ದೇಶಾದ್ಯಂತ 545 ಸೈಬರ್‌ ವಂಚನೆ ಮಾಡಿದ್ದವರ ಸೆರೆ!

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ದೇಶಾದ್ಯಂತ 545 ಸೈಬರ್‌ ವಂಚನೆ ಮಾಡಿದ್ದವರ ಸೆರೆ! ಫೆಡೆಕ್ಸ್‌ ಹೆಸರಿನ ವಂಚನೆ ಮಾಡುತ್ತಿದ್ದ 14 ಆರೋಪಿಗಳ ಸೆರೆ. ನಗರದ 4 ಕೇಸ್‌ಗಳೂ ಪತ್ತೆ. ₹25 ಲಕ್ಷ ಮುಟ್ಟುಗೋಲು

ಕನ್ನಡಪ್ರಭ ವಾರ್ತೆ ಬೆಂಗಳೂರು

ಫೆಡೆಕ್ಸ್ ಕೊರಿಯರ್‌ನಲ್ಲಿ ಡ್ರಗ್ಸ್‌ ಸಾಗಾಣಿಕೆ ನಡೆಸಿರುವುದಾಗಿ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಮತ್ತೊಂದು ಸೈಬರ್ ವಂಚಕರ ಜಾಲವನ್ನು ಭೇದಿಸಿ 14 ಮಂದಿಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಸೆರೆ ಹಿಡಿದಿದೆ.

ಕೇರಳದ ಮೊಹಮ್ಮದ್ ರಜೀ, ಮೊಹ್ಮಮದ್‌ ನಿಮ್ಷಾದ್‌, ಆಶೀಕ್‌, ನೌಶಾದ್‌, ಆರ್ಶದ್‌, ರಿಯಾಜ್‌, ನೌಫುಲ್‌, ರಾಜಸ್ಥಾನದ ದಿಲೀಪ್ ಸೋನಿ, ರಮೇಶ್ ಕುಮಾರ್‌, ಲಲಿತ್ ಕುಮಾರ್‌, ಗುಜರಾತ್‌ನ ಮಖಾನಿ ಕರೀಂ ಲಾಲ್‌, ಖಾಂಜಿ ಬಾಯ್‌ ರಬರಿ ಹಾಗೂ ಭಟ್ಕಳದ ಹಸೀಂ ಅಫಾನ್ದಿ ಮತ್ತು ಮೊಹಮ್ಮದ್ ಸಲೀಂ ಬಂಧಿತರಾಗಿದ್ದು, ಆರೋಪಿಗಳಿಂದ ₹25 ಲಕ್ಷ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಈ ಜಾಲದಿಂದ ಬೆಂಗಳೂರಿನ 6 ಪ್ರಕರಣಗಳು ಸೇರಿದಂತೆ ದೇಶ ವ್ಯಾಪ್ತಿ ನಡೆದಿದ್ದ 545 ಸೈಬರ್‌ ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.

ಸೈಬರ್ ವಂಚನೆ ಕೃತ್ಯಗಳ ತನಿಖೆಗೆ ನಾಲ್ಕು ವಿಶೇಷ ತನಿಖಾ ತಂಡ (ಎಸ್‌ಐಟಿ)ಗಳನ್ನು ರಚಿಸಲಾಗಿದೆ. ಫೆಡೆಕ್ಸ್ ಕೊರಿಯರ್‌, ಉದ್ಯೋಗ, ಸುಲಿಗೆ ಮತ್ತು ಆಧಾರ್ ಕಾರ್ಡ್ ದುರ್ಬಳಕೆ ಹೀಗೆ ಹಣ ದೋಚುವ ಜಾಲಗಳನ್ನು ಈ ನಾಲ್ಕು ಎಸ್‌ಐಟಿಗಳು ಪ್ರತ್ಯೇಕವಾಗಿ ಶೋಧಿಸುತ್ತಿವೆ. ಈ ಪೈಕಿ ಫೆಡೆಕ್ಸ್ ಕೊರಿಯರ್ ಪ್ರಕರಣ ಸಂಬಂಧ ಪಶ್ಚಿಮ ವಿಭಾಗ (ಸಂಚಾರ)ದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ನೇತೃತ್ವದ ತಂಡ ತನಿಖೆ ನಡೆಸಿ 14 ಆರೋಪಿಗಳನ್ನು ಬಂಧಿಸಿದೆ ಎಂದು ಆಯುಕ್ತರು ವಿವರಿಸಿದರು.

ಕಳೆದ ವರ್ಷ ಫೆಡೆಕ್ಸ್‌ ಕೊರಿಯರ್ ವಂಚನೆ ಸಂಬಂಧ ನಗರದ ವಿವಿಧ ಠಾಣೆಗಳಲ್ಲಿ 324 ಪ್ರಕರಣಗಳು ದಾಖಲಾಗಿದ್ದವು. ಈಗ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಎಸ್‌ಐಟಿ ಪತ್ತೆ ಹಚ್ಚುವಲ್ಲಿ ಯಶಸ್ಸು ಕಂಡಿದೆ. ಇನ್ನು ಈ ಜಾಲದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಫೆಡೆಕ್ಸ್ ಕೊರಿಯರ್‌ ವಂಚನೆ ಸಂಬಂಧ ದಾವಣೆಗೆರೆ ತಂಡವನ್ನು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದರು. ಈಗ ವಂಚಕರ ಮತ್ತೊಂದು ತಂಡವನ್ನು ಎಸ್‌ಐಟಿ ಬೇಟೆಯಾಡಿದೆ. ಬಾಕ್ಸ್‌...

ಕೊರಿಯರಲ್ಲಿ ಡ್ರಗ್ಸ್ ಸಾಗಣೆ

ಎಂದು ಬೆದರಿಸಿ ಹಣ ಸುಲಿಗೆ

ಸಾರ್ವಜನಿಕರಿಗೆ ಫೆಡೆಕ್ಸ್ ಮೂಲಕ ಕೊರಿಯರ್‌ ಬಂದಿದೆ ಎಂದು ಅಪರಿಚಿತರು ಕರೆ ಮಾಡುತ್ತಿದ್ದರು. ಬಳಿಕ ಇಂಟರ್‌ನೆಟ್‌ ವಾಯ್ಸ್ ರೆಸ್ಪಾನ್ಸ್‌ (ಐವಿಆರ್‌) ಕರೆ ಮಾಡಿ, ನಿಮ್ಮ ಕೊರಿಯರ್‌ ಮುಂಬೈನಿಂದ ತೈವಾನ್‌ಗೆ ವರ್ಗಾಣೆಯಾಗುತ್ತಿದೆ. ಇದರಲ್ಲಿ ನಿಮ್ಮ ಹೆಸರು ಮತ್ತು ಆಧಾರ್‌ ಕಾರ್ಡ್ ಬಳಸಿ ಅಕ್ರಮವಾಗಿ ಡ್ರಗ್ಸ್‌ ಸಾಗಾಣಿಕೆ ಮಾಡಲಾಗುತ್ತಿದ್ದು, ನಿಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಹ ದಾಖಲಾಗಿದೆ. ಖುದ್ದು ವಿಚಾರಣೆಗೆ ಮುಂಬೈ ಕ್ರೈಂ ಬ್ರಾಂಚ್‌ಗೆ ಬರುವಂತೆ ವಂಚರರು ಬೆದರಿಸುತ್ತಿದ್ದರು. ಅಲ್ಲದೆ ಕರೆ ಮಾಡುವ ಆರೋಪಿಗಳು ತಮ್ಮನ್ನು ಪೊಲೀಸ್‌, ಎನ್‌ಸಿಬಿ, ಸಿಬಿಐ, ಇಡಿ ಹಾಗೂ ಆರ್‌ಬಿಐ ಸಂಸ್ಥೆಗಳ ಅಧಿಕಾರಿಗಳು ಎಂದು ಪರಿಚಯಿಸಿಕೊಳ್ಳುತ್ತಿದ್ದರು. ಈ ಬೆದರಿಕೆಗೆ ಹೆದರಿದ ಜನರಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡು ಸಂಪರ್ಕ ಕಡಿತಗೊಳಿಸುತ್ತಿದ್ದರು ಎಂದು ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.-ಬಾಕ್ಸ್‌-

ಖಾತೆಗಳ ತೆರೆಯಲು

ವಿದ್ಯಾರ್ಥಿಗಳ ನೆರವು

ಈ ಬಂಧಿತರ ಪೈಕಿ ಕೆಲವರು ವಿದ್ಯಾರ್ಥಿಗಳಾಗಿದ್ದಾರೆ. ಹಣದಾಸೆಗೆ ವಂಚನೆ ಕೃತ್ಯದಲ್ಲಿ ಕೈ ಜೋಡಿಸಿದ್ದಾರೆ. ವಂಚನೆ ಕೃತ್ಯದ ಹಣ ವರ್ಗಾವಣೆಗೆ ಆರೋಪಿಗಳು ನೆರವು ನೀಡಿದ್ದಾರೆ. ತಮ್ಮ ಹೆಸರುಗಳಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು ಹಣ ವರ್ಗಾವಣೆಗೆ ಮಾಡುತ್ತಿದ್ದರು. ಇದಕ್ಕಾಗಿ ಅವರಿಗೆ ಕಮಿಷನ್ ಸಹ ಸಿಕ್ಕಿದೆ. ಬೆಂಗಳೂರು ಸೇರಿ ದೇಶ ವ್ಯಾಪ್ತಿ ನಡೆದಿರುವ 546 ಪ್ರಕರಣಗಳಲ್ಲಿ ಹಣ ವರ್ಗಾವಣೆಗೆ ಈ ಆರೋಪಿಗಳ ಖಾತೆಗಳು ಬಳಕೆಯಾಗಿವೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ. ಆರೋಪಿಗಳಿಗೆ ಸಂಬಂಧಿಸಿದ 53 ಬ್ಯಾಂಕ್‌ ಖಾತೆ ಸೀಜ್‌ ಮಾಡಲಾಗಿದೆ. ಈ ಖಾತೆಗಳಲ್ಲಿ ₹2.10 ಕೋಟಿ ಹಣ ವಹಿವಾಟು ನಡೆದಿದೆ. ಇದರಲ್ಲಿ ಇದ್ದ ₹25 ಲಕ್ಷವನ್ನು ಜಪ್ತಿ ಮಾಡಲಾಗಿದೆ.

Share this article