ನಾಮಫಲಕದಲ್ಲಿ 60% ಕನ್ನಡ: ಮಸೂದೆಗೆ ವಿಧಾನಸಭೆ ಅಸ್ತು

KannadaprabhaNewsNetwork | Updated : Feb 16 2024, 11:33 AM IST

ಸಾರಾಂಶ

ರಾಜ್ಯದ ಎಲ್ಲ ರೀತಿಯ ವ್ಯಾಪಾರ, ವಾಣಿಜ್ಯೋದ್ಯಮಗಳು, ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಇನ್ನಿತರೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಹಾಗೂ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಇರಬೇಕೆಂದು ರೂಪಿಸಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ)ವಿಧೇಯಕ-2024’ಕ್ಕೆ ವಿಧಾನಸಭೆ ಅಸ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಎಲ್ಲ ರೀತಿಯ ವ್ಯಾಪಾರ, ವಾಣಿಜ್ಯೋದ್ಯಮಗಳು, ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಇನ್ನಿತರೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಹಾಗೂ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಇರಬೇಕೆಂದು ರೂಪಿಸಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2024’ಕ್ಕೆ ಗುರುವಾರ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು.

ಕನ್ನಡ ಕಡ್ಡಾಯ ನಿಯಮ ಉಲ್ಲಂಘಿಸಿದವರಿಗೆ ನಿರ್ದಿಷ್ಟ ದಂಡ ವಿಧಿಸುವ ಹಾಗೂ ವ್ಯಾಪಾರ ಪರವಾನಗಿ ರದ್ದುಪಡಿಸಬಹುದಾದ ಅಂಶಗಳನ್ನು ಕೂಡ ನಿಯಮಾವಳಿ ರೂಪಿಸುವಾಗ ಸೇರಿಸುವುದಾಗಿ ಸರ್ಕಾರ ತಿಳಿಸಿದೆ. 

ವಿಧಾನ ಪರಿಷತ್‌ನಲ್ಲೂ ಈ ವಿಧೇಯಕ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತ ಬಿದ್ದರೆ ಅಧಿಕೃತವಾಗಿ ಜಾರಿಯಾಗಲಿದೆ.ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಈ ವಿಧೇಯಕವನ್ನು ಪರ್ಯಾಲೋಚಿಸಿ ಅನುಮೋದಿಸಬೇಕೆಂದು ಸದನವನ್ನು ಕೋರಿದರು. 

ಕೆಲ ಕಾಲ ಚರ್ಚೆಯ ಬಳಿಕ ಧ್ವನಿಮತದ ಮೂಲಕ ಸ್ಪೀಕರ್‌ ಯು.ಟಿ.ಖಾದರ್‌ ವಿಧೇಯಕಕ್ಕೆ ಸದನದ ಅನುಮೋದನೆ ಪಡೆದರು.ಇದನ್ನು ಮುನ್ನ ಪರ್ಯಾಲೋಚನೆ ವೇಳೆ ವಿಪಕ್ಷ ನಾಯಕ ಆರ್‌.ಅಶೋಕ್‌, ಆರಗ ಜ್ಞಾನೇಂದ್ರ, ಎಸ್‌.ಸುರೇಶ್‌ಕುಮಾರ್‌ ಮತ್ತಿತರ ಸದಸ್ಯರು ಮಾತನಾಡಿ, ಈ ಕಾನೂನು ಕಾಗದದಲ್ಲಿ ಉಳಿಯಬಾರದು ನಾಮಫಲಕದಲ್ಲಿ ಕಡ್ಡಾಯ ಬಳಕೆ ಮಾಡಬೇಕೆಂಬುದು ಉಲ್ಲಂಘನೆಯಾದರೆ ಅಂತಹವರಿಗೆ ದಂಡ ವಿಧಿಸುವ ಹಾಗೂ ಅವರ ವ್ಯಾಪಾರ ಪರವಾನಗಿ ರದ್ದು ಮಾಡುವ ಅಂಶಗಳನ್ನು ವಿಧೇಯಕದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಸದಸ್ಯರ ಉತ್ತಮ ಸಲಹೆಗಳನ್ನು ನಿಯಮಾವಳಿ ರೂಪಿಸುವುವಾಗ ಪರಿಗಣಿಸಲಾಗುವುದು. ಕನ್ನಡ ಕಡ್ಡಾಯ ನಿಯಮ ಪಾಲಿಸಿದವರಿಗೆ ದಂಡ ವಿಧಿಸುವ ಜೊತೆಗೆ ಅವರ ವ್ಯಾಪಾರ ಪರವಾನಗಿ ರದ್ದುಪಡಿಸುವ ಅಂಶಗಳನ್ನು ಸೇರಿಸಲಾಗುವುದು. 

ಈ ಕಾನೂನು ಅನುಷ್ಠಾನಕ್ಕೆ ರಾಜ್ಯ ಮಟ್ಟದಲ್ಲಿ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷರು ಹಾಗೂ ಆರು ಸದಸ್ಯರನ್ನೊಳಗೊಂಡ ರಾಜ್ಯಮಟ್ಟದ ಸಮಿತಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ, ತಾಲ್ಲೂಕು ಮಟ್ಟದಲ್ಲಿ ಉಪವಿಭಾಧಿಕಾರಿ ಅಧ್ಯಕ್ಷತೆಯ ಸಮಿತಿಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಿದ್ದು, ಅವು ಜಾರಿ ಪ್ರಾಧಿಕಾರಗಳಾಗಿರುತ್ತವೆ ಎಂದು ವಿವರಿಸಿದರು.

ಕನ್ನಡ ಕಣ್ಗಾವಲು ಆ್ಯಪ್‌: ಕನ್ನಡ ಭಾಷೆಯ ಬಳಕೆಯ ನಿಯಮ ಉಲ್ಲಂಘನೆ ಕುರಿತು ಯಾವುದೇ ವ್ಯಕ್ತಿ ದೂರು ನೀಡಲು ಕನ್ನಡ ಕಣ್ಗಾವಲು ಎಂಬ ಆಪ್ ಕೂಡ ಸಿದ್ಧಪಡಿಸಲಾಗುತ್ತಿದೆ. 

ಇಲ್ಲಿಗೆ ಬರುವ ದೂರುಗಳನ್ನು ಸಂಬಂಧಪಟ್ಟ ಸಮಿತಿಗಳಿಗೆ ಕಳುಹಿಸಿ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮಸೂದೆ ನಾಮಫಲಕ್ಕಷ್ಟೇ ಸೀಮಿತ ಅಲ್ಲ: ಈ ಮಸೂದೆ ಕೇವಲ ನಾಮಫಲಕದಲ್ಲಿ ಕನ್ನಡ ಕಡ್ಡಾಯಕ್ಕಷ್ಟೇ ಸೀಮಿತವಲ್ಲ. ಕನ್ನಡ ಭಾಷೆಯ ವ್ಯಾಪಕ ಬಳಕೆ, ಪ್ರಸಾರ ಮತ್ತು ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರೂಪಿಸಲಾಗಿದೆ. 

ನಾಮಫಲಕ ಮಾತ್ರವಲ್ಲದೆ ಸರ್ಕಾರ, ಸ್ಥಳೀಯ ಪ್ರಾಧಿಕಾರಗಳು ಪ್ರಕಟಣೆಗಾಗಿ ಹೊರಡಿಸಿದ ಎಲ್ಲಾ ಟೆಂಡರ್‌ ಅಧಿಸೂಚನೆಗಳು, ಜಾಹೀರಾತು, ಅರ್ಜಿ ನಮೂನೆಗಳು, ಡಿಜಿಟಲ್‌ ನಮೂನೆಗಳು, ಪ್ರಮಾಣ ಪತ್ರಗಳು ಕೂಡ ಕನ್ನಡದಲ್ಲಿ ಕಡ್ಡಾಯವಾಗಿ ಇರಬೇಕು. 

ಈ ಸಂಸ್ಥೆಗಳು ನೀಡುವ ನೋಟೀಸು, ಬಿಲ್ಲು, ರಸೀದಿ, ನಡೆಸುವ ಎಲ್ಲ ಕಾರ್ಯಕ್ರಮಗಳ ಬ್ಯಾನರು, ಫ್ಲೆಕ್ಸು, ಎಲೆಕ್ಟ್ರಾನಿಕ್‌ ಪ್ರದರ್ಶನ, ಕರಪತ್ರ, ಮಾಹಿತಿ, ನೋಟೀಸುಗಳಲ್ಲೂ ಕನ್ನಡ ಬಳಕೆ ಮಾಡಬೇಕು.

ಜೊತೆಗೆ ಹಾಗೂ ಕನ್ನಡ ಭಾಷೆಯೇ ಮೇಲ್ಭಾಗದಲ್ಲಿ ಇರಬೇಕೆಂಬ ಅಂಶಗಳಷ್ಟೇ ಅಲ್ಲದೆ, 100ಕ್ಕೂ ಹೆಚ್ಚು ಉದ್ಯೋಗಿಗಳಿರುವ ಕೈಗಾರಿಕೆ, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಸೇರಿದಂತೆ ಇತರೆ ಖಾಸಗಿ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳು ಗ್ರಾಹಕರೊಂದಿಗಿನ ದೈನಂದಿನ ಸಂವಹನ, ವ್ಯವಹಾರ ನಿರ್ವಹಣೆಗೆ ಕನ್ನಡ ಕೋಶ ಸ್ಥಾಪಿಸಬೇಕು. 

ರಾಜ್ಯದಲ್ಲಿ ತಯಾರಿಸಿದ ಉತ್ಪನ್ನಗಳ ಹೆಸರು, ಮಾಹಿತಿ ಇತರೆ ಭಾಷೆ ಜೊತೆಗೆ ಕನ್ನಡದಲ್ಲೂ ಇರಬೇಕು. ರಾಜ್ಯದ ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ಸಾರ್ವಜನಿಕರ ಜೊತೆಗಿನ ಸಂಪರ್ಕ, ಪತ್ರ ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯ. 

ಕನ್ನಡ ಭಾಷೆ ಮಾತನಾಡಲು ಬರದ ಉದ್ಯೋಗಿಗಳಿಗೆ ಕನ್ನಡ ಪರಿಚಯಿಸಲು ಕನ್ನಡ ಕಲಿಕಾ ಘಟಕ ಸ್ಥಾಪಿಸಬೇಕು. ರಸ್ತೆಗಳು, ಬಡಾವಣೆ ಪ್ರದೇಶದ ನಾಮಫಲಕದಲ್ಲೂ ಕನ್ನಡ ಕಡ್ಡಾಯಗೊಳಿಸಲಾಗಿದೆ.

ರಾಜ್ಯಪಾಲರ ನಡೆಗೆ ಸರ್ಕಾರದ ಆಕ್ಷೇಪವಿಲ್ಲ
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ 2024 ಜಾರಿಗೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತಾದರೂ ರಾಜ್ಯಪಾಲರು ಅದಕ್ಕೆ ಸಹಿ ಹಾಕದೆ ಹಿಂತಿರುಗಿಸಿದ್ದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಸದನದಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಪ್ರತಿಪಕ್ಷ ಸದಸ್ಯರ ಒತ್ತಾಯದ ಮೇರೆಗೆ ಪ್ರತಿಕ್ರಿಯೆ ನೀಡಿದ ಅವರು, ಅಧಿವೇಶನದ ದಿನಾಂಕ ಪ್ರಕಟವಾಗಿದ್ದರಿಂದ ಸದನದಲ್ಲೇ ಈ ವಿಧೇಯಕ ಅನುಮೋದನೆ ಪಡೆದು ಜಾರಿಗೊಳಿಸಲಿ ಎಂಬ ಸದುದ್ದೇಶದಿಂದ ಅವರು ವಾಪಸ್‌ ಕಳಹಿಸಿದ್ದಾರೆಯೇ ಹೊರತು ಯಾವುದೇ ಆಕ್ಷೇಪ, ವಿರೋಧ ವ್ಯಕ್ತಪಡಿಸಿ ಹಿಂತಿರುಗಿಸಿಲ್ಲ. ಈ ಬಗ್ಗೆ ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ ಎಂದರು.

Share this article