ಹಾನಗಲ್ಲ: ಕರವೇ ಹೋರಾಟದ ಫಲವಾಗಿ ಸರಕಾರ ಕಡ್ಡಾಯ ಕನ್ನಡ ನಾಮಫಲಕ ನಿಯಮ ಜಾರಿ ಮಾಡಿದ್ದು, ವಿಳಂಬವಿಲ್ಲದೆ ಇಡೀ ಜಿಲ್ಲಾದ್ಯಂತ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳು ಸಮರೋಪಾದಿಯಲ್ಲಿ ಅನ್ಯ ಭಾಷಾ ನಾಮಫಲಕಗಳು ಇರುವಲ್ಲಿ ಶೇ.೬೦ರಷ್ಟು ಕನ್ನಡ ನಾಮಫಲಕವಿರುವಂತೆ ಕಡ್ಡಾಯಗೊಳಿಸಬೇಕು ಎಂದು ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಒತ್ತಾಯಿಸಿದರು.
ಸೋಮವಾರ ಹಾನಗಲ್ಲಿನಲ್ಲಿ ಕರವೇ ಸಂಘಟನೆ ಮೂಲಕ ಮೆರವಣಿಗೆ ನಡೆಸಿ, ತಾಲೂಕು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿ, ಆಂಗ್ಲ ಭಾಷೆ ಸೇರಿದಂತೆ ಯಾವುದೇ ಭಾಷೆಯ ಬಗೆಗೆ ನಮ್ಮ ತಿರಸ್ಕಾರವಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇರಲಿ. ಕರ್ನಾಟಕದಲ್ಲಿಯೇ ಕನ್ನಡ ನಾಮಫಲಕಗಳಿಲ್ಲದಿದ್ದರೆ ಎಲ್ಲಿ ಕನ್ನಡ ನಾಮಫಲಕ ಹಾಕುವುದು. ಇದಕ್ಕಾಗಿ ದೊಡ್ಡ ಪ್ರಮಾಣದ ಹೋರಾಟ ರಾಜ್ಯದಲ್ಲಿ ನಡೆದಿದೆ. ಇದಕ್ಕಾಗಿ ಕರವೇ ರಾಜ್ಯಾಧ್ಯಕ್ಷರೂ ಸೇರಿದಂತೆ ಕಾರ್ಯಕರ್ತರು ಜೈಲು ವಾಸ ಅನುಭವಿಸಿದ್ದಾರೆ. ಅಂತಿಮವಾಗಿ ಸರಕಾರ ರಾಜ್ಯಪಾಲರ ಅಂಕಿತವನ್ನೂ ಪಡೆದು ಇಡೀ ರಾಜ್ಯದಲ್ಲಿರುವ ಅಂಗಡಿ ಮುಂಗಟ್ಟು, ಕಚೇರಿಗಳು, ಬ್ಯಾಂಕುಗಳು, ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲ ನಾಮಫಲಕಗಳು ಶೇ.೬೦ರಷ್ಟು ಕನ್ನಡವೇ ಇರಬೇಕು ಎಂಬ ವಿಧೇಯಕ ಮಂಡನೆಯಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕನ್ನಡ ನಾಮಫಲಕ ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಿದರು.ಹಾನಗಲ್ಲಿನ ಹಲವು ಕಡೆ ಕನ್ನಡವೇ ಇಲ್ಲದ ಅನ್ಯಭಾಷಾ ನಾಮಫಲಕಗಳಿವೆ. ಇಲ್ಲಿರುವ ಎಲ್ಲ ಭಾಷಿಕರಿಗೂ ಕನ್ನಡದ ಪ್ರೀತಿ ಕಳಕಳಿ ಬೇಕು. ಕರ್ನಾಟಕದಲ್ಲಿಯೇ ಇದ್ದು ಕನ್ನಡದ ಬಗ್ಗೆ ತಿರಸ್ಕಾರ ಸಲ್ಲದು. ಒಂದು ವಾರದ ಗಡುವನ್ನು ತಾಲೂಕು ಆಡಳಿತಕ್ಕೆ ನೀಡುತ್ತಿದ್ದು ಅಷ್ಟರೊಳಗೆ ಇಡೀ ತಾಲೂಕಿನಲ್ಲಿ ಎಲ್ಲ ನಾಮಫಲಕಗಳು ಕನ್ನಡದಲ್ಲಿಯೇ ಇರುವಂತೆ ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಗಿರೀಶ ತಿಳಿಸಿದರು.
ತಾಲೂಕು ಅಧ್ಯಕ್ಷ ಸಿಕಂದರ ವಾಲಿಕಾರ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿರುವ ಯಾವುದೇ ಭಾಷಿಕರು ನಾವು ಬೀದಿಗಿಳಿದು ಹೋರಾಟ ಆರಂಭಿಸುವ ಮುನ್ನ ಸ್ವಯಂ ಇಚ್ಛೆಯಿಂದ ಕನ್ನಡ ನಾಮಫಲಕಗಳಿಲ್ಲದ ಹಾಗೂ ಶೇ.೬೦ರಷ್ಟು ಕನ್ನಡ ನಾಮಫಲಕವಿಲ್ಲದ ಅಂಗಡಿ ಕಚೇರಿ ವಿವಿಧ ಸಂಘ ಸಂಸ್ಥೆಗಳು ಕೂಡಲೇ ನಾಮಫಲಕ ಬದಲಾಯಿಬೇಕು. ತಪ್ಪಿದಲ್ಲಿ ತಾಲೂಕು ಆಡಳಿತ ಕಠಿಣ ಕ್ರಮಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಟಿಪ್ಪು ಸುಲ್ತಾನ್ ಮಕಾನದಾರ, ತಾಲೂಕು ಉಪಾಧ್ಯಕ್ಷ ಮಾಲತೇಶ ಕಾಳೇರ, ದುದ್ದುಸಾಬ ಅಕ್ಕಿವಳ್ಳಿ, ಜಾಫರ್ ಬಾಳೂರ, ಬಾಬಾಜಾನ ಕೊಂಡವಾಡಿ, ಪವನ ಹರಿಜನ, ಗುಲಮಗೌಸ ಹುಡೇದ, ಮುಬಾರಕ ಪಟೇಗಾರ, ಕಲೀಂ ಮಾಸನಕಟ್ಟಿ, ಸರಫರಾಜ ವಾಲಿಕಾರ, ಪ್ರವೀಣ ಏಸಕ್ಕನವರ, ಅಲಿ ಬಾಳೂರ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.
ಹಾನಗಲ್ಲಿನ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿ ತಾಲೂಕು ತಹಶಿಲ್ದಾರ ಹಾಗೂ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.