ವಿಧಾನಸಭೆ : ರಾಜ್ಯದ ಪುರಸಭೆ ಹಾಗೂ ನಗರಸಭೆ, ಪಾಲಿಕೆಗಳ ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಅಥವಾ ಸರ್ಕಾರಿ ಜಾಗದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವ ಜಾಹೀರಾತಿನ ಮೇಲೆ ಶುಲ್ಕ ವಿಧಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮುನ್ಸಿಪಾಟಲಿಟಿಗಳ ಮತ್ತು ಕೆಲವು ಇತರ ಕಾನೂನುಗಳ ತಿದ್ದುಪಡಿ ವಿಧೇಯಕ-2026ಕ್ಕೆ’ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.

ವಿಧೇಯಕ ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾಹೀರಾತುಗಳ ಮೇಲೆ ಶುಲ್ಕ ವಿಧಿಸಲು ಹಾಗೂ ಸಂಗ್ರಹಿಸಲು, ಅನಧಿಕೃತ ಜಾಹೀರಾತು ನಿಯಂತ್ರಿಸಲು ಅವಕಾಶ ಕಲ್ಪಿಸುವಂತೆ ವಿಧೇಯಕ ಸಿದ್ಧಪಡಿಸಲಾಗಿದೆ ಎಂದು ವಿಧೇಯಕಕ್ಕೆ ಸದನದ ಒಪ್ಪಿಗೆ ಕೋರಿದರು.

ಈ ವೇಳೆ ಚರ್ಚೆಯಲ್ಲಿ ಭಾಗವಹಿಸಿದ ಸದಸ್ಯರಾದ ರವಿ ಸುಬ್ರಮಣ್ಯ, ಸಿದ್ದು ಸವದಿ, ಜ್ಯೋತಿ ಗಣೇಶ್, ಸುರೇಶ್‌ಗೌಡ, ಎಸ್.ಆರ್.ವಿಶ್ವನಾಥ್ ಅವರು ಅನಧಿಕೃತ ಜಾಹೀರಾತುಗಳಿಗೆ ಕಡಿವಾಣ ಹಾಕಲು ಬೆಂಬಲ ಸೂಚಿಸಿದರು.


ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಅವರು, ಸಾರ್ವಜನಿಕರ ಉಪಯೋಗಕ್ಕಿರುವ ಸ್ಥಳಗಳಲ್ಲಿಯೂ ಜಾಹೀರಾತು ಪ್ರದರ್ಶಿಸಲು ಅನುಮತಿ ನೀಡುವುದಾಗಿ ಹೇಳಿದ್ದೀರಿ. ಇದು ತೀವ್ರ ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಸಭಾಧ್ಯಕ್ಷ ಯು.ಟಿ.ಖಾದರ್‌, ಸಾರ್ವಜನಿಕರಿಗೆ ತೊಂದರೆ ಆಗದ ಜಾಗದಲ್ಲಿ ಶುಲ್ಕ ಸಂಗ್ರಹಿಸಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಸಲಹೆ ನೀಡಿದರು.

ಅನಧಿಕೃತ ಜಾಹೀರಾತು ತೆರವು:

ಬಳಿಕ ಮಾತನಾಡಿದ ಬೈರತಿ ಸುರೇಶ್, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನಧಿಕೃತ ಜಾಹೀರಾತುಗಳಿಂದ ನೂರಾರು ಕೋಟಿ ರು. ಆದಾಯ ತಪ್ಪಿದೆ. ಹೀಗಾಗಿ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಯಾವುದೇ ಖಾಸಗಿ, ಸರ್ಕಾರಿ ಜಾಗದಲ್ಲಿನ ಭೂಮಿ, ಕಟ್ಟಡ, ಗೋಡೆ ಅಥವಾ ಯಾವುದೇ ನಿರ್ಮಾಣದ ಮೇಲೆ ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸುವ ಜಾಹೀರಾತಿಗೆ ಅನುಮತಿ ಕಡ್ಡಾಯ. ಅನುಮತಿ ಇಲ್ಲದೆ ಪ್ರದರ್ಶಿಸುವ ಯಾವುದೇ ಜಾಹೀರಾತನ್ನು ಕಿತ್ತೆಸೆಯುತ್ತೇವೆ. ಜತೆಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಜಾಗಗಳಲ್ಲಿ ಜಾಹೀರಾತಿಗೆ ಅನುಮತಿ ನೀಡದಂತೆ ನಿಯಮ ರೂಪಿಸುವಾಗ ಎಚ್ಚರವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ವಿಧೇಯಕದಲ್ಲೇನಿದೆ?:

ಪುರಸಭೆ ಅಥವಾ ಪಾಲಿಕೆಯ ಲಿಖಿತ ಅನುಮತಿ ಇಲ್ಲದೆ ಜಾಹೀರಾತುಗಳ ಪ್ರದರ್ಶನ ನಿಷಿದ್ಧ. ಅನಧಿಕೃತ ಜಾಹೀರಾತನ್ನು ತೆಗೆದು ಹಾಕಲು ಅಥವಾ ಕೆಡವಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಮುನ್ಸಿಪಾಲಿಟಿಗಳ ಅಧಿನಿಯಮ-1964 ಹಾಗೂ ಕರ್ನಾಟಕ ನಗರಪಾಲಿಕೆಗಳ ಅಧಿನಿಯಮ 1976ಕ್ಕೆ ಮತ್ತಷ್ಟು ತಿದ್ದುಪಡಿ ತರಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಜಾಹೀರಾತಿನ ಮೇಲೆ ಶುಲ್ಕ:

ಜಾಹೀರಾತುಗಳ ಪ್ರದರ್ಶನದ ಮೇಲೆ ಶುಲ್ಕ ವಿಧಿಸಲು ಪುರಸಭೆ ಅಥವಾ ಪಾಲಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಸ್ಥಳೀಯ ಸಂಸ್ಥೆಗಳು ವಿಧಿಸುವ ಶುಲ್ಕವು ಸರ್ಕಾರ ವಿಧಿಸಿದ ಗರಿಷ್ಠ ಮತ್ತು ಕನಿಷ್ಠ ಮಿತಿಗಳಿಗೆ ಒಳಪಟ್ಟಂತೆ ಇರಬೇಕು.

ಸಾರ್ವಜನಿಕ ಸಭೆ ಅಥವಾ ನಗರ ಪಾಲಿಕೆಗಳ, ಯಾವುದೇ ಶಾಸನಾತ್ಮಕ ಸಂಸ್ಥೆಯ ಚುನಾವಣೆ, ಅಂಥಹ ಚುನಾವಣೆಗೆ ಸಂಬಂಧಿಸಿದ ಉಮೇದುವಾರಿಕೆಗೆ ಈ ತೆರಿಗೆ ನಿಯಮ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಯಾವ್ಯಾವ ಜಾಹೀರಾತುಗಳ ಮೇಲೆ ಶುಲ್ಕ?:

ಭೂಮಿ, ಕಟ್ಟಡ, ಗೋಡೆ, ಜಾಹಿರಾತು ಫಲಕ, ಸ್ಟ್ರಕ್ಚರ್‌ ಮೇಲಿನ ದೀಪಾಲಂಕಾರವಿಲ್ಲದ ಜಾಹೀರಾತುಗಳಿಗೆ ಪ್ರತಿ ಚದರ ಮೀ. ಜಾಗಕ್ಕೆ ಪ್ರತಿ ವರ್ಷಕ್ಕೆ ಗರಿಷ್ಠ 50 ರು. ತೆರಿಗೆ ಅಥವಾ ಶುಲ್ಕ ವಿಧಿಸಬಹುದು. 1 ಚದರ ಮೀಟರ್‌ಗಿಂತ ಹೆಚ್ಚು ಮತ್ತು 2.5 ಚದರ ಮೀಟರ್‌ವರೆಗಿನ ಜಾಗಕ್ಕೆ 80 ರು., ಪ್ರತಿಯೊಂದು ಹೆಚ್ಚಿನ 2.5 ಚದರ ಮೀಟರ್‌ ಜಾಗಕ್ಕೆ ಅಥವಾ ಅದಕ್ಕಿಂತ ಕಡಿಮೆ ಜಾಗಕ್ಕೆ 80 ರು. ಹೆಚ್ಚುವರಿ ವಿಧಿಸಬಹುದು.

ಎತ್ತು, ಕುದುರೆ, ಮನುಷ್ಯರಿಂದ ಸೈಕಲ್‌ಗಳಿಂದ ಎಳೆಯುವ ದೀಪಾಲಕಾರವಿಲ್ಲದ ಜಾಹೀರಾತುಗಳಿಗೆ ಸಂಬಂಧಿಸಿ 5 ಚದರ ಮೀಟರ್‌ವರೆಗಿನ ಜಾಗಕ್ಕೆ 300 ರು., ಹೆಚ್ಚುವರಿಯಾಗಿ 5 ಚ.ಮೀ. ಅಥವಾ ಅದಕ್ಕಿಂತ ಕಡಿಮೆ ಜಾಗಕ್ಕೆ 300 ರು. ಸಂಗ್ರಹಿಸಬಹುದು.

ವಾಹನಗಳ ಮೇಲೆ ಒಯ್ಯುವ ದೀಪಾಲಕೃತ ಜಾಹೀರಾತು ಫಲಕಗಳಿಗೆ 5 ಚದರ ಮೀಟರ್‌ವರೆಗಿನ ಜಾಗಕ್ಕೆ 375 ರು., ಪ್ರತಿಯೊಂದು ಹೆಚ್ಚಿನ 1 ಚದರ ಮೀಟರ್‌ ಅಥವಾ ಅದಕ್ಕಿಂತ ಕಡಿಮೆಯ ಜಾಗಕ್ಕೆ 75 ರು. ವಿಧಿಸಬೇಕು ಎಂದು ವಿವಿಧ ರೀತಿಯ ಜಾಹೀರಾತುಗಳಿಗೆ ಪ್ರತ್ಯೇಕ ತೆರಿಗೆ ದರ ನಿಗದಿ ಮಾಡಿದೆ.