ಶಿರಹಟ್ಟಿ: ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೊಳಲಮ್ಮ ದೇಗುಲಕ್ಕೆ ಸರ್ಕಾರದಿಂದ ₹೬.೪೭ ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ದೇವಸ್ಥಾನದ ಆವರಣದಲ್ಲಿ ದೇವಿ ಮಹಿಮೆ ಅಭಿವ್ಯಕ್ತಗೊಳಿಸಲು ಪುತ್ಥಳಿ ನಿಲ್ಲಿಸುವ ಮೂಲಕ ಮಕ್ಕಳಲ್ಲಿ ಭಕ್ತಿಭಾವ ಬಿತ್ತುವ ಕೆಲಸ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.ಭಾನುವಾರ ಸುಕ್ಷೇತ್ರ ಹೊಳಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ದೇವಸ್ಥಾನದ ಸುತ್ತಲಿನ ಸುತ್ತುಗೋಡೆ ನವೀಕರಣ ಮಾಡಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಚಾವಣಿ ನಿರ್ಮಿಸಿ ನೆರಳಿನ ವ್ಯವಸ್ಥೆ ಮಾಡಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಶೌಚಗೃಹಗಳ ನಿರ್ಮಾಣ ಸೇರಿದಂತೆ ದೇವಸ್ಥಾನಕ್ಕೆ ಆಗಮಿಸುವ ದ್ವಾರ ಬಾಗಿಲಿನಿಂದ ಹಿಡಿದು ದೇವಸ್ಥಾನದವರೆಗೂ ರಸ್ತೆ ವಿಸ್ತಾರ ಮಾಡುವ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದರು.ಹೈಮಾಸ್ಟ್ ದೀಪ ಅಳವಡಿಕೆ, ₹೭೫ ಲಕ್ಷ ವೆಚ್ಚದಲ್ಲಿ ಯಾತ್ರಿ ನಿವಾಸ, ದೇವಸ್ಥಾನದ ಕಚೇರಿ ಕಟ್ಟಡ ನಿರ್ಮಣ ಮಾಡಲಾಗುವುದು. ಮುಖ್ಯವಾಗಿ ವಯೋವೃದ್ಧರಿಗೆ ದೇವಸ್ಥಾನಕ್ಕೆ ಬರಲು ಎಲೆಕ್ಟ್ರಿಕಲ್ ವಾಹನ ವ್ಯವಸ್ಥೆ ಮಾಡಲಾಗುವುದು. ಕೋಟೆ ಗೋಡೆ ದುರಸ್ತಿ, ದಸರಾ ವೇಳೆಗೆ ಅತ್ಯಾಕರ್ಷಕ ರಾಕ್ ಗಾರ್ಡನ್ ನಿರ್ಮಿಸುವ ಗುರಿ ಹೊಂದಲಾಗಿದ್ದು, ಒಟ್ಟಾರೆ ದೇಗುವ ನವೀಕರಣಗೊಳಿಸಿ ಭಕ್ತರಿಗೆ ಶ್ರದ್ಧಾ ಕೇಂದ್ರ ಮಾಡುವ ಜತೆಗೆ ಪ್ರವಾಸಿ ತಾಣವನ್ನಾಗಿ ಮಾಡಲು ನೀಲನಕ್ಷೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಕಳೆದ ಎರಡು ವರ್ಷಗಳಿಂದ ಜೀರ್ಣೋದ್ಧಾರ ಕಾರ್ಯ ಆರಂಭವಾಗಿದ್ದ ಶ್ರೀಮಂತಗಡದ ಹೊಳಲಮ್ಮದೇವಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ಹಿನ್ನೆಲೆ ರಥಸಪ್ತಮಿ ದಿನವಾದ ಭಾನುವಾರ ಶ್ರೀದೇವಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿ ಕೊಡಲಾಯಿತು. ಭಾನುವಾರ ಬೆಳಗ್ಗೆಯಿಂದ ಆರಂಭವಾಗಿದ್ದ ಪೂಜಾ ಕೈಂಕರ್ಯಗಳು ಮಧ್ಯಾಹ್ನ ೧೨ ಗಂಟೆಯವರೆಗೂ ನಡೆದವು.ನೂತನವಾಗಿ ನಿರ್ಮಾಣಗೊಂಡ ದೇವಸ್ಥಾನದಲ್ಲಿ ಹೊಳಲಮ್ಮ ದೇವಿಗೆ ಕಳೆ ತುಂಬಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಅಲ್ಲದೆ ಅನೇಕ ಭಕ್ತಿ ಸಮರ್ಪಣೆ ಕಾರ್ಯಕ್ರಮಗಳು ಹಾಗೂ ಹೋಮ ಹವನಗಳನ್ನು ನೆರವೇರಿಸಲಾಯಿತು. ಕಳೆದ ಒಂದು ವರ್ಷದಿಂದ ಹೊಳಲಮ್ಮ ದೇವಿಯ ದರ್ಶನಕ್ಕಾಗಿ ಕಾಯುತ್ತಿದ್ದ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವಿಯ ಆಶೀರ್ವಾದ ಪಡೆದು ಪುನೀತರಾದರು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ ಆಗಮಿಸಿ ದೇವಿಯ ದರ್ಶನ ಪಡೆದರು. ಈ ವೇಳೆ ಸುಜಾತಾ ದೊಡ್ಡಮನಿ, ರಾಮಣ್ಣ ಲಮಾಣಿ, ಹುಮಾಯೂನ ಮಾಗಡಿ, ಶಿವನಗೌಡ ಪಾಟೀಲ, ಅಪ್ಪಣ್ಣ ಇನಾಮದಾರ, ಸಿದ್ದು ಪಾಟೀಲ, ಎಂ.ಕೆ. ಲಮಾಣಿ, ದೇವಪ್ಪ ಲಮಾಣಿ, ವೀರುಪಾಕ್ಷ ನಂದೆಣ್ಣವರ, ಡಿ.ಕೆ. ಹೊನ್ನಪ್ಪನವರ, ಸ್ವರಾಜ ಹಾದಿಮನಿ, ವೀರೇಂದ್ರ ಪಾಟೀಲ, ವೀರಯ್ಯ ಮಠಪತಿ, ಸಿ.ಟಿ. ಮುಂಡವಾಡ, ರಾಜು ಮಡಿವಾಳರ, ಗುರುನಾಥ ದಾನಪ್ಪನವರ, ಶಿವನಗೌಡ್ರ ಪಾಟೀಲ, ಫಕ್ಕಿರೇಶ ಮ್ಯಾಟಣ್ಣವರ, ವೀರೇಶ ಕುಬಿಹಾಳ ಹಾಗೂ ದೇವಸ್ಥಾನ ಟ್ರಸ್ಟ್ ಕಮಿಟಿಯವರು ಇದ್ದರು.