ಕನ್ನಡಪ್ರಭ ವಾರ್ತೆ ಹುಮನಾಬಾದ್
ಹುಮನಾಬಾದ ತಾಲೂಕಿನ ಧುಮ್ಮನಸೂರ ಗ್ರಾಮದ ಸರ್ವೇ ಸಂಖ್ಯೆ 238ರಲ್ಲಿರುವ 83.23 ಮೀಸಲು ಅರಣ್ಯ ಪ್ರದೇಶದಲ್ಲಿ ಸಂಗಮೇಶ ಚಿದ್ರಿ ಎನ್ನುವವರು 2021ರಲ್ಲಿ 6.20 ಎಕರೆ ಜಮೀನು ಅತಿಕ್ರಮಣ ಮಾಡಿಕೊಂಡಿದ್ದು, ಸಾವಿರಾರು ಗಿಡ-ಮರ ನಾಶ ಮಾಡಿದ್ದಾರೆ. ಜತೆಗೆ ಕಲ್ಲುಗುಡ್ಡ, ಮಣ್ಣು ನಾಶ ಪಡಿಸಿರುವ ಕುರಿತು ಕಳೆದ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಪ್ರಕರಣ ದಾಖಲಾಗಿತ್ತು. ಸೋಮವಾರ ಬೆಳ್ಳಂಬೆಳಗ್ಗೆ ಮೂರು ಜೆಸಿಬಿ ಹಾಗೂ ಒಂದು ಹಿಟಾಚಿ ಬಳಸಿ ಮುಂಜಾನೆ 7 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕುರಿತು ಯಾವುದೇ ರೀತಿಯ ಬಂಧನ ಮಾಡಲಾಗಿಲ್ಲ ಎಂದು ಬೀದರ್ ಪ್ರಾದೇಶಿಕ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನಾತಿ ಎಂ.ಎಂ ಮಾಹಿತಿ ನೀಡಿದ್ದಾರೆ.
ಆರೋಪಿಯ ಸರ್ವೇ ಸಂಖ್ಯೆ 226 ಪಟ್ಟಾ ಜಮೀನು ಅರಣ್ಯ ಭೂಮಿಗೆ ಹೊಂದಿಕೊಂಡಿದೆ. ಕಳೆದ ನಾಲ್ಕೈದು ವರ್ಷದಿಂದ ಇಲ್ಲಿ ಚಟುವಟಿಕೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಜಂಟಿ ಸರ್ವೇ ಸಹಿತ ಮಾಡಲಾಗಿದೆ. 64 ಎ ಅರಣ್ಯ ಕಾಯಿದೆ ಅನ್ವಯ ಅರಣ್ಯ ಒತ್ತುವರಿ ಭೂಮಿಗೆ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದ ಅವರು, ಶೀಘ್ರದಲ್ಲೆ ಇಲಾಖೆ ಜಾಗದ ಸುತ್ತ ತಂತಿಬೇಲಿ ಅಳವಡಿಸಿ, ಗಿಡ ಬೆಳೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹುಮನಾಬಾದ ತಾಲೂಕಿನಲ್ಲಿ ಸಾಕಷ್ಟು ಅರಣ್ಯ ಭೂಮಿ ಅತಿಕ್ರಮಣವಾಗಿದೆ. ಅದನ್ನು ಸರ್ವೇ ಮಾಡುವ ಮೂಲಕ ವರದಿ ಆಧರಿಸಿ ಒತ್ತುವರಿ ಅರಣ್ಯ ಭೂಮಿ ತೆರವಿಗೆ ಮುಂದಾಗಲಿದ್ದೆವೆ ಎಂದು ತಿಳಿಸಿದರು.ಬಸವಕಲ್ಯಾಣ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಡೈಜೋಡೆ, ರಮೇಶ ಕನಕಟ್ಟಾ, ವಲಯ ಅರಣ್ಯಾಧಿಕಾರಿ ಶಿವಕುಮಾರ ರಾಠೋಡ, ಪ್ರವೀಣ, ಮಹ್ಮಮ್ಮದ್ ಅಲಿವೂದ್ದಿನ್, ಮಹೇಂದ್ರ, ಐಶ್ವರ್ಯ, ಉಪವಲಯ ಅರಣ್ಯಾಧಿಕಾರಿ ಅಂಬಾದಾಸ ಪಾಲಾಡೆ, ಸಂತೋಷ ನಾಯಕೊಡ್, ಸಂತೋಷ ಹಲ್ಲಾಳ, ರಾಹುಲ ಸಾಧುರೆ ಸೇರಿ ಅರಣ್ಯ ಸಂರಕ್ಷಕರು ಇದ್ದರು.