ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಪಂಚದಲ್ಲಿ ಏಳು ಬಿಲಿಯನ್ ಜನರಿದ್ದು, 64 ಕೋಟಿ ಜನ ಹಸಿವಿನಿಂದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲಿ ಒಂದು ವರ್ಷಕ್ಕೆ ಒಂದು ಕೋಟಿಗೂ ಹೆಚ್ಚು ಸಮಾರಂಭಗಳು ನಡೆಯುತ್ತಿದ್ದು, ಸುಮಾರು ಶೇ.20ರಷ್ಟು ಆಹಾರ ವ್ಯರ್ಥವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.ಇಲ್ಲಿನ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ನವ್ಯಶ್ರೀ ಈಶ್ವರವನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೋಗಿಗಳು ಮತ್ತು ಸಂಬಂಧಿಕರಿಗೆ ವಾರದಲ್ಲಿ ಎರಡು ದಿನ ಅನ್ನದಾನ ಮಾಡುತ್ತಿದ್ದು, ನವ್ಯಶ್ರೀ ಅನ್ನದಾನ-100ರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ,
7.82 ಕೋಟಿ ಟನ್ ಆಹಾರ ಚಲ್ಲಲಾಗುತ್ತಿದೆ. ಅದರ ಮೌಲ್ಯ ಅಂದಾಜು 1 ಲಕ್ಷ ಕೋಟಿ ರು. ಆಗುತ್ತದೆ. ನಮ್ಮ ಸರ್ಕಾರದ ಬಜೆಟ್‌ನ 25ರಷ್ಟು ಆಹಾರ ಪೋಲಾಗುತ್ತಿದ್ದು, ಇದನ್ನು ಉಳಿಸಿದಲ್ಲಿ ಪ್ರತಿನಿತ್ಯ 26 ಕೋಟಿ ಜನರಿಗೆ ಅನ್ನದಾನ ಮಾಡಬಹುದಾಗಿದೆ. ಜೀವನದಲ್ಲಿ ಬೇಕು ಬೇಕು ಎನ್ನುವವರೇ ಬಹಳ ಮಂದಿ ಇದ್ದಾರೆ. ಬೇಡ ಬೇಡ ಎನ್ನುವವರು ನಮಗೆ ಬೇಕಾಗಿದ್ದಾರೆ. ಹಸಿದವರಿಗೆ ಅನ್ನ ಕೊಡುವುದರಲ್ಲಿ ಸಿಗುವ ಆತ್ಮತೃಪ್ತಿ ಬೇರೆ ಎಲ್ಲಿಯೂ ಸಿಗುವುದಿಲ್ಲ ಎಂದರು.ಮೆಗ್ಗಾನ್ ಆವರಣದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲು ಮತ್ತು ರೋಗಿಗಳ ಸಂಬಂಧಿಕರಿಗೆ ಉಳಿದುಕೊಳ್ಳಲು ಶೌಚಾಲಯ ಹಾಗೂ ಶಾಶ್ವತ ವಿಶ್ರಾಂತಿ ಹಾಲ್ ನಿರ್ಮಾಣಕ್ಕೆ ಎಲ್ಲಾ ಜನಪ್ರತಿನಿಧಿಗಳ ಒತ್ತಡದಿಂದಾಗಿ 5 ಕೋಟಿ ರು. ಅನುದಾನ ಸರ್ಕಾರದಿಂದ ಮಂಜೂರಾಗಿದ್ದು, 2 ಕೋಟಿ ರು. ಬಿಡುಗಡೆಯಾಗಿದೆ. ನವ್ಯಶ್ರೀ ಸಂಸ್ಥೆ ಹಸಿರು ಮತ್ತು ಹಸಿವು ಎರಡೂ ಸಿದ್ಧಾಂತಗಳೊಂದಿಗೆ ಕಾರ್ಯಾಚರಿ ಸುತ್ತಿರುವುದು ಶ್ಲಾಘನೀಯ ಎಂದರು.
ಯೋಗ ಗುರು ರುದ್ರಾರಾಧ್ಯ ಮಾತನಾಡಿ, ವಿದ್ಯಾದಾನಕ್ಕಿಂತ ಅನ್ನದಾನವೇ ಶ್ರೇಷ್ಠ. ಶರೀರಕ್ಕೆ ಅನ್ನ ಸಿಕ್ಕಿದಾಗ ಮಾತ್ರ ಶಕ್ತಿ ಬರುತ್ತದೆ. ಶಕ್ತಿ ಇದ್ದಾಗ ಮಾತ್ರ ಜ್ಞಾನ ಪಡೆಯಲು ಸಾಧ್ಯ. ನಿವೃತ್ತ ಎಸ್ಪಿ ನಾಗರಾಜ್ ಅವರು ೯೩ನೇ ಇಸವಿಯಲ್ಲಿ ನಮಗೆಲ್ಲರಿಗೂ ಪೊಲೀಸ್ ಕೆಲಸ ನೀಡಿದ್ದಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಲುವಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳೆಲ್ಲರೂ ಸೇರಿ ಇಂದಿನ ಅನ್ನದಾನದ ವ್ಯವಸ್ಥೆ ಮಾಡಿದ್ದಾರೆ. ನಿರಂತರವಾಗಿ ಅವರು ಕೈಜೋಡಿಸುತ್ತಿದ್ದಾರೆ. ಹಿರಿಯ ಅಧಿಕಾರಿಯೊಬ್ಬರ ಉಪಕಾರ ಸ್ಮರಣೆಗಾಗಿ ಈ ಕಾರ್ಯ ಹಮ್ಮಿಕೊಂಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ರೋಟರಿ ಗೌವರ್ನರ್ ಕೆ.ಪಿ. ಶೆಟ್ಟಿ, ನವ್ಯಶ್ರೀ ನಾಗೇಶ್, ಶ್ರೀಕಾಂತ್, ಶರಣ್ಯ ಮಂಜುನಾಥ್, ರೋ.ವಿಜಯಕುಮಾರ್, ಆರ್‌ಎಸ್‌ಎಸ್ ಮುಖಂಡ ರಂಗನಾಥ್, ನಾಗರಾಜ್ ಶೆಟ್ಟರ್, ನವ್ಯಶ್ರೀ ಈಶ್ವರವನ ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಸುಮಾರು ೩೫೦ಕ್ಕೂ ಹೆಚ್ಚು ಜನರಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿತ್ತು.