ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಆಡಿಟೋರಿಯಂನಲ್ಲಿ ಜು.29ರಂದು 5ನೇ ಘಟಿಕೋತ್ಸವ ನಡೆಯಲಿದೆ. ಒಟ್ಟು 1880ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು ಎಂದು ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ಎನ್.ಶ್ರೀಧರ ತಿಳಿಸಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಡಾ.ನಿರ್ಮಲಾನಂದನಾಥಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಜಿ ಅಧ್ಯಕ್ಷ, ಚಾಣಾಕ್ಯ ವಿವಿ ಕುಲಾಧಿಪತಿ ಹಾಗೂ ವಿಜ್ಞಾತಂ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಸೋಮನಾಥ್ ಅವರು ಪ್ರಧಾನ ಭಾಷಣ ಮಾಡುವರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಘಟಿಕೋತ್ಸವದಲ್ಲಿ 968 ಹೆಣ್ಣು ಮಕ್ಕಳು ಮತ್ತು 912 ಗಂಡು ಮಕ್ಕಳು ಪದವಿ ಪ್ರಮಾಣಪತ್ರ ಪಡೆದುಕೊಳ್ಳಲಿದ್ದಾರೆ. ಇದರ ಜೊತೆಗೆ ಪಿಎಚ್‌ಡಿ ಮಾಡಿರುವ 20 ಮಂದಿಗೂ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುತ್ತಿದೆ. ಆದಿಚುಂಚನಗಿರಿ ವಿವಿ ಬಹುಶಿಸ್ತೀಯ ವಿಶ್ವವಿದ್ಯಾಲಯ ಆಗಿರುವುದರಿಂದ ವೈದ್ಯಕೀಯ ಮತ್ತು ಅಲೈಡ್ ಸೈನ್ಸ್ ವಿಭಾಗದಲ್ಲಿ 200 ಮಂದಿ, ಫಾರ್ಮಸಿ ವಿಭಾಗದಲ್ಲಿ 300 ಮಂದಿ, ಇಂಜಿನಿಯರಿಂಗ್ ವಿಭಾಗದಲ್ಲಿ 700 ಮಂದಿ, ನರ್ಸಿಂಗ್ ವಿಭಾಗದಲ್ಲಿ 100 ಮಂದಿ, ನ್ಯಾಚುರಲ್ ಸೈನ್ಸ್ ವಿಭಾಗದಲ್ಲಿ 150 ಮಂದಿ, ಹ್ಯುಮಾನಿಟಿ ಆ್ಯಂಡ್ ಸೋಷಿಯಲ್ ಸೈನ್ಸ್ ವಿಭಾಗದಲ್ಲಿ ಸುಮಾರು 300 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.ಚಿನ್ನದ ಪದಕ:
ಅತಿ ಹೆಚ್ಚು ಅಂಕ ಪಡೆದಿರುವ ದೀಕ್ಷಿತಾ ಅಯ್ಯರ್ ಅವರಿಗೆ ಲೇಟ್ ನಂಜಮ್ಮ ಲಕ್ಷ್ಮೇಗೌಡ ಸ್ಮಾರಕ ಚಿನ್ನದ ಪದಕ, ಎಸ್.ರೇಖಾ ಅವರಿಗೆ ಲೇಟ್ ದಾಸೇಗೌಡ ಲಕ್ಷ್ಮೇಗೌಡ ಸ್ಮಾರಕ ಚಿನ್ನದ ಪದಕ, ಮಂಪಿಡೈ ಅವರಿಗೆ ಲೇಟ್ ಸುನ್ನಾರಿ ಪಾರ್ವತಿ ಶೆಟ್ಟಿ ಸ್ಮಾರಕ ಚಿನ್ನದ ಪದಕ, ಡಾ. ಎಚ್.ದರ್ಶನ್ ಅವರಿಗೆ ದೇವಮ್ಮ ಪುಟ್ಟಚ್ಚೀ ಸಿದ್ದೇಗೌಡ ಸ್ಮಾರಕ ಚಿನ್ನದ ಪದಕ ಮತ್ತು ಫಾರ್ಮಸಿಯಲ್ಲಿ ಉತ್ತಮ ಸಂಶೋಧನೆ ಮಾಡಿರುವ ಪ್ರೊ.ಪ್ರಕಾಶ್ ಎಸ್.ಗೌಡನವರ್ ಅವರಿಗೆ ಲೇಟ್ ಜಯಪ್ರಕಾಶ್ ನಾಯರ್ ಸ್ಥಾಪಿಸಿರುವ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದರು.ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ ಮಾತನಾಡಿ, ಕಳೆದ 2018ರಲ್ಲಿ ಆರಂಭಗೊಂಡಿರುವ ಆದಿಚುಂಚನಗಿರಿ ವಿವಿಯು 7 ವರ್ಷ ಪೂರೈಸಿ 5 ನೇ ಘಟಿಕೋತ್ಸವ ಆಚರಿಸುತ್ತಿದೆ. ವೈದ್ಯಕೀಯ ವಿಜ್ಞಾನ, ಫಾರ್ಮಸಿ, ಇಂಜಿನಿಯರಿಂಗ್, ನರ್ಸಿಂಗ್, ಪ್ರಥಮ ದರ್ಜೆ ಕಾಲೇಜಿನ ಹ್ಯುಮಾನಿಟಿ ಸೈನ್ಸ್, ಕಾಲೇಜ್ ಆಫ್ ಎಜುಕೇಷನ್, ನ್ಯಾಚುರಲ್ ಸೈನ್ಸ್ ಒಳಗೊಂಡ ಮಲ್ಟಿ ಡಿಸಿಪ್ಲಿನರಿಯ ವಿಶ್ವವಿದ್ಯಾಲಯವಾಗಿದೆ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿರುವ ಸಾವಿರಾರು ಮಂದಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಬಿಜಿಎಸ್ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರೋಹಿತ್, ಸಹಾಯಕ ಪ್ರಾಧ್ಯಾಪಕ ಜಿ.ಎಸ್.ನಾಗೇಶ್ ಇದ್ದರು.