ಕನ್ನಡಪ್ರಭ ವಾರ್ತೆ ಟಿ. ನರಸೀಪುರನದಿಯಲ್ಲಿ ಸ್ನಾನ ಮಾಡಲು ಹೋದ ತಾತ ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಜಲ ಸಮಾಧಿಯಾಗಿರುವ ಘಟನೆ ಹಳೇ ತಿರುಮಕೂಡಲು ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.ಹಳೇ ತಿರುಮಕೂಡಲು ಗ್ರಾಮದ ನಿವಾಸಿ, ವೃತ್ತಿಯಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಸಿ. ದೀಪಕ್ ಎಂಬುವರ ತಂದೆ ಚೌಡಯ್ಯ (65) ಹಾಗೂ ಮಕ್ಕಳಾದ ಭರತ್ ಗೌಡ (11) ಮತ್ತು ಧನುಷ್ ಗೌಡ(9) ಎಂಬುವರೇ ನದಿಯಲ್ಲಿ ಸ್ನಾನ ಮಾಡಲು ಹೋಗಿ ಜಲಸಮಾಧಿಯಾದ ದುರ್ದೈವಿಗಳು.ಭರತ್ ಗೌಡ ಪಟ್ಟಣದ ಶಾಲೆಯೊಂದರಲ್ಲಿ 5 ನೇ ತರಗತಿಯಲ್ಲಿ ಹಾಗೂ ಧನುಷ್ ಗೌಡ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,ತಮ್ಮ ಮನೆಯಲ್ಲಿ ಸಾಕಿದ್ದ ಹಸುವೊಂದು ಕರು ಹಾಕಿದ್ದ ಹಿನ್ನೆಲೆ ಹಸುವಿನ ಗರ್ಭಕೋಶದ ಕಸವನ್ನು ನದಿಗೆ ಹಾಕುವ ವೇಳೆ ಈ ದುರ್ಘಟನೆ ಸಂಭವಿಸಿದೆ.ಪಟ್ಟಣಕ್ಕೆ ನಿರಂತರವಾಗಿ ನೀರು ಪೂರೈಕೆ ಮಾಡುವ ಹಳೇ ಕಾವೇರಿ ಸೇತುವೆ ಪಕ್ಕದ ಜಾಕ್ ವೆಲ್ ಬಳಿ ಹಸುವಿನ ಗರ್ಭ ಕೋಶದ ಕಸವನ್ನು ಹಾಕಿದ ನಂತರ ಸ್ನಾನ ಮಾಡಲು ಹೋದಾಗ ಭರತ್ ಗೌಡ ಹಾಗೂ ಧನುಷ್ ಗೌಡ ಕಾಲು ಜಾರಿ ನದಿಯಲ್ಲಿ ಮುಳುಗಿದ್ದಾರೆ. ಇದೇ ವೇಳೆ ಮೊಮ್ಮಕ್ಕಳನ್ನು ರಕ್ಷಿಸಲು ಮುಂದಾದ ಚೌಡಯ್ಯ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಒಂದೇ ಕುಟುಂಬದ ಮೂರು ಜೀವಗಳು ನದಿಯಲ್ಲಿಮುಳುಗಿ ಮೃತಪಟ್ಟಿದ್ದು, ಮೃತ ದೇಹಗಳನ್ನಿಟ್ಟಿದ್ದ ಸಾರ್ವಜನಿಕ ಶವಾಗಾರದ ಬಳಿ ಕುಟುಂಬದವರ ಆಕ್ರಂದನಮುಗಿಲು ಮಟ್ಟಿತ್ತು.ಘಟನೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಧನಂಜಯ್ ಮಾರ್ಗದರ್ಶನದಲ್ಲಿ ಎಎಸ್.ಐ ಶಿವಕುಮಾರ್ ಪ್ರಕರಣ ದಾಖಲಿಸಿದ್ದಾರೆ. ಪಿಎಸ್.ಐ ಜಗದೀಶ್ ದೂಳ್ ಶೆಟ್ಟಿ, ಎಎಸ್.ಐ ಪಚ್ಚೇಗೌಡ, ಮುಖ್ಯಪೇದೆ ಪ್ರಭಾಕರ್ ಸ್ಥಳಕ್ಕೆ ಭೇಟಿ ನೀಡಿದ್ದರು. ತಲಾ 2 ಲಕ್ಷ ಪರಿಹಾರಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆದೇಶದ ಮೇರೆಗೆ ಮೃತ ಕುಟುಂಬಕ್ಕೆ 6 ಲಕ್ಷ ರು. ಗಳ ಪರಿಹಾರ ಘೋಷಣೆ ಮಾಡಿದರು. ಯತೀಂದ್ರ ಸಿದ್ದರಾಮಯ್ಯ ಪಟ್ಟಣಕ್ಕೆ ಭೇಟಿ ನೀಡುವ ಸಮಯದಲ್ಲಿ ಮೃತ ಕುಟುಂಬದವರಿಗೆ ಪರಿಹಾರದ ಚೆಕ್ ನೀಡಲಾಗುತ್ತದೆ, ಸ್ಥಳದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಸಿ.ಟಿ. ಕುಮಾರ್ ಇದ್ದರು.---------------