ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌(ನೈಸ್‌ ರಸ್ತೆ) ಯೋಜನೆಗೆ ಸಂಬಂಧಿಸಿ ಡಾ.ಜಿ.ಪರಮೇಶ್ವರ್‌ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಅಂತಿಮ ವರದಿ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ವಿಧಾನಸಭೆ : ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌(ನೈಸ್‌ ರಸ್ತೆ) ಯೋಜನೆಗೆ ಸಂಬಂಧಿಸಿ ಡಾ.ಜಿ.ಪರಮೇಶ್ವರ್‌ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಅಂತಿಮ ವರದಿ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಸೋಮವಾರ ಪ್ರಶ್ನೋತ್ತರದ ವೇಳೆ ಎಸ್‌.ಟಿ.ಸೋಮಶೇಖರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೈಸ್‌ ರಸ್ತೆ ಹಾದು ಹೋಗುವ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪೆರಿಫೆರಲ್‌ ರಸ್ತೆಯ 37 ಮತ್ತು ಎಕ್ಸ್‌ಪ್ರೆಸ್‌ ವೇ 5 ಕೆಳ/ಮೇಲ್ಸೇತುವೆಗಳಿವೆ. ಈ ಕೆಳ ಮತ್ತು ಮೇಲ್ಸೇತುವೆಗಳ ವಿಸ್ತರಣೆಯ ಅಗತ್ಯವಿದೆ. ಈ ಸಂಬಂಧ ಎರಡು ಸಭೆ ಸಹ ಮಾಡಲಾಗಿದೆ. ಈ ಸಂಬಂಧ ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ನೈಸ್‌ ಸಂಸ್ಥೆಗೆ ಎರಡು ಬಾರಿ ಪತ್ರ ಬರೆಯಲಾಗಿದೆ. ಆದರೆ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ಯೋಜನೆ ಸಂಬಂಧ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿದ್ದಾರೆ. ಸಮಿತಿ ಅಧ್ಯಯನ ನಡೆಸಿ ಅಂತಿಮ ವರದಿ ಸಲ್ಲಿಸಿದ ಬಳಿಕ ಅಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದರು.

35 ವರ್ಷದಿಂದ ರೈತರಿಗೆ ಪರಿಹಾರವಿಲ್ಲ:

ಇದಕ್ಕೂ ಮುನ್ನ ಮಾತನಾಡಿದ ಸೋಮಶೇಖರ್‌, ಈ ನೈಸ್‌ ರಸ್ತೆ ಸಂಬಂಧ ಭೂಸ್ವಾಧೀನವಾಗಿ ಸುಮಾರು 35 ವರ್ಷಗಳೇ ಆಗಿವೆ. ಜಮೀನು ನೀಡಿದ ರೈತರಿಗೆ ಈವರೆಗೂ ಪರಿಹಾರ ಕೊಟ್ಟಿಲ್ಲ. ಈ ರಸ್ತೆಯಲ್ಲಿ ದಿನಕ್ಕೆ 10 ಕೋಟಿ ರು. ಟೋಲ್‌ ಶುಲ್ಕ ಸಂಗ್ರಹಿಸಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ಹಾದು ಹೋಗುವ ಈ ರಸ್ತೆಯಲ್ಲಿ 8 ಮೇಲ್ಸೇತುವೆಗಳು ಕಿರಿದಾಗಿದ್ದು, ವಾಹನ ಸಂಚಾರ ದಟ್ಟಣೆ, ಅಪಘಾತಗಳು ಹೆಚ್ಚಾಗಿವೆ. ವಿಸ್ತರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಟಿ.ಬಿ.ಜಯಚಂದ್ರ ನೇತೃತ್ವದ ಸದನ ಸಮಿತಿ ಮಾಡಿದರೂ ಏನೂ ಪ್ರಯೋಜವಾಗಲಿಲ್ಲ. ನೈಸ್‌ ಕಂಪನಿ ಮಾಲೀಕ ಸರ್ಕಾರ ಹೇಳಿದರೂ ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೈಸ್‌ ಗುತ್ತಿಗೆ ರದ್ದಿಗೆ ಆಗ್ರಹ

ಈಗ 1,700 ಎಕರೆಯಲ್ಲಿ ಲೇಔಟ್‌ ಮಾಡಲು ಮುಂದಾಗಿದ್ದಾರೆ. ರೈತರಿಗೆ ಪರಿಹಾರ ಸಿಗದೆ ಸಮಸ್ಯೆಯಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಏನೂ ಮಾಡಿಲ್ಲ. ಸಚಿವರ ಪತ್ರಗಳಿಗೆ ಕಿಮ್ಮತ್ತು ಇಲ್ಲ. ಏನಾದರೂ ಕ್ರಮ ಕೈಗೊಂಡರೆ ತಡೆಯಾಜ್ಞೆ ತರುತ್ತಾರೆ. ಹೀಗಾಗಿ ನೈಸ್‌ ಕಂಪನಿ ಗುತ್ತಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ನೈಸ್‌ ರಸ್ತೆಯ ಹಾದು ಹೋಗುವ ಮಾರ್ಗದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಸಚಿವ ಸಂಪುಟ ಉಪ ಸಮಿತಿ ಒಂದೇ ಒಂದೇ ಸಭೆ ಮಾಡಲು ಹೆದರುವ ಸ್ಥಿತಿ ಇದೆ. ಈಗಾಗಲೇ ಕಂಪನಿಯ 30 ವರ್ಷದ ಗುತ್ತಿಗೆ ಅವಧಿ ಮುಗಿದಿದೆ. ಒಂದು ಎಕರೆ ಭೂಮಿ ಬೆಲೆ 7-8 ಕೋಟಿ ರು. ಆಗಿದೆ. ಹೀಗಾಗಿ ಗುತ್ತಿಗೆ ನವೀಕರಿಸದೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ್‌ ಜಾರಕಿಹೊಳಿ, ಸಂಬಂಧಿತ ಶಾಸಕರನ್ನು ಸಚಿವ ಸಂಪುಟ ಉಪ ಸಮಿತಿ ಸಭೆಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು.