ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಸರ್ಕಾರಿ ಶಾಲೆಯ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಸಲುವಾಗಿ ಅಜೀಂ ಪ್ರೇಂಜಿ ಫೌಂಡೇಶನ್ ನೆರವಿನೊಂದಿಗೆ ಶೀಘ್ರದಲ್ಲೇ ವಾರದಲ್ಲಿ ಆರು ದಿನ ಮೊಟ್ಟೆ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಶನಿವಾರ ಸಂಜೆ ಪಟ್ಟಣದಲ್ಲಿ ಪೋಲೀಸ್ ಇಲಾಖೆಯ 20.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಟ್ಟಣ ಠಾಣೆ, 24 ವಸತಿ ಗೃಹ ಸಮುಚ್ಚಯ, ಅಗ್ನಿ ಶಾಮಕದಳ ಘಟಕ ಮತ್ತು ಕೋಣಂದೂರಿನಲ್ಲಿ ನಿರ್ಮಿಸಲಾದ 12 ವಸತಿ ಗೃಹಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಇದಕ್ಕೆ ವಾರ್ಷಿಕ 1400 ಕೋಟಿ ವೆಚ್ಚವಾಗಲಿದೆ. ಜೊತೆಗೆ ಸರ್ಕಾರಿ ಶಾಲೆಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ 3000 ಕೆಪಿಎಸ್ ಶಾಲೆಗಳನ್ನು ಕೂಡ ತೆರೆಯಲು ಉದ್ದೇಶಿಸಲಾಗಿದೆ ಎಂದರು.
ಕಾನೂನು ಪಾಲನೆಯೊಂದಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಗಾಂಜಾ ಮತ್ತು ಶಾಂತಿಭಂಗ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಅತ್ಯಂತ ಬಿಗಿ ಕ್ರಮ ಕೈಗೊಳ್ಳುವ ಮೂಲಕ ಕಡಿವಾಣ ಹಾಕುವ ಅಗತ್ಯವಿದೆ. ಹಣದಾಸೆಗೆ ಬಿದ್ದ ಸ್ವಾರ್ಥಿಗಳು ಕೃಷಿಭೂಮಿಯಲ್ಲೂ ಗಾಂಜಾ ಬೆಳೆಯುವ ದುಷ್ಕೃತ್ಯಕ್ಕೆ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಮಾಜಕ್ಕೆ ಮಾರಕವಾದ ಈ ದಂಧೆಗಳಿಗೆ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕಿದೆ ಎಂದರು.ಸಾರ್ವಜನಿಕರ ರಕ್ಷಣೆಗೆ ದಿನದ 24 ತಾಸು ಶ್ರಮಿಸುವ ಪೋಲಿಸರು ಮತ್ತು ಬೆಂಕಿ ಅವಘಡ ಮತ್ತು ಪ್ರವಾಹ ಮುಂತಾದ ಸಂಧರ್ಭಗಳಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವ ಅಗ್ನಿ ಶಾಮಕದಳದ ಸಿಬ್ಬಂದಿಗೂ ವಸತಿ ಸೌಲಭ್ಯದೊಂದಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕುಟುಂಬಗಳಿಗೆ ಆರೋಗ್ಯ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸದಾ ಸಾರ್ವಜನಿಕರ ನಿಂದನೆಗೆ ಒಳಗಾಗುವವರೆಂದರೆ ಪೋಲಿಸರು. ಈಚಿನ ವರ್ಷಗಳಲ್ಲಿ ಇಲಾಖೆಗೆ ಇಂಜಿನಿಯರಿಂಗ್ ಎಂಸಿಎ ಸೇರಿದಂತೆ ಸ್ನಾತಕೋತ್ತರ ಪಧವೀಧರರು ಕೂಡ ಸೇರ್ಪಡೆಯಾಗುತ್ತಿದ್ದಾರೆ. ಈ ಇಲಾಖೆಯಲ್ಲಿ ಕೆಲಸ ಮಾಡುವ ಕೆಳವರ್ಗದ ಸಿಬ್ಬಂದಿಗಳು ಈಚಿನವರೆಗೂ ಬ್ರಿಟೀಷ್ ಕಾಲದ ಕಟ್ಟಡಗಳಲ್ಲೇ ವಾಸ ಮಾಡುವ ಅನಿವಾರ್ಯತೆ ಇತ್ತು. ಈ ಸಿಬ್ಬಂದಿಗಳಿಗೆ ಸೂಕ್ತ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ನನ್ನ ಹಿಂದಿನ ಅಧಿಕಾರವಧಿಯಲ್ಲಿ ಸಾವಿರಾರು ಮಂದಿಗೆ ವಸತಿ ಸೌಲಭ್ಯದೊಂದಿಗೆ 108 ಪೋಲಿಸ್ ಸ್ಟೇಶನ್‍ಗಳನ್ನು ಮಂಜೂರು ಮಾಡಿಸಿದ್ದೇನೆ ಎಂದರು.ಈ ಕ್ಷೇತ್ರಕ್ಕೆ ತಂದಿರುವ ಅನುದಾನದಲ್ಲಿ ಪಟ್ಟಣ ಠಾಣೆ, 24 ವಸತಿ ಗೃಹ ಮತ್ತು ಕೋಣಂದೂರಿನಲ್ಲಿ ನಿರ್ಮಿಸಲಾದ 12 ವಸತಿ ಗೃಹಗಳ ಸಮುಚ್ಚಯದ ಜೊತೆಗೆ ಈ ಭಾಗಕ್ಕೆ ಅತ್ಯಂತ ಅಗತ್ಯವಾಗಿದ್ದ 3 ಕೋಟಿ ರು. ಅನುದಾನದ ಅಗ್ನಿಶಾಮಕದಳ ಘಟಕ ಉದ್ಘಾಟನೆ ಇಂದು ನೆರವೇರುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿಜಿಪಿ ಡಾ.ಕೆ.ರಾಮಚಂದ್ರರಾವ್, ಇಲಾಖೆಯಲ್ಲಿ 1.10 ಲಕ್ಷ ಸಿಬ್ಬಂದಿಗಳಿದ್ದಾರೆ. ಇವರಲ್ಲಿ ಶೇ. 96% ಕಾನ್ಸ್‍ಟೇಬಲ್ ಹಂತದ ಸಿಬ್ಬಂದಿಗಳಾಗಿದ್ದು ಇವರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ನೆರವು ಅಗತ್ಯ. ಸಿಬ್ಬಂದಿಗಳ ವಸತಿ ನಿರ್ಮಾಣದ ಸಲುವಾಗಿ ಸರ್ಕಾರ 200 ಕೋಟಿ ಮಂಜೂರು ಮಾಡಿದ್ದು ಅದರಲ್ಲಿ 100 ಕೋಟಿ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ 6 ಸಾವಿರ ಕ್ವಾರ್ಟರ್ಸ್ ನಿರ್ಮಿಸಬೇಕಿದೆ ಎಂದರು.ವೇದಿಕೆಯಲ್ಲಿ ಎಂಎಲ್ಸಿ ಬಲ್ಕೀಶ್ ಭಾನು, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಪೂರ್ವ ವಲಯ ಐಜಿಪಿ ಬಿ.ರಮೇಶ್, ಹೆಚ್ಚುವರಿ ಮಹಾ ನಿರ್ದೆಶಕ ಅಗ್ನಿಶಾಮಕದಳದ ಎಂ.ನಂಜುಂಡಸ್ವಾಮಿ, ಹಾಗೂ ಪಟ್ಟಣ ಪಂಚಾಯ್ತಿ ಹಾಗೂ ಕೋಣಂದೂರು ಮತ್ತು ನಗರ ಗ್ರಾಪಂ ಸದಸ್ಯರು ವೇದಿಕೆಯಲ್ಲಿದ್ದರು. ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸ್ವಾಗತಿಸಿದರು. ಈ ಎಲ್ಲಾ ಕಾಮಗಾರಿಗಳ ಗುತ್ತಿಗೆದಾರ ಎಸಿಸಿ ಕೃಷ್ಣಮೂರ್ತಿಯವರನ್ನು ಗೌರವಿಸಲಾಯಿತು.