60 ಪರ್ಸೆಂಟ್‌ ಆರೋಪಿಸುವವರು ಸಾಬೀತು ಪಡಿಸಿ: ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ

KannadaprabhaNewsNetwork |  
Published : Jan 07, 2025, 12:16 AM ISTUpdated : Jan 07, 2025, 12:51 PM IST
06ಕೆಪಿಆರ್‌ಸಿಆರ್ 01: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ  | Kannada Prabha

ಸಾರಾಂಶ

ರಾಜ್ಯದಲ್ಲಿ ಶೇ.60 ಪರ್ಸೇಂಟ್‌ ಸರ್ಕಾರವಿದೆ ಎಂದು ಬಿಜೆಪಿಗರು ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಗತ್ಯ ದಾಖಲೆಗಳೊಂದಿಗೆ ಸಾಬೀತು ಪಡಿಸಬೇಕೆ ಹೊರತು ಸುಮ್ಮನೇ ಹೇಳಿಕೆಗಳನ್ನು ನೀಡಿದರೆ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ತಿರುಗೇಟು ನೀಡಿದರು.

 ರಾಯಚೂರು : ರಾಜ್ಯದಲ್ಲಿ ಶೇ.60 ಪರ್ಸೇಂಟ್‌ ಸರ್ಕಾರವಿದೆ ಎಂದು ಬಿಜೆಪಿಗರು ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಗತ್ಯ ದಾಖಲೆಗಳೊಂದಿಗೆ ಸಾಬೀತು ಪಡಿಸಬೇಕೆ ಹೊರತು ಸುಮ್ಮನೇ ಹೇಳಿಕೆಗಳನ್ನು ನೀಡಿದರೆ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ತಿರುಗೇಟು ನೀಡಿದರು.

ಸ್ಥಳೀಯ ನಿಜಲಿಂಗಪ್ಪ ಕಾಲೋನಿಯಲ್ಲಿರುವ ಸಚಿವ ಎನ್‌.ಎಸ್‌.ಬೋಸರಾಜು ಅವರ ನಿವಾಸದಲ್ಲಿ ಉಪಹಾರ ಸೇವಿಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯಿಲ್ಲ. ಬೀದರ್‌ ನ ಗುತ್ತಿಗೆದಾರರ ಡೆತ್‌ ನೋಟ್‌ನಲ್ಲಿ ಖರ್ಗೆ ಅವರ ಆಪ್ತರ ಹೆಸರಿದೆ, ಈಶ್ವರಪ್ಪನವರದ್ದು ನೇರವಾಗಿ ಪತ್ರದಲ್ಲಿ ಹೆಸರಿತ್ತು. ಆಪ್ತರ, ಪಿಎಂಗಳ ಹೆಸರು ಇದೆ ಎಂದ ಮಾತ್ರಕ್ಕೆ ಸಚಿವರು ನೇರವಾಗಿ ಹೊಣೆಗಾರರು ಆಗುವುದಿಲ್ಲ, ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.

ಸಾರಿಗೆ ಬಸ್‌ ದರ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ಕೇಂದ್ರದ ಜಿಎಸ್‌ಟಿ ಹೇರಿಕೆ ಬಗ್ಗೆಯೂ ಮಾತನಾಡಬೇಕು, ಕೇಂದ್ರ ಹಣಕಾಸು ಸಚಿವ ಹಳೆಯ ಗಾಡಿಗಳಿಗೆ ಶೇ.18 ರಷ್ಟು ಜಿಎಸ್‌ಟಿ ಹಾಕಿದ್ದಾರೆ. ಸಕ್ಕರೆ, ಕಾರ್‌ ಸೇರಿ ಇತರೆ ವಸ್ತುಗಳಿಗೆ ಶೇ.12 ರಷ್ಟು ಜಿಎಸ್‌ಟಿ ಹೇರಿದ್ದಾರೆ. ಇದರ ವಿರುದ್ಧ ಬಿಜೆಪಿಗರು ಮಾತನಾಡುವುದಿಲ್ಲ. ಬರೀ ಬಸ್‌ ದರದ ಕುರಿತು ವಿರೋಧ ವ್ಯಕ್ತಪಡಿಸಿದರೇ ಹೇಗೆ ಎಂದು ಪ್ರಶ್ನಿಸಿದರು.

ಡಿಸಿಎಂ ಡಿಕೆಶಿ ಅವರನ್ನು ಬಿಟ್ಟು ರಹಸ್ಯ ಸಭೆಯನ್ನು ಮಾಡಿಲ್ಲ. ಅದು ರಹಸ್ಯ ಸಭೆಯಲ್ಲ, ಎಲ್ಲರೂ ಕೂಡಿಯೇ ಸಭೆ ಮಾಡಿದ್ದು, ಅದು ಊಟದ ಸಭೆಯಾಗಿತ್ತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಠಿಯಂತಹ ಚರ್ಚೆಗಳ್ಯಾವು ನಡೆಸಿಲ್ಲ, ಸಚಿವ ಸಂಪುಟದ ವಿಸ್ತರಣೆಯೂ ಇಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿಗಳು ಇದ್ದು ಅವರನ್ನು ಬದಲಾಯಿಸುವ ಅವಶ್ಯಕತೆ ಬರಲ್ಲ. ಈ ಅವಧಿಗೆ ನಾನು, ಸಿಎಂ ಆಗುವುದಿಲ್ಲ, ಮುಂದಿನ ಅವಧಿಗೆ ನಾನು ಸಿಎಂ ಅಂತ ಹೇಳಿದ್ದು, 2028 ಕ್ಕೆ ನಾನೇ ಸಿಎಂ ಅಭ್ಯರ್ಥಿಯಾಗಿದ್ದು ಏನಾಗುತ್ತದೆಯೋ ಕಾದು ನೋಡಬೇಕು ಎಂದು ಹೇಳಿದರು.

ಹಣಕಾಸಿನ ಸಮತೋಲನೆಯಿಲ್ಲದೇ ಕೆಲಸ ಮಾಡಿದ್ದರಿಂದ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್‌ಗಳಿಗೆ ಹಣ ಬಿಡುಗಡೆಯಾಗಿಲ್ಲ. ಈ ಹಿಂದೆ ಆಡಳಿತ ನಡೆಸಿದ ಸರ್ಕಾರದ ಅಸಮತೋಲನ ಬಜೆಟ್ ಅಡಿಯಲ್ಲಿ ಕೆಲಸ ಮಾಡಿದ್ದರಿಂದ ಇದೀಗ ಆ ಕಾಮಗಾರಿಗಳಿಗೆ ದುಡ್ಡು ಕೊಡಬೇಕಾಗಿದ್ದು, ಹೆಚ್ಚುವರಿ ಹಣವನ್ನು ಹೊಂದಿಸಲಾಗುತಿದೆ. ಸಾವಿರ ಕೋಟಿ ಬಜೆಟ್‌ ಇದೆ ಎಂದರೆ ಆ ಮೊತ್ತದಲ್ಲಿಯೇ ಕೆಲಸ ಆಗಿದ್ದರೆ ಹಣ ಬಿಡುಗಡೆ ಮಾಡಬಹುದು. ಆದರೆ, ಸಾವಿರ ಕೋಟಿ ಬಜೆಟ್‌ ಇಟ್ಟು, 3 ಸಾವಿರ ಕೋಟಿ ಕೆಲಸ ಮಾಡಲಾಗಿದೆ. ಆರ್ಥಿಕ ನೆರವಿಲ್ಲದೇ ಕೆಲಸಗಳನ್ನು ಮಾಡಿದ್ದರಿಂದ ಬಿಲ್ ಕೊಡಲು ತಡವಾಗುತ್ತಿದ್ದು, ಕಾಂಗ್ರೆಸ್‌ ಸರ್ಕಾರ ಬಂದ ನಂತರ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಸಚಿವೆ ಎನ್‌.ಎಸ್‌.ಬೋಸರಾಜು, ಸಂಸದ ಕುಮಾರ ನಾಯಕ, ಮುಖಂಡ ಮೊಹಮ್ಮದ್‌ ಶಾಲಂ ಸೇರಿ ಅನೇಕರಿದ್ದರು. 

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!