ಕನ್ನಡಪ್ರಭ ವಾರ್ತೆ ಉಡುಪಿ
ಯೂ ಟರ್ನ್ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಇಂದಿನಿಂದ (ಡಿ.10) ಡಿ.16ರ ವರೆಗೆ ಉಡುಪಿಯಿಂದ ಬೆಳಗಾವಿಗೆ ಅಂಬೇಡ್ಕರ್ ಜಾಥಾ-2 ನಡೆಯಲಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್ ಹೇಳಿದರು.ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಆರಂಭದಲ್ಲಿ ನೀಡಿದ್ದ ಎಲ್ಲ ಭರವಸೆಗಳಿಂದ ಯೂ ಟರ್ನ್ ಹೊಡೆದಿದ್ದು, ಈ ನಂಬಿಕೆದ್ರೋಹಿ ಸರ್ಕಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಈ ಚಲೋ ಬೆಳಗಾವಿ - ಅಂಬೇಡ್ಕರ್ ಜಾಥಾವನ್ನು ಆಯೋಜಿಸಲಾಗುತ್ತಿದೆ. ಸರ್ಕಾರವು ದಲಿತರ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಾಗಿದ್ದ ಅನುದಾನವನ್ನು ತನ್ನ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.ಕಾಂತರಾಜ್ ವರದಿಯನ್ನು ಜಾರಿಗೊಳಿಸುವ, ಅಸ್ಪೃಶ್ಯ ಸಮುದಾಯಗಳಿಗೆ ಒಳಮೀಸಲಾತಿ ಮತ್ತು ಮುಸ್ಲಿಂ ಸಮುದಾಯಕ್ಕೆ ರದ್ದಾಗಿರುವ 2ಬಿ ಮೀಸಲಾತಿಗಳನ್ನು ಪುನಃ ನೀಡುವುದಾಗಿ ಸ್ವತಃ ಸಿದ್ದರಾಮಯ್ಯ ಅವರೇ ಭರವಸೆ ನೀಡಿದ್ದರು. ವರ್ಷ ಕಳೆದರೂ ಈ ಬೇಡಿಕೆಗಳನ್ನು ಈಡೇರಿಸಿಲ್ಲ. ವಕ್ಫ್ ವಿಷಯದಲ್ಲಿಯೂ ರಾಜ್ಯ ಸರ್ಕಾರವು ಕೋಮುವಾದಿಗಳ ಅಪಪ್ರಚಾರಕ್ಕೆ ಮಣಿದಿದೆ. ಈ ಎಲ್ಲ ಉದ್ದೇಶಕ್ಕಾಗಿ ಜಾಥಾವನ್ನು ನಡೆಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೂಡ್ಲಿಪೇಟೆ, ರಾಜ್ಯ ಕಾರ್ಯದರ್ಶಿಗಳಾದ ರಿಯಾಝ್ ಕಡಂಬು, ಮಾಧ್ಯಮ ಸಂಯೋಜಕ ರಂಜಾನ್ ಕಡಿವಾಳ್, ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ಉಪಸ್ಥಿತರಿದ್ದರು...............ಅನುಮತಿ ನೀಡದಿದ್ರೆ ಉಡುಪಿಯಲ್ಲೇ 6 ದಿನ ಪ್ರತಿಭಟನೆ!ಉಡುಪಿಯಿಂದ ಆರಂಭವಾಗಿ 11 ಜಿಲ್ಲೆಗಳ ಮೂಲಕ 7 ದಿನಗಳ ಕಾಲ ನಡೆಯುವ ಈ ಜಾಥಾಕ್ಕೆ ರಾಜ್ಯ ಎಡಿಜಿಪಿ ಅನುಮತಿ ನೀಡಿದ್ದಾರೆ. ಅವರು ಎಲ್ಲ ಜಿಲ್ಲೆಗಳ ಎಸ್ಪಿ ಅವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೋರಡಿಸಿದ್ದಾರೆ. ಆದರೆ ಉಡುಪಿಯಲ್ಲಿ ಜಾಥಾವನ್ನು ಆರಂಭಿಸಲು ಉಡುಪಿ ಜಿಲ್ಲಾ ಎಸ್ಪಿ ಅನುಮತಿಯನ್ನು ನಿರಾಕರಿಸಿದ್ದಾರೆ. ಅವರು ಯಾವ ಕಾನೂನಿನಡಿ ಈ ಅನುಮತಿಯನ್ನು ನಿರಾಕರಿಸಿದ್ದಾರೆ ಎಂಬುದನ್ನು ತಿಳಿಸಬೇಕು, ಇಲ್ಲದಿದ್ದಲ್ಲಿ ಎಲ್ಲ 11 ಜಿಲ್ಲೆಗಳ ಕಾರ್ಯಕರ್ತರನ್ನು ಉಡುಪಿಗೆ ಬರಮಾಡಿಕೊಂಡು ಪ್ರತಿಭಟನೆ ನಡೆಸುತ್ತೇವೆ. ಎಸ್ಪಿಯವರು ಸಾರ್ವಜನಿಕವಾಗಿಯೇ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಬಿ.ಆರ್. ಪ್ರಸಾದ್ ಸವಾಲೆಸೆದರು.