ಕನ್ನಡಪ್ರಭ ವಾರ್ತೆ ಶಿರಸಿ
ಉತ್ಸವದ ಅಂಗವಾಗಿ ಮಹಾಸಂಸ್ಥಾನದ ಸುಧರ್ಮ ಸಭಾಭವನದಲ್ಲಿ ಆಯೋಜಿಸಿದ್ದ ಉಚಿತ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ಸುಮಾರು 100ಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರೆ, 40ಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯ ಸೇವೆಗೆ ಕೈಜೋಡಿಸಿದರು.
ಗ್ರಾಮಾಭ್ಯುದಯ, ಟಿ.ಎಸ್.ಎಸ್. ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ, ಪಂಡಿತ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯ ಇಲಾಖೆ, ಸೇವಾ ಸಹಕಾರಿ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶಿಬಿರ ನಡೆಯಿತು. ವೈದ್ಯರಾದ ಡಾ. ವೀರೇಶ್ ಎಸ್. ಬಾಲೆಹೊಸೂರು, ಡಾ. ವೀಣಾ ವೆರ್ಣೇಕರ್, ಡಾ. ಸುಮನ್ ಹಾಗೂ ಇತರ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಸಲಹೆ ನೀಡಿದರು.ಉತ್ಸವದ ಅಂಗವಾಗಿ ಅಥರ್ವಶೀರ್ಷ ಪಾರಾಯಣ, ಮಹಾಗಣಪತಿ ಹವನ, ಶ್ರೀಸೂಕ್ತ-ಪುರುಷಸೂಕ್ತ ಪಾರಾಯಣ, ಮಹಾಮೃತ್ಯುಂಜಯ ಜಪ, ಗ್ರಹಶಾಂತಿ, ಆಯುಷ್ಯಚರು ಶಾಂತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಪುರೋಹಿತರಾದ ವೇ.ಮೂ. ಕೃಷ್ಣ ಜೋಶಿ, ವೇ.ಮೂ.ಚಿನ್ಮಯ ಜೋಶಿ ಹಾಗೂ ಇತರ ೫೦ಕ್ಕೂ ಅಧಿಕ ಋತ್ವಿಜರು ನಡೆಸಿಕೊಟ್ಟರು. ಯಾಗಶಾಲೆಯಲ್ಲಿ ನಡೆದ ಪೂಜಾ-ಹವನಾದಿ ಧಾರ್ಮಿಕ ವಿಧಿವಿಧಾನಗಳು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡವು.
ಗ್ರಾಮಾಭ್ಯುದಯದ ಅಧ್ಯಕ್ಷ ರಾಮಚಂದ್ರ ಹೆಗಡೆ ಕಂಚನಳ್ಳಿ, ಕಾರ್ಯದರ್ಶಿ ಸಂತೋಷ ಭಟ್ಟ ಕೋಡಿಗಾರ, ಹೇಮಂತ ಹೆಗಡೆ, ಎಂ.ಸಿ. ಹೆಗಡೆ ಶಿರಸಿಮಕ್ಕಿ, ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಸುರೇಶ ಹಕ್ಕಿಮನೆ, ಎಂ.ಕೆ. ಹೆಗಡೆ ಗೋಳಿಕೊಪ್ಪ, ಶ್ರೀಧರ ಭಟ್ ಕಳವೆ, ಆರ್.ಎನ್. ಭಟ್ಟ ಸುಗಾವಿ ಹಾಗೂ ಇತರರು ಇದ್ದರು.