊತೆಗೆ ಮುಂಗಾರು ಮಳೆಯೂ ಕೈ ಕೊಟ್ಟಿದೆ.

ಜನವರಿಯಿಂದಲೇ ನೀರಿನ ಸಮಸ್ಯೆ ಭೀಕರವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳ ಅಂದಾಜು 1) ಜಿಲ್ಲೆಯ ಜಲಮೂಲಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿತ

2) ಜಲಾಶಯಗಳಲ್ಲೂ ಕಳೆದ ಬಾರಿಗೆ ಹೋಲಿಸಿದರೆ ಕಡಿಮೆ ನೀರು ಸಂಗ್ರಹ

3) ನದಿಗಳಲ್ಲಿ ನೀರು ಬತ್ತಿ ಬಹುಗ್ರಾಮ ಕುಡಿವ ನೀರಿನ ಯೋಜನೆ ನಿಂತರೆ ಪರಿಸ್ಥಿ ಗಂಭೀರ

4) ತುಂಗಾ ನದಿ ಬತ್ತಿದ ನಂತರ ಶಿವಮೊಗ್ಗ ನಗರದಲ್ಲೂ ನೀರಿನ ಸಮಸ್ಯೆ ತೀವ್ರ ಸಾಧ್ಯತೆ

-----------ಗೋಪಾಲ್‌ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದು, ವಾಡಿಕೆಗಿಂತ ತೀರಾ ಕಡಿಮೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣವಾಗುವ ಎಲ್ಲ ಸ್ಪಷ್ಟಲಕ್ಷಣಗಳು ಗೋಚರಿಸುತ್ತಿವೆ.

ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಜೊತೆಗೆ ಮುಂಗಾರು ಮಳೆಯೂ ಕೈ ಕೊಟ್ಟಿದೆ. ಸಾವಿರಾರು ಹೆಕ್ಟೇರ್‌ ಪ್ರದೇಶದ ಬೆಳೆ ಈಗಾಗಲೇ ಹಾನಿಗೀಡಾಗಿದೆ. ಬೇಸಿಗೆ ಮುನ್ನವೇ ಕೆರೆ ಕಟ್ಟೆಗಳಲ್ಲಿ ನೀರು ದಿನದಿನಕ್ಕೆ ಕುಸಿಯುತ್ತಿದೆ. ಅಲ್ಲಿಲ್ಲಿ ಕುಡಿವ ನೀರಿಗೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೂ ಹಾಹಾಕಾರ ಹಂತ ತಲುಪಿಲ್ಲ. ಜನವರಿಯಿಂದಲೇ ಕುಡಿಯುವ ನೀರಿನ ಸಮಸ್ಯೆ ಭೀಕರವಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಕಳೆದ ಬಾರಿ ಉತ್ತಮ ಮಳೆಯಾಗಿಯೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಈ ಬಾರಿ ಬರವಿದೆ. ನದಿಯಲ್ಲಿ ನೀರು ಬರಿದಾಗಿ ಬಹುಗ್ರಾಮ ಕುಡಿವ ನೀರು ಪೂರೈಕೆ ಸ್ಥಗಿತಗೊಂಡರೆ ಸಮಸ್ಯೆ ಹೆಚ್ಚಾಗಲಿದೆ. ಏನೆ ಆದರೂ ಈ ಬಾರಿ ಕುಡಿಯುವ ನೀರಿನ ತಾಪತ್ರಯ ತಪ್ಪಿದ್ದಲ್ಲ.

504 ಹಳ್ಳಿಗಳಲ್ಲಿ ನೀರಿಗೆ ಸಮಸ್ಯೆ:

ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸರ್ಕಾರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು 504 ಹಳ್ಳಿಗಳು ಕುಡಿಯುವ ನೀರಿನ ಬವಣೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಆಡಳಿತ ಅಂದಾಜಿಸಿದೆ. ಭದ್ರಾವತಿ ತಾಲೂಕಿನ 40 ಗ್ರಾಮಗಳು, ಹೊಸನಗರದಲ್ಲಿ 43, ಸಾಗರದಲ್ಲಿ 142 , ಶಿಕಾರಿಪುರದಲ್ಲಿ 94, ಶಿವಮೊಗ್ಗದಲ್ಲಿ 124, ಸೊರಬದಲ್ಲಿ 15, ತೀರ್ಥಹಳ್ಳಿಯಲ್ಲಿ 45 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿದೆ ಎಂಬ ಅಂದಾಜಿದೆ.

ಶಿವಮೊಗ್ಗ ನಗರಕ್ಕೂ ಸಮಸ್ಯೆ ಬಿಸಿ:

ಈ ಹಿಂದಿನ ವರ್ಷದಲ್ಲಿ ಉತ್ತಮ ಮಳೆ ಹೊರತಾಗಿಯೂ ಬೇಸಿಗೆಯ ಕೊನೆ ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಆತಂಕ ಎದುರಾಗಿತ್ತು. ಈ ಬಾರಿ ಬರಗಾಲ ಇರುವುದರಿಂದ ತುಂಗಾನದಿಯಲ್ಲೂ ನೀರಿನ ಪ್ರಮಾಣ ಕಡಿಮೆ ಇದೆ. ಸದ್ಯ ತುಂಗಾ ಜಲಾಶಯದಲ್ಲಿ ಸಾಕಷ್ಟು ನೀರು ಇದ್ದು, ತುಂಗಾ ನದಿ ಹರಿಯುತ್ತಿರುವುದರಿಂದ ಸಮಸ್ಯೆ ಇಲ್ಲ. ಆದರೆ ಕಳೆದ ವರ್ಷದಂತೆ ತುಂಗಾ ನದಿ ಹರಿವು ತುಂಡಾದಲ್ಲಿ ಜಲಾಶಯದಲ್ಲಿನ ನೀರಿನ ಮಟ್ಟ ಕುಸಿಯಲಿದೆ. ಫೆಬ್ರವರಿಯಿಂದ ಕುಡಿಯುವ ನೀರಿಗೆ ಸಮಸ್ಯೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

---------------------------

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ:

ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿಲ್ಲ. ಫೆಬ್ರವರಿ, ಮಾರ್ಚ್‌ ನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಪ್ರತಿ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ಕೊಳವೆ ಬಾವಿಗಳ ದುರಸ್ತಿಗೆ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ಪ್ರಗತಿಯಲ್ಲಿರುವ ಕುಡಿಯುವ ನೀರಿನ ಯೋಜನೆ ಕೂಡಲೇ ಪೂರ್ಣಗೊಳಿಸಲು ಆದ್ಯತೆ ಮೇರೆಗೆ ಗಮನ ಹರಿಸಲಾಗುತ್ತಿದೆ. ಕುಡಿಯುವ ನೀರು ಪೂರೈಕೆ ಪಂಪ್‌ ಸೆಟ್‌ ಗಳ ದುರಸ್ತಿ, ಕೊಳವೆ ಬಾವಿಗಳ ಸ್ಥಿತಿಗತಿ ಅಧ್ಯಯನಕ್ಕೆ ಮುಂದಾಗವಾಗಿದೆ.

-ಸ್ನೇಹಲ್‌ ಲೋಖಂಡೆ, ಸಿಇಓ, ಜಿ.ಪಂ. ----------

ಖಾಲಿಯಾಗುತ್ತಿರುವ ಜಲಾಶಯಗಳು:

ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಕಾರಣ ಬೇಸಿಗೆ ಮುನ್ನವೇ ಜಲ ಮೂಲಗಳಲ್ಲಿ ನೀರಿನ ಮಟ್ಟ ದಿನದಿನಕ್ಕೆ ಪಾತಾಳ ಕಾಣುತ್ತಿದೆ. ಪ್ರಮುಖ ಜಲಾಶಯಗಳಲ್ಲೂ ಭಾರಿ ಪ್ರಮಾಣದಲ್ಲಿ ನೀರಿನ ಮಟ್ಟ ಕುಸಿದಿದೆ. ಕಳೆದ ಬಾರಿ ಇದೇ ಹೊತ್ತಿಗೆ ಶೇ.70 ರಷ್ಟು ಭರ್ತಿಯಾಗಿದ್ದ ಲಿಂಗನಮಕ್ಕಿ ಜಲಾಶಯದಲ್ಲಿ ಈ ಬಾರಿ ಶೇ.38 ರಷ್ಟು ಮಾತ್ರ ನೀರಿದೆ. ಭದ್ರಾ ಜಲಾಶಯದಲ್ಲೂ ಶೇ.49 ರಷ್ಟು ಮಾತ್ರ ನೀರಿದೆ. ಕಳೆದ ಬಾರಿ ಇದೇ ಹೊತ್ತಿಗೆ ಶೇ.93 ರಷ್ಟು ನೀರಿತ್ತು.

Share this article