ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

KannadaprabhaNewsNetwork |  
Published : Oct 25, 2025, 01:01 AM IST
Veerendra Heggade

ಸಾರಾಂಶ

ಸರ್ವಧರ್ಮ ಸಮನ್ವಯ ಕೇಂದ್ರ ಧರ್ಮಸ್ಥಳ ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರವಾಗಿದ್ದು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.

ಬೆಳ್ತಂಗಡಿ: ಸರ್ವಧರ್ಮ ಸಮನ್ವಯ ಕೇಂದ್ರ ಧರ್ಮಸ್ಥಳ ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರವಾಗಿದ್ದು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.

ಶುಕ್ರವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ ೫೮ನೇ ವರ್ಧಂತ್ಯುತ್ಸವ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿದರು.ಪೂಜ್ಯರ ತಾತರಾಗಿದ್ದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರ ಕನಸು ಹಾಗೂ ತಂದೆ ರತ್ನವರ್ಮ ಹೆಗ್ಗಡೆ ಮನಸನ್ನು ಅನುಸರಿಸಿ ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ಸರ್ವತೋಮುಖ ಪ್ರಗತಿಯೊಂದಿಗೆ ಸಮಾಜಕ್ಕೂ ಅನುಪಮ ಸೇವೆ ನೀಡಿದ್ದಾರೆ.ಮಹಾತ್ಮ ಗಾಂಧೀಜಿಯವರ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕನಸನ್ನು ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮನಪರಿವರ್ತನೆ ಮೂಲಕ ಮದ್ಯವರ್ಜನ ಶಿಬಿರದೊಂದಿಗೆ ನನಸಾಗಿ ಮಾಡಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ಪ್ರಧಾನಿ ಮೋದಿಯವರ ವಿಕಸಿತ ಭಾರತ ಕಲ್ಪನೆ ಅನುಷ್ಠಾನ

ಪ್ರಧಾನಿ ಮೋದಿಯವರ ವಿಕಸಿತ ಭಾರತ ಕಲ್ಪನೆ ಅನುಷ್ಠಾನಗೊಳಿಸಿದ್ದಾರೆ. ಅನೇಕ ದೀನ-ದಲಿತರ, ಮಹಿಳೆಯರ ಬದುಕಿಗೆ ತಾಯಿ-ತಂದೆ ಹಾಗೂ ಪೋಷಕರಂತೆ ಪ್ರೀತಿ ಮತ್ತು ವಿಶ್ವಾಸದಿಂದ ನಿರಂತರ ಪ್ರೇರಣೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ನವ ಚೈತನ್ಯದೊಂದಿಗೆ ಸ್ವಾವಲಂಬಿ ಜೀವನ ಮಾಡಲು ದಾರಿದೀಪವಾಗಿದ್ದಾರೆ ಎಂದು ಸ್ವಾಮೀಜಿ ನುಡಿದರು.

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಕ್ಷೇತ್ರದ ಎಲ್ಲಾ ಭಕ್ತರು, ಅಭಿಮಾನಿಗಳು ಮತ್ತು ಸಾರ್ವಜನಿಕರು, ನಾವು ಸದಾ ನಿಮ್ಮೊಂದಿಗಿದ್ದೇವೆ ಎಂದು ತಮಗೆ ಭರವಸೆ ನೀಡಿರುವುದರಿಂದ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲು ಉತ್ಸಾಹ ಮೂಡಿಬಂದಿದೆ ಎಂದರು.

ನೀವೆಲ್ಲರೂ ತೋರಿಸಿದ ಭಕ್ತಿ, ಪ್ರೀತಿ-ವಿಶ್ವಾಸ ಮತ್ತು ಗೌರವವನ್ನು ಶ್ರೀ ಸ್ವಾಮಿಗೆ ಅರ್ಪಿಸುವುದಾಗಿ ಹೆಗ್ಗಡೆ ತಿಳಿಸಿದರು.ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೈತರ ಆರ್ಥಿಕ ಸ್ವಾವಲಂಬನೆಗೆ ಹೆಗ್ಗಡೆ ಅವರು ಸೇವಾಕಾರ್ಯಗಳ ಮೂಲಕ ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು.

ಕಂಚಿಕಾಮಕೋಟಿ ಪೀಠದ ಪ್ರತಿನಿಧಿ ಗುರುಚರಣಮೂರ್ತಿ ಶುಭಾಶಂಸನೆ ಮಾಡಿದರು.

ಡಾ. ವಿಘ್ನರಾಜ ಮತ್ತು ಡಾ. ಪವನ್ ಸಂಪಾದಿಸಿದ ‘ವೃಷಭೇಶ್ವರ’ ಗ್ರಂಥವನ್ನು ಸ್ವಾಮೀಜಿ ಲೋಕಾರ್ಪಣೆ ಮಾಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲ ಸುನಿಲ್ ಪಂಡಿತ್ ನಿರ್ವಹಿಸಿದರು.

ಉಜಿರೆಯಲ್ಲಿ ನರ್ಸಿಂಗ್‌ ಕಾಲೇಜ್‌ ಪ್ರಾರಂಭ, ನ.6ರಂದು 2000ನೇ ಮದ್ಯವರ್ಜನ ಶಿಬಿರ...

ಸಮಾರಂಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೊಸ ಯೋಜನೆಗಳನ್ನು ಪ್ರಕಟಿಸಿದರು. ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭ, ಎಂ.ಆರ್.ಐ. ಘಟಕ, ೨೦೦೦ನೇ ಮದ್ಯವರ್ಜನ ಶಿಬಿರ ಧರ್ಮಸ್ಥಳದಲ್ಲಿ ನ.೬ರಂದು ನಡೆಯಲಿದ್ದು, ೧,೩೫,೦೦೦ ವ್ಯಸನಮುಕ್ತರು ಭಾಗವಹಿಸಲಿದ್ದಾರೆ ಎಂದು ಹೆಗ್ಗಡೆ ಪ್ರಕಟಿಸಿದರು.

ಧರ್ಮಸ್ಥಳದ ಅಶೋಕನಗರದಲ್ಲಿ ೨ ಕೋಟಿ ೪೧ ಲಕ್ಷ ರೂ. ರಾಜ್ಯಸಭಾ ಸದಸ್ಯರ ಅನುದಾನದಿಂದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣ, ಬೀದಿದೀಪಗಳ ಅಳವಡಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಈಗಾಗಲೇ ೩೦೦ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಪೂರೈಸಿದ್ದು, ಮುಂದಿನ ವರ್ಷ ೧೩ ದೇವಾಲಯಗಳನ್ನು ಜೀರ್ಣೋದ್ಧಾರಕ್ಕಾಗಿ ಗುರುತಿಸಲಾಗಿದೆ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ೨೫,೫೦೦ ಕೋಟಿ ರೂ. ಬಿ.ಸಿ. ಟ್ರಸ್ಟ್ ಮೂಲಕ ವಿತರಿಸಲಾಗಿದೆ.೨೦೨೬ರ ಮಾರ್ಚ್ ಒಳಗೆ ೧೦೦೦ ಕೆರೆಗಳಿಗೆ ಕಾಯಕಲ್ಪ ನೀಡಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.ಬೆಳ್ತಂಗಡಿಯಲ್ಲಿ ೭ ಎಕ್ರೆ ಜಾಗದಲ್ಲಿ ೯೦ ಕೋಟಿ ರೂ. ವೆಚ್ಚದಲ್ಲಿ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.

PREV
Read more Articles on

Recommended Stories

ನಾಲ್ಕು ಜಿಲ್ಲೆಗಳಲ್ಲಿ ಮಳೆ ಆರ್ಭಟ : ಬೆಳೆ ಹಾನಿ ಆತಂಕದಲ್ಲಿ ರೈತರು
ಯಾವುದೇ ಕ್ರಾಂತಿಗೆ ಕಾಂಗ್ರೆಸ್‌ ಹೈಕಮಾಂಡ್‌ ಬಿಡಲ್ಲ : ಸತೀಶ್‌