ನಾರಾಯಣ ಹೆಗಡೆ
ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ₹ 2 ಸಾವಿರ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯ 6346 ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಇದುವರೆಗೆ 980 ಮೃತರ ಖಾತೆಗೂ ಪ್ರತಿ ತಿಂಗಳು ಹಣ ಸಂದಾಯ ಆಗುತ್ತಿರುವುದು ಪತ್ತೆಯಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ ಭಾರಿ ತಾಂತ್ರಿಕ ಲೋಪ ಹಾಗೂ ಹಣ ದುರ್ಬಳಕೆಯನ್ನು ತಡೆಯಲು ಸರ್ಕಾರ ಮುಂದಾಗಿದೆ. ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳ ಪೈಕಿ ಮೃತಪಟ್ಟಿರುವ ಮಹಿಳೆಯರ ಖಾತೆಗಳಿಗೂ ಹಣ ಸಂದಾಯವಾಗುತ್ತಿರುವುದು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕಾರಣಕ್ಕೆ ಸಮಗ್ರವಾಗಿ ಪರಿಶೀಲನೆ ನಡೆಸಿದಾಗ ಮೃತಪಟ್ಟವರು, ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ಖಾತೆ ಹೊಂದಿದವರು ಹಾಗೂ ಆಧಾರ್ ಜೋಡಣೆ ಇಕೆವೈಸಿ ಜೋಡಣೆ ಆಗದಿರುವ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 6346 ಫಲಾನುಭವಿಗಳು ಇರುವುದು ಕಂಡುಬಂದಿದ್ದು, ಅವರನ್ನು ಗೃಹಲಕ್ಷ್ಮಿ ಯೋಜನೆ ಪಟ್ಟಿಯಿಂದ ಕೈಬಿಡಲಾಗಿದೆ.980 ಮೃತಪಟ್ಟವರ ಖಾತೆ: ಜಿಲ್ಲೆಯಲ್ಲಿ 3,97,625 ಪಡಿತರ ಚೀಟಿದಾರರಿದ್ದು, ಗೃಹಲಕ್ಷ್ಮಿ ಯೋಜನೆಗೆ 397719 ಅರ್ಜಿಗಳು ನೋಂದಣಿಯಾಗಿವೆ. ಈ ಪೈಕಿ 3,86,977 ಫಲಾನುಭವಿಗಳಿಗೆ ಯೋಜನೆ ಮಂಜೂರಾಗಿದ್ದು, ಇನ್ನೂ 14742 ಅರ್ಜಿ ಮಂಜೂರಾತಿಗೆ ಬಾಕಿ ಇವೆ. ಈ ನಡುವೆ ಅನರ್ಹರಿಗೆ ಗೃಹಲಕ್ಷ್ಮಿ ಯೋಜನೆ ಹಣ ಹೋಗುತ್ತಿರುವುದರಿಂದ ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆ ತಪ್ಪಿಸಲು ಅನರ್ಹರನ್ನು ಗುರುತಿಸುವ ಕಾರ್ಯ ನಡೆಸಲಾಗಿದೆ. ಜಿಲ್ಲೆಯಲ್ಲಿ 980 ಮೃತಪಟ್ಟವರ ಖಾತೆಗೆ ಹಣ ಹೋಗುತ್ತಿರುವುದು ಕಂಡುಬಂದಿದೆ. ಬ್ಯಾಂಕ್ ಖಾತೆಯೊಂದಿಗೆ ದಾಖಲೆ ಲಿಂಕ್ ಆಗದಿರುವ 1152, ಇಕೆವೈಸಿ ಮಿಸ್ಸಿಂಗ್ ಆಗಿರುವ 130, ಮೃತಪಟ್ಟ 980 ಹಾಗೂ ಐಟಿ, ಜಿಎಸ್‌ಟಿ ಹೊಂದಿರುವ 4084 ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಲಾಗಿದೆ.
ಬ್ಯಾಡಗಿ 124 13 465 102
ಹಾವೇರಿ 243 17 793 127
ರಟ್ಟೀಹಳ್ಳಿ 65 9 200 53
ಸವಣೂರು 98 20 301 99
ಗೃಹಲಕ್ಷ್ಮಿ ಯೋಜನೆಯು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಆದರೆ, ಮೃತಪಟ್ಟವರು, ಆದಾಯ ತೆರಿಗೆ ಪಾವತಿದಾರರಿಗೂ ಈ ಸ್ಕೀಂನಲ್ಲಿ ಹಣ ಸಂದಾಯವಾಗುತ್ತಿತ್ತು. ಪರಿಶೀಲನೆ ಬಳಿಕ ಹಾವೇರಿ ಜಿಲ್ಲೆಯಲ್ಲಿ 6346 ಫಲಾನುಭವಿಗಳನ್ನು ಅನರ್ಹರೆಂದು ಪಟ್ಟಿ ಮಾಡಲಾಗಿದೆ. ಅರ್ಹರಿಗೆ ಪ್ರತಿ ತಿಂಗಳು ₹ 2 ಸಾವಿರ ಬರಲಿದೆ. ಈ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.