ಕೊಪ್ಪಳ ಎಪಿಎಂಸಿಯಲ್ಲಿ ಕಮಿಷನ್ ದಂಧೆ ಅವ್ಯಾಹತ

| Published : Nov 18 2025, 03:30 AM IST

ಸಾರಾಂಶ

ಕೊಪ್ಪಳ ಎಪಿಎಂಸಿಯಲ್ಲಿ ತಲೆ-ತಲಾಂತರದಿಂದ ನಾವು ಕಮಿಷನ್ ಪಡೆಯುತ್ತಲೇ ವ್ಯವಹಾರ ಮಾಡುತ್ತಿದ್ದೇವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಪಿಎಂಸಿ ಅಧಿಕಾರಗಳನ್ನೇ ಅಣಕಿಸುವಂತೆ ಬಿಳಿಚೀಟಿ ವ್ಯವಹಾರ ಮಾಡುತ್ತಿದ್ದಾರೆ.

ಕೊಪ್ಪಳ: ರಾಜ್ಯ ಉಪಲೋಕಾಯುಕ್ತ ಬಿ. ವೀರಪ್ಪ ಅವರು ಆಗಮಿಸುವ ಮಾಹಿತಿ ಅರಿತು ಕೊಪ್ಪಳ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಕಮಿಷನ್ ನೀಡುವಂತಿಲ್ಲ, ಪಡೆಯುವಂತೆ ಇಲ್ಲ ಎಂದು ಗೋಡೆಬರಹ ಬರೆಯಿಸಲಾಗಿದೆ. ಆದರೆ, ಅದೇ ಗೋಡೆಬರಹದ ಪಕ್ಕದಲ್ಲೇ ಬಿಳಿಚೀಟಿ ವ್ಯವಹಾರ ಹಾಗೂ ಕಮಿಷನ್ ದಂಧೆ ನಡೆಯುತ್ತಿದೆ.

ಜಿಲ್ಲಾಧಿಕಾರಿ, ಎಪಿಎಂಸಿ ಅಧಿಕಾರಿಗಳಿಗೆ ಕ್ಯಾರೆ ಎನ್ನದೇ ಅವ್ಯಾಹತವಾಗಿ ಕಮಿಷನ್ ದಂಧೆ ನಡೆಸುತ್ತಿದ್ದ ದಲ್ಲಾಳಿಗಳು ಈಗ ರಾಜ್ಯ ಉಪಲೋಕಾಯುಕ್ತರ ದಾಳಿ ಬಳಿಕವೂ ಭರ್ಜರಿಯಾಗಿಯೇ ರೈತರ ಶೋಷಣೆ ನಡೆಸುತ್ತಿದ್ದಾರೆ.

ತಲೆ-ತಲಾಂತರದಿಂದ ನಾವು ಕಮಿಷನ್ ಪಡೆಯುತ್ತಲೇ ವ್ಯವಹಾರ ಮಾಡುತ್ತಿದ್ದೇವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಪಿಎಂಸಿ ಅಧಿಕಾರಗಳನ್ನೇ ಅಣಕಿಸುವಂತೆ ಬಿಳಿಚೀಟಿ ವ್ಯವಹಾರ ಮಾಡುತ್ತಿದ್ದಾರೆ.

''''ಕನ್ನಡಪ್ರಭ''''ದಲ್ಲಿ ರಿಯಾಲಿಟಿ ಚೆಕ್ ಮಾಡಿದ ವೇಳೆಯಲ್ಲಿ ಇದೆಲ್ಲವೂ ಅನಾವರಣವಾಗಿದ್ದು, ಅದರ ಮಾರನೇ ದಿನವೂ ಕಮಿಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದು ಮಾತ್ರ ಆಡಳಿತವೇ ನಾಚುವಂತೆ ಮಾಡಿದೆ.

ಸಭೆಗೆ ನಿರ್ಧಾರ: ''''ಕನ್ನಡಪ್ರಭ''''ದಲ್ಲಿ ಕಮಿಷನ್ ದಂಧೆಯ ಅನಾವರಣವಾಗಿರುವ ಹಿನ್ನೆಲೆಯಲ್ಲಿ ಕೊಪ್ಪಳ ಎಪಿಎಂಸಿ ಅಧಿಕಾರಿಗಳು ದಲ್ಲಾಳಿಗಳ ಸಭೆ ಕರೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ನೋಟಿಸ್ ಜಾರಿ ಮಾಡಿ, ಕಮಿಷನ್ ಪಡೆಯದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಕುರಿತು ಎರಡ್ಮೂರು ದಿನಗಳಲ್ಲಿ ಸಭೆ ನಡೆಸಿ, ಕೊನೆಯ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ಅದಾದ ಮೇಲೆಯೂ ಕಮಿಷನ್ ಪಡೆದಿದ್ದೇ ಆದರೆ ಅಂಗಡಿಯ ಪರವಾನಗಿ ರದ್ದು ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಬಿಳಿಚೀಟಿ ಪಡೆಯದಿರಿ: ರೈತರು ದಲ್ಲಾಳಿಗಳು ನೀಡುವ ಬಿಳಿ ಚೀಟಿ ಪಡೆಯದಂತೆ ಎಪಿಎಂಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹಾಗೊಂದು ವೇಳೆ ಅವರು ಬಿಳಿಚೀಟಿ ನೀಡಿದ್ದೇ ಆದರೆ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೂರು ನೀಡುವಂತೆಯೂ ಜಾಗೃತಿ ಮೂಡಿಸಲಾಗುತ್ತದೆ.

ಅಡ್ಡಮಾರ್ಗ: ''''ಕನ್ನಡಪ್ರಭ''''ದಲ್ಲಿ ಬಿಳಿಚೀಟಿ ಫೋಟೋ ಸಮೇತ ವರದಿ ಪ್ರಕಟವಾಗುತ್ತಿದ್ದಂತೆ ಕೊಪ್ಪಳ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಅನೇಕರು ಬಿಳಿಚೀಟಿ ನೀಡದೆ ಬಾಯಿ ಮಾತಿನಿಂದಲೇ ವ್ಯವಹರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಆಗಿರುವ ಸವಾಲಿನಲ್ಲಿಯೇ ಕಡಿಮೆ ಬರೆದು, ರೈತರ ಕಮಿಷನ್ ಅನ್ನು ಅಡ್ಡಮಾರ್ಗದ ಮೂಲಕ ಪಡೆಯಲು ಹುನ್ನಾರು ನಡೆಸಿದ್ದಾರೆ. ಇದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸವಾಲು ಆಗುತ್ತಿದ್ದಂತೆ ದರ ಹಾಕಿಕೊಡಿ ಎಂದು ರೈತರು ಪಟ್ಟು ಹಿಡಿದಿದ್ದು, ದಲ್ಲಾಳಿಗಳನ್ನು ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ.

ಕಾನೂನು ಕ್ರಮ

ಕಾನೂನು ಪ್ರಕಾರ ರೈತರಿಂದೆ ಕಮಿಷನ್ ಪಡೆಯುವುದಕ್ಕೆ ಅವಕಾಶವೇ ಇಲ್ಲ. ಹೀಗಾಗಿ, ನಾವು ಈಗಾಗಲೇ ನೋಟಿಸ್ ಜಾರಿ ಮಾಡಿದ್ದು, ಸಭೆ ಕರೆದು, ಅಂತಿಮ ಎಚ್ಚರಿಕೆ ನೀಡಿ, ಕಾನೂನು ರೀತಿ ಕ್ರಮವಹಿಸುತ್ತೇವೆ ಎಂದು

ಕೊಪ್ಪಳ ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ತಿಳಿಸಿದ್ದಾರೆ.