ಕನ್ನಡಪ್ರಭ ವಾರ್ತೆ ಮೈಸೂರುಡಿ. ದೇವರಾಜ ಅರಸು ಅವರು ಉಳುವವನಿಗೆ ಭೂಮಿಯನ್ನು ಕೊಟ್ಟರು. ನಾವು ದೇವರನ್ನು ನೋಡಿಲ್ಲ. ಆದರೆ ಬಡವರ, ದಲಿತರ ಶೋಷಿತರ ಪಾಲಿಗೆ ಅರಸು ದೇವರಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ತಿಳಿಸಿದರು.ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಡಿ. ದೇವರಾಜ ಅರಸ್ ಅವರ 44ನೇ ಪುಣ್ಯಸ್ಮರಣೆ ಹಾಗೂ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಅರಸು ಕಷ್ಟದಲ್ಲಿ ಸಹಾಯ ಮಾಡಿ ಜೀವನಕ್ಕೆ ದಾರಿ ತೋರಿದವರು. ಬಹಳ ಕಷ್ಟಕರವಾದ ಸನ್ನಿವೇಶದಲ್ಲಿ ಬದುಕುವ, ಉಣ್ಣಲು ಭೂಮಿ ಕೊಟ್ಟು ಸಹಾಯ ಮಾಡಿದ ಅರಸು ಸದಾ ಕಾಲ ಅಜರಾಮರವಾಗಿ ಉಳಿದಿದ್ದಾರೆ ಎಂದರು.ಡಿ. ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದಾಗ ಉಳುವವನಿಗೆ ಭೂ ಒಡೆಯ, ಜೀತ ಪದ್ಧತಿ ನಿರ್ಮೂಲನೆ, ತಲೆಯ ಮೇಲೆ ಮಲಹೊರುವುದನ್ನು ನಿಷೇಧಿಸಿದರು. ಎರಡನೇ ಬಾರಿಗೆ ಸಿಎಂ ಆದ ಮೇಲೆ ಸ್ವಪಕ್ಷೀಯರ ಕುತಂತ್ರದಿಂದ ಅಧಿಕಾರದಿಂದ ಕೆಳಗಿಳಿಯಬೇಕಾಯಿತು ಎಂದು ಅವರು ಹೇಳಿದರು.ಡಿ. ದೇವರಾಜ ಅರಸು ದಾರಿಯಲ್ಲಿ ಸಾಗಿದ ಸಿದ್ದರಾಮಯ್ಯ ಅವರು ಕೂಡ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಮಹತ್ವದ ಯೋಜನೆಗಳನ್ನು ತಂದಿದ್ದರಿಂದಾಗಿ ಕರ್ನಾಟಕ ಪ್ರತಿಯೊಬ್ಬರ ತಲಾ ಆದಾಯ ಹೆಚ್ಚಳಕ್ಕೆ ಕಾರಣವಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರಿಂದ ಬಡವರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಪ್ರಾಮಾಣಿಕತೆ, ಬದ್ದತೆಯಿಂದ ಸಮಾಜಮುಖಿ ಯೋಜನೆಗಳನ್ನು ಜಾರಿಗೆ ತಂದರು. ಇಡೀ ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಗೃಹಲಕ್ಷೀ, ಶಕ್ತಿ ಯೋಜನೆ ತಂದ ಫಲವಾಗಿ ಕೋಟ್ಯಂತರ ಮಹಿಳೆಯರ ಸ್ವಾವಲಂಬನೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು. ಪ್ರಶಸ್ತಿ ಪ್ರದಾನಇದೇ ವೇಳೆ ರಮಣಶ್ರೀ ಪ್ರತಿಷ್ಠಾನದ ಸಂಸ್ಥಾಪಕ ನಾಡೋಜ ಎಸ್. ಷಡಕ್ಷರಿ, ಕರ್ನಾಟಕ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಎಸ್.ಎನ್. ಸಂದೇಶ್ ಕುಮಾರ್, ವಿಶ್ರಾಂತ ಕುಲಸಚಿವ ಡಾ. ಸುಂದರರಾಜೇ ಅರಸ್, ಸಾಹಿತಿ ಡಾ. ಗಂಗಾಧರ ಕೊಡ್ಲಿ, ಕ್ರೈಸ್ಟ್ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲೆ ಮರ್ಲಿನ್ ಕ್ರಿಸ್ಟಬೆಲ್ ಮತ್ತು ರೋಟರಿ ಕ್ಲಬ್ ಸಹಾಯಕ ಗವರ್ನರ್ ತಿರುಮಲಾಪುರ ರಾಜೇಗೌಡ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಅರಸು ಜಾಗೃತಿ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಎಂ.ಜಿ.ಆರ್. ಅರಸ್, ಅನ್ವೇಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಮರನಾಥ ರಾಜೇ ಅರಸ್, ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಶ್ರೀನಿವಾಸ ಬಹದ್ದೂರ್ ಮೊದಲಾದವರು ಇದ್ದರು.----ಕೋಟ್...ಕೊಟ್ಟ ಮಾತಿನಂತೆ ಅಧಿಕಾರ ತ್ಯಾಗ ಮಾಡಿದ ಸಿದ್ದರಾಮಯ್ಯ ಅವರು ಹಲವಾರು ಭಾಗ್ಯ, ಗ್ಯಾರಂಟಿ ಯೋಜನೆಗಳನ್ನು ನೀಡಿ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಮಾಡಿದ್ದಾರೆ. ನುಡಿದಂತೆ ನಡೆಯಬೇಕು ಎನ್ನುವ ಕಾರಣಕ್ಕಾಗಿ ಯಾವ ಹಿಂಜರಿಕೆ, ಅಧಿಕಾರದ ಲಾಲಸೆ ಇಲ್ಲದೆ ರಾಜೀನಾಮೆ ಕೊಟ್ಟು ಮತ್ತೊಬ್ಬರಿಗೆ ಮುಖ್ಯಮಂತ್ರಿ ಹುದ್ದೆ ಸಿಗುವಂತೆ ಮಾಡಿ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಮಾತು ಕೊಟ್ಟಂತೆ ಅಧಿಕಾರವನ್ನು ದಾನ ಮಾಡಿದರು.- ಡಾ.ಡಿ. ತಿಮ್ಮಯ್ಯ, ವಿಧಾನಪರಿಷತ್ ಸದಸ್ಯರು