‘ಕನ್ನಡಪ್ರಭ’ದ ಪ್ರಧಾನ ಸಂಪಾದಕರಾದ ರವಿ ಹೆಗಡೆ ಸೇರಿ 6 ಮಂದಿಗೆ ವಿಎಸ್‌ಕೆ ಮಾಧ್ಯಮ ಪ್ರಶಸ್ತಿ

KannadaprabhaNewsNetwork |  
Published : Jun 30, 2025, 12:34 AM ISTUpdated : Jun 30, 2025, 09:42 AM IST
ವಿಶ್ವ ಸಂವಾದ ಕೇಂದ್ರ(ವಿಎಸ್‌ಕೆ) ಕರ್ನಾಟಕ ಘಟಕವು ಭಾನುವಾರ ನಗರದಲ್ಲಿ ಆಯೋಜಿಸಿದ್ದ ವಿಎಸ್‌ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ, ಪತ್ರಕರ್ತರಾದ ಕೆ.ಎಸ್‌.ಜಯಲಕ್ಷ್ಮೀ, ರಾಮುಪಾಟೀಲ್‌, ಹರಿಪ್ರಸಾದ್‌, ಅಂಕಣಕಾರ ರಾಧಾಕೃಷ್ಣ ಕಲ್ಚಾರ್‌ ಮತ್ತು ಡಿಜಿಟಲ್‌ ಮಾಧ್ಯಮ ಪತ್ರಕರ್ತೆ ಮುಮ್ತಾಸ್‌ ಅಬ್ದುಲ್‌ ನೆಲ್ಯಡ್ಕ ಅವರಿಗೆ  ವಿವಿಧ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಆರೆಸ್ಸೆಸ್‌ನ ಸಹ ಸಹ ಬೌದ್ಧಿಕ್‌ ಪ್ರಮುಖ್‌ ಸುಧೀರ್‌, ವಿಎಸ್‌ಕೆ ಕರ್ನಾಟಕ ಅಧ್ಯಕ್ಷ ಡಾ.ವಿ.ಶ್ರೀಧರ್‌ ಉಪಸ್ಥಿತರಿದ್ದರು. . | Kannada Prabha

ಸಾರಾಂಶ

 ವಿಎಸ್‌ಕೆ ಕರ್ನಾಟಕ ಘಟಕವು ಭಾನುವಾರ ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಎಸ್‌ಕೆ ಮಾಧ್ಯಮ ಪ್ರಶಸ್ತಿ-2025’ ಪ್ರದಾನ ಸಮಾರಂಭದಲ್ಲಿ ‘ಕನ್ನಡಪ್ರಭ’ದ ಪ್ರಧಾನ ಸಂಪಾದಕ ರವಿ ಹೆಗಡೆ ಸೇರಿದಂತೆ ಆರು ಮಂದಿ ಪತ್ರಕರ್ತರು, ಅಂಕಣಕಾರರಿಗೆ   ಪತ್ರಿಕೋದ್ಯಮ ಪ್ರಶಸ್ತಿ  

 ಬೆಂಗಳೂರು :  ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಹಾಗೂ ಸ್ವಾತಂತ್ರ್ಯಾ ನಂತರ ರಾಷ್ಟ್ರ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್‌ ಪ್ರಮುಖ್‌ ಸುಧೀರ್‌ ಹೇಳಿದ್ದಾರೆ.

ವಿಶ್ವ ಸಂವಾದ ಕೇಂದ್ರ(ವಿಎಸ್‌ಕೆ) ಕರ್ನಾಟಕ ಘಟಕವು ಭಾನುವಾರ ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಎಸ್‌ಕೆ ಮಾಧ್ಯಮ ಪ್ರಶಸ್ತಿ-2025’ ಪ್ರದಾನ ಸಮಾರಂಭದಲ್ಲಿ ‘ಕನ್ನಡಪ್ರಭ’ದ ಪ್ರಧಾನ ಸಂಪಾದಕ ರವಿ ಹೆಗಡೆ ಸೇರಿದಂತೆ ಆರು ಮಂದಿ ಪತ್ರಕರ್ತರು, ಅಂಕಣಕಾರರಿಗೆ ವಿವಿಧ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಅಭಿನಂದಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟವನ್ನು ಪ್ರಬಲ ಆಂದೋಲನವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವು. ಸಾಮಾನ್ಯ ಜನರಲ್ಲಿ ದೇಶಭಕ್ತಿ, ಸ್ವದೇಶಾಭಿಮಾನದ ಕಿಚ್ಚು ಹೊತ್ತಿಸಿ ಸ್ವಾತಂತ್ರ್ಯ ಹೋರಾಟದ ಜ್ವಾಲೆ ಸದಾ ಪ್ರಜ್ವಲಿಸುವಂತೆ ಮಾಡಿದ ಶ್ರೇಯಸ್ಸು ಅವತ್ತಿನ ಪತ್ರಿಕೆಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ದಾರಿ ತಪ್ಪದಂತೆ ಎಚ್ಚರಿಸುತ್ತಾ, ಜನಸಾಮಾನ್ಯರಲ್ಲಿ ಪ್ರತಿಯೊಂದು ವಿಚಾರದಲ್ಲೂ ಜಾಗೃತಿ ಮೂಡಿಸುವ ಕೆಲಸವನ್ನು ಪತ್ರಿಕೆಗಳು ನಿರ್ವಹಿಸುತ್ತಾ ಬಂದಿವೆ. ಒಟ್ಟಿನಲ್ಲಿ ಸ್ವಾತಂತ್ರ್ಯ ಚಳವಳಿ ರೂಪಿಸುವ ಜೊತೆಗೆ ರಾಷ್ಟ್ರ ನಿರ್ಮಾಣ, ಅಭಿವೃದ್ಧಿ, ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಮಾಧ್ಯಮಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದರು.

ಪತ್ರಿಕೆಗಳು ರಾಜಿ ಆಗಬಾರದು- ರವಿ ಹೆಗಡೆ:

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಅವರು, ಪತ್ರಿಕೋದ್ಯಮ ವಾಣಿಜ್ಯೀಕರಣದ ಚೌಕಟ್ಟಿನಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇವತ್ತಿನ ಕಾಲಘಟ್ಟದ ಪತ್ರಕರ್ತರಿಗೆ ಇದ್ದರೂ ಸಮಾಜದ ಒಳಿತು ಮತ್ತು ರಾಷ್ಟ್ರಧರ್ಮದಂತಹ ಪತ್ರಿಕೋದ್ಯಮದ ಮೂಲ ಉದ್ದೇಶದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಪಡೆಯುವುದೇ ಪತ್ರಿಕೋದ್ಯಮದ ಧ್ಯೇಯವಾಗಿತ್ತು. ಸ್ವಾತಂತ್ರ್ಯಾನಂತರ ರಾಷ್ಟ್ರ ನಿರ್ಮಾಣವೇ ಧ್ಯೇಯವಾಗಿತ್ತು. ಆದರೆ, ಇವತ್ತಿನ ಸಂದರ್ಭದಲ್ಲಿ ಅದೆಲ್ಲವನ್ನೂ ಮೀರಿ ವಾಣಿಜ್ಯೋದ್ಯಮವೇ ಧ್ಯೇಯವಾಗಿದೆ. ನಿಜ ಪತ್ರಿಕೋದ್ಯಮ ಸಂಪೂರ್ಣ ಉದ್ಯಮವಾಗಿ ಪರಿವರ್ತನೆಯಾಗಿದೆ. ಅದನ್ನು ನಾವು ತಳ್ಳಿ ಹಾಕಲೂ ಸಾಧ್ಯವಿಲ್ಲ. ವಾಣಿಜ್ಯೀಕರಣವನ್ನು ಬಿಟ್ಟು ಪತ್ರಿಕೆಗಳು ಉಳಿಯಲೂ ಸಾಧ್ಯವಿಲ್ಲ. ಹಾಗಾಗಿ ವಾಣಿಜ್ಯೀಕರಣದ ಚೌಕಟ್ಟಿನಲ್ಲೇ ಈಗಿನ ಪತ್ರಕರ್ತರು ಕೆಲಸ ಮಾಡುವುದು ಅನಿವಾರ್ಯ. ಹಾಗಂತ ಪತ್ರಿಕೋದ್ಯಮದ ಮೂಲ ಉದ್ದೇಶ ಸಮಾಜದ ಒಳಿತು ಮತ್ತು ರಾಷ್ಟ್ರಧರ್ಮದ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವ ಅಗತ್ಯ ಇಲ್ಲ. ರಾಜಿಯಾಗದೆ ವಾಣಿಜ್ಯೀಕರಣದ ಚೌಕಟ್ಟಿನಲ್ಲಿ ಕೆಲಸ ಮಾಡಲು ಸಾಧ್ಯ ಎಂದು ನಾವು ಅನೇಕ ಕಾರ್ಯಗಳ ಮೂಲಕ ತೋರಿಸಿದ್ದೇವೆ. ರಾಷ್ಟ್ರಧರ್ಮ ಅಥವಾ ದೇಶ ಮೊದಲು ಎನ್ನುವ ವಿಚಾರದಲ್ಲಿ ನನ್ನ ಸುದ್ದಿ ಸಂಸ್ಥೆಯ ಧ್ಯೇಯ ಕೂಡ ನೇರ, ದಿಟ್ಟ, ನಿರಂತರ. ಇದಕ್ಕಾಗಿ ಸಂಸ್ಥೆಗೆ ಅಭಾರಿಯಾಗಿದ್ದೇನೆ ಎಂದರು.

ನನಗೆ ತಿ.ತಾ.ಶರ್ಮ ಪ್ರಶಸ್ತಿ ಲಭಿಸಿರುವುದು ತಿಳಿದಾಗ ಪುಳಕ ಆಯಿತು. ಅವರ ಆದರ್ಶಗಳು, ಸಾಧನೆಗಳು ನೆನಪಾಗಿ ಆ ದಿಕ್ಕಿನಲ್ಲಿ ಸಾಗುವ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಶಿ ನಾಗರಾಜ್ ಅವರ ‘ಆಪರೇಷನ್ ಸಿಂದೂರ’ ಪುಸ್ತಕ ಬಿಡುಗಡೆ ಮಾಡಲಾಯಿತು. ವಿಎಸ್‌ಕೆ ಕರ್ನಾಟಕ ಅಧ್ಯಕ್ಷ ಡಾ.ವಿ. ಶ್ರೀಧರ್ ವೇದಿಕೆಯಲ್ಲಿದ್ದರು.

PREV
Read more Articles on

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?