ಹೊಸಪೇಟೆ : ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆ ಒಳ ಹರಿವು ಉತ್ತಮವಾಗಿದೆ. ಹಾಗಾಗಿ ಜಲಾಶಯದಿಂದ ಗುರುವಾರ ನದಿಗೆ 58,260 ಕ್ಯುಸೆಕ್ ನೀರು ಹರಿಬಿಡಲಾಗಿದೆ. ಜಲಾಶಯದ 20 ಕ್ರಸ್ಟ್ ಗೇಟ್‌ಗಳನ್ನು ತಲಾ 2.5 ಅಡಿ ಎತ್ತರಿಸಿ ನದಿಗೆ ನೀರು ಬಿಡಲಾಗಿದೆ. ಇನ್ನು ವಿದ್ಯುತ್ ಉತ್ಪಾದನಾ ಘಟಕದ ಮಾರ್ಗವಾಗಿ ಒಂದು ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ. ಜಲಾಶಯದಿಂದ ಒಟ್ಟು 59,260 ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ. ಇದರಿಂದ ಹಂಪಿ ಪುರಂದರದಾಸರ ಮಂಟಪ ಸೇರಿದಂತೆ ಕೆಲ ಪ್ರಮುಖ ಸ್ಮಾರಕಗಳು ಜಲಾವೃತವಾಗಿವೆ.
ಜಲಾಶಯದ ಒಳ ಹರಿವು ಉತ್ತಮವಾಗಿರುವ ಹಿನ್ನೆಲೆ 78.239 ಟಿಎಂಸಿ ನೀರು ಈಗಾಗಲೇ ಸಂಗ್ರಹವಾಗಿದೆ.
ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿದೆ. ಇನ್ನೂ ತುಂಗಾ ಜಲಾಶಯದಿಂದ 50 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗಿದೆ. ವರದಾ ನದಿ ನೀರು ಕೂಡ ತುಂಗಭದ್ರಾ ಜಲಾಶಯದ ಒಡಲು ಸೇರುತ್ತಿದೆ. ಜಲಾಶಯದ ಒಳ ಹರಿವು ಏರುತ್ತಲೇ ಸಾಗುತ್ತಿರುವ ಹಿನ್ನೆಲೆ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗಿದೆ.
ತುಂಗಭದ್ರಾ ಜಲಾಶಯದಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ಈ ಹಿಂದೆಯೇ ನದಿಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಆಯಾ ಜಿಲ್ಲಾಡಳಿತಗಳು ಡಂಗುರ ಸಾರಿಸಿ ಜನರಲ್ಲಿ ಜಾಗೃತಿ ಮೂಡಿಸಿದೆ. ಈ ಮಧ್ಯೆ ಹಂಪಿಯ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಕಾಲು ಸೇತುವೆ ಸೇರಿದಂತೆ ಚಕ್ರತೀರ್ಥದ ಬಳಿಯ ಕೆಲ ಮಂಟಪಗಳು ಕೂಡ ಈಗಾಗಲೇ ಜಲಾವೃತವಾಗಿವೆ. ಜಲಾಶಯದ ಒಳ ಹರಿವು ಏರುತ್ತಲೇ ಸಾಗಿದರೆ, ಹೊರ ಹರಿವಿನಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಹಾಗಾಗಿ ಹಂಪಿಯ ಇನ್ನಷ್ಟು ಸ್ಮಾರಕಗಳು ಜಲಾವೃತವಾಗುವ ಸಾಧ್ಯತೆ ಇದೆ.
ತುಂಗಭದ್ರಾ ಜಲಾಶಯದ ಒಳ ಹರಿವು ಏರುತ್ತಾ ಸಾಗಿದಂತೆ ನದಿಗೆ ನೀರು ಹರಿಸಲಾಗುತ್ತದೆ. ಜಲಾಶಯದ 20 ಗೇಟ್‌ಗಳಿಂದ ತಲಾ 2,913 ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.