ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಸದಸ್ಯರು ಪಟ್ಟಣದ ವಿವಿಧ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು.
ಸಭೆ ಆರಂಭದಲ್ಲಿಯೇ ಹೇಮಾವತಿ ಬಡಾವಣೆ ಮತ್ತು ಟಿ.ಬಿ ಬಡಾವಣೆಯ ಬಗ್ಗೆ ಪ್ರಸ್ತಾಪಿಸಿದ ಸದಸ್ಯರಾದ ಕೆ.ಸಿ. ಮಂಜುನಾಥ್ ಮತ್ತು ಡಿ.ಪ್ರೇಂಕುಮಾರ್ ಹೇಮಾವತಿ ಬಡಾವಣೆಯ 1276 ನಿವೇಶನಗಳಲ್ಲಿ ಮೊದಲ ಹಂತದಲ್ಲಿ 694 ನಿವೇಶನಗಳ ಸಕ್ರಮಾತಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಉಳಿದ 582 ನಿವೇಶನಗಳ ಸಕ್ರಮವಾಗಬೇಕು. ಇದರಿಂದ ಪುರಸಭೆಯ ಆದಾಯದಲ್ಲಿ ಹೆಚ್ಚಳವಾಗಿ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.ಬಡವರಿಗೆ ನಿವೇಶನ ಹಂಚಿಕೆ ಮಾಡುವ ಸದುದ್ದೇಶದಿಂದ ವಶಪಡಿಸಿಕೊಂಡಿರುವ ಟಿ.ಬಿ.ಬಡಾವಣೆಯಲ್ಲಿನ ಪುರಸಭೆಯ ಜಾಗ ಅತಿಕ್ರಮಕ್ಕೆ ಒಳಗಾಗಿದೆ. ಸದರಿ ಜಾಗದ ಅಳತೆ ಮಾಡಿಸಿ ಗಡಿ ಗುರುತಿಸಬೇಕು. ಪಟ್ಟಣದ ಪಾಲಿಟೆಕ್ನಿಕ್ ಆವರಣದೊಳಗಿದ್ದ ಸಾರ್ವಜನಿಕ ರಸ್ತೆ ಮುಚ್ಚಿ ಹೋಗಿದೆ. ಮುಚ್ಚಿಹೋಗಿರುವ ಸರ್ಕಾರಿ ರಸ್ತೆಯನ್ನು ಬಿಡಿಸ ಕೊಡಬೇಕು ಎಂದರು.
ಪಾದಚಾರಿ ರಸ್ತೆ ಸುಗಮಗೊಳಿಸಿ:
ಎಪಿಎಂಸಿ ಮಾರುಕಟ್ಟೆ ಬಳಿ ಅಂಗಡಿ ಮಾಲೀಕರುಗಳೇ ಸುಮಾರು 15 ಅಡಿಯಷ್ಟು ಜಾಗ ಅತಿಕ್ರಮಿಸಿರೆ. ಫುಟ್ ಪಾತ್ ತೆರವುಗೊಳಿಸಿ ವ್ಯಾಪಾರಿಗಳಿಗೆ ಎಂ.ಡಿ.ಸಿ.ಸಿ ಬ್ಯಾಂಕ್ ಹಿಂಭಾಗ ಮಾರಾಟಕ್ಕೆ ಅವಕಶ ಕೊಡಿ. ಇದರಿಂದ ಪುರಸಭೆಗೂ ಆದಾಯ ಬರುತ್ತದೆ. ಅಲ್ಲದೇ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುತ್ತದು ಎಂದರು.
ಸರ್ಕಾರಿ ಕಚೇರಿಗಳು ಮತ್ತು ಕೆಲವು ಬೃಹತ್ ಕಟ್ಟಡದಾರರು ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ಇದೆಲ್ಲವನ್ನೂ ವಸೂಲಿ ಮಡಲು ಕ್ರಮ ವಹಿಸದರೆ ಪುರಸಭೆಯ ಆದಾಯದಲ್ಲಿ ಹೆಚ್ಚಳವಾಗಲಿದೆ. ಈ ನಿಟ್ಟಿನಲ್ಲಿ ಪುರಸಭೆಯ ಸಿಬ್ಬಂದಿ ಕ್ರಮ ವಹಿಸುವಂತೆ ಸೂಚಿಸಿದರು.