ಕಸ ಬಳಿಯುವ ಮಷಿನ್‌ಗೆ 617 ಕೋಟಿಬಾಡಿಗೆ: ಸಾರ್ವಜನಿಕರ ತೀವ್ರ ಆಕ್ಷೇಪ

KannadaprabhaNewsNetwork |  
Published : Nov 18, 2025, 03:30 AM IST

ಸಾರಾಂಶ

ನಗರ ವ್ಯಾಪ್ತಿಯಲ್ಲಿ ಮುಂದಿನ ಏಳು ವರ್ಷಗಳ ಅವಧಿಗೆ 46 ಕಸ ಬಳಿಯುವ ಯಂತ್ರ ಅಳವಡಿಸಿರುವ ವಾಹನಗಳ ಬಾಡಿಗೆಗೆ ರಾಜ್ಯ ಸರ್ಕಾರ 613 ಕೋಟಿ ರು. ಖರ್ಚು ಮಾಡಲು ಅನುಮೋದನೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರ ವ್ಯಾಪ್ತಿಯಲ್ಲಿ ಮುಂದಿನ ಏಳು ವರ್ಷಗಳ ಅವಧಿಗೆ 46 ಕಸ ಬಳಿಯುವ ಯಂತ್ರ ಅಳವಡಿಸಿರುವ ವಾಹನಗಳ ಬಾಡಿಗೆಗೆ ರಾಜ್ಯ ಸರ್ಕಾರ 613 ಕೋಟಿ ರು. ಖರ್ಚು ಮಾಡಲು ಅನುಮೋದನೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

100 ಕೋಟಿ ರು. ಖರ್ಚು ಮಾಡಿದರೆ 46 ಯಂತ್ರಗಳನ್ನು ಸ್ವಂತಕ್ಕೆ ಖರೀದಿ ಮಾಡಲು ಅವಕಾಶವಿರುವಾಗ, 613 ಕೋಟಿ ರು. ಖರ್ಚು ಮಾಡಿ ಬಾಡಿಗೆಗೆ ಪಡೆಯುವ ಅವಶ್ಯಕತೆಯಾದರೂ ಏನಿದೆ? ಎಂದು ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಎತ್ತಲಾಗಿದೆ.

ಬಾಡಿಗೆಯ ಹಿಂದೆ ಭ್ರಷ್ಟಾಚಾರ, ಹಗರಣದ ವಾಸನೆ ಬಡಿಯುತ್ತಿದೆ. ಒಂದು ವಾಹನಕ್ಕೆ ಬಾಡಿಗೆಗಾಗಿ ವರ್ಷಕ್ಕೆ 2 ಕೋಟಿ ರು. ಖರ್ಚು ಮಾಡುವುದು ಶಂಕಾಸ್ಪದವಾಗಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

‘ಬಿಬಿಎಂಪಿಯಿಂದ ಜಿಬಿಎ ಎಂದು ಹೆಸರು ಬದಲಾಗಿರಬಹುದು. ಆದರೆ, ಹಳೆ ಚಾಳಿಯೇ ಮುಂದುವರಿದಿದೆ. 7 ವರ್ಷಗಳ ಬಾಡಿಗೆಗೆ 613 ಕೋಟಿ ರು. ಖರ್ಚು ಮಾಡುತ್ತಿರುವುದು ಏಕೆ? ಎಂಬುದನ್ನು ಜಿಬಿಎ ಅಧಿಕಾರಿಗಳು ಸ್ಪಷ್ಟವಾಗಿ ವಿವರಿಸಬೇಕು’ ಎಂದು ಜಾಲತಾಣ ಎಕ್ಸ್‌ನಲ್ಲಿ ಮಣ್ಣಿನ ಮಗ ಎಂಬುವರು ಪ್ರಶ್ನಿಸಿದ್ದಾರೆ.

ಜಿಬಿಎ ಐಡಿಯಾಗೆ ಬೆಂಬಲಿಸಿ ಪೋಸ್ಟ್ ಮಾಡಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ, ವಾಹನ ಮತ್ತು ಯಂತ್ರದ ನಿರ್ವಹಣೆ ಮತ್ತು ತರಬೇತಿ ಹೊಂದಿರುವ ಸಿಬ್ಬಂದಿ ಸೇವೆಯನ್ನು ಕೂಡ ಹೊರಗುತ್ತಿಗೆ ಒಪ್ಪಂದ ಒಳಗೊಂಡಿರುತ್ತದೆ. ಸ್ವಂತಕ್ಕೆ ಖರೀದಿಸಿದರೆ ಅದರ ನಿರ್ವಹಣೆ ಮತ್ತು ಸೂಕ್ತ ಕಾರ್ಯಾಚರಣೆ ಮಾಡುವುದು ಎಂದಿಗೂ ಸವಾಲಿನದ್ದಾಗಿರುತ್ತದೆ ಎಂದಿದ್ದಾರೆ.

ನಿರ್ವಹಣೆಯ ವೆಚ್ಚವನ್ನು ಸೇರಿಸಿದರೆ ಅರ್ಧದಷ್ಟು ಹಣವೂ ಖರ್ಚಾಗುವುದಿಲ್ಲ. ತೆರಿಗೆದಾರರ ಹಣವನ್ನು ಈ ರೀತಿ ವಿನಿಯೋಗಿಸುವುದು ಸರಿಯಲ್ಲ ಎಂದು ಸುಧೀಶ್ ರಾವ್ ಪ್ರತಿಕ್ರಿಯಿಸಿದ್ದಾರೆ.

ಜಿಬಿಎ ಸ್ವಂತಕ್ಕೆ ಖರೀದಿ ಮಾಡಿದರೆ 100 ಕೋಟಿ ರು. ಒಳಗೆ ಎಲ್ಲವೂ ಮುಗಿದು ಹೋಗುತ್ತದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಯಂತ್ರದ ಬದಲು ಇಷ್ಟು ಹಣ ಖರ್ಚು ಮಾಡಿ ಕಾರ್ಮಿಕರನ್ನು ನೇಮಿಸಿಕೊಂಡರೆ ನಿರುದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುತ್ತದೆ ಎಂದು ಅನೇಕರು ಸಲಹೆ ನೀಡಿದ್ದಾರೆ.

PREV

Recommended Stories

ಕೊಪ್ಪಳ ಎಪಿಎಂಸಿಯಲ್ಲಿ ಕಮಿಷನ್ ದಂಧೆ ಅವ್ಯಾಹತ
ಕಾಂಗ್ರೆಸ್‌ನಿಂದ ಬಯಲುಸೀಮೆಗೆ ಬಹಳ ಅನ್ಯಾಯ