ಜಪಾನ್, ದಕ್ಷಿಣ ಕೊರಿಯಾ ಸಂಸ್ಥೆಗಳಿಂದ ₹6450 ಕೋಟಿ ಹೂಡಿಕೆ

KannadaprabhaNewsNetwork |  
Published : Jul 11, 2024, 01:34 AM ISTUpdated : Jul 11, 2024, 12:05 PM IST
 M B Patil | Kannada Prabha

ಸಾರಾಂಶ

ಜಪಾನ್‌ ಮತ್ತು ದಕ್ಷಿಣ ಕೊರಿಯಾ ಉದ್ಯಮಿಗಳು ರಾಜ್ಯದಲ್ಲಿ 6,450 ಕೋಟಿ ರು. ಮೊತ್ತದ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದಾರೆ ಎಂದು ಬುಧವಾರ ವಿಧಾನಸೌಧದಲ್ಲಿ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

  ಬೆಂಗಳೂರು ;  ಕಳೆದ ಎರಡು ವಾರಗಳ ಕಾಲ ಜಪಾನ್‌ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳಿಗೆ ಉನ್ನತ ಮಟ್ಟದ ನಿಯೋಗದ ಭೇಟಿಯು ಸಫಲವಾಗಿದ್ದು, ಅಲ್ಲಿನ ಉದ್ಯಮಿಗಳು ರಾಜ್ಯದಲ್ಲಿ 6,450 ಕೋಟಿ ರು. ಮೊತ್ತದ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದಾರೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಉಭಯ ದೇಶಗಳ ಭೇಟಿಯ ಫಲಶ್ರುತಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಇದರ ಫಲವಾಗಿ ರಾಜ್ಯದಲ್ಲಿ 1 ಸಾವಿರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು.

ಕಳೆದ ಜೂ.24ರಿಂದ ಜು.5ರವರೆಗೆ ಜಪಾನ್‌ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಲಾಗಿದ್ದು, ಈ ವೇಳೆ ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಾಯಿತು. ಇದೇ ವೇಳೆ ಬಂಡವಾಳ ಹೂಡಿಕೆ ರೋಡ್‌ ಶೋ ನಡೆಸಲಾಯಿತು. ತಯಾರಿಕಾ ವಲಯಕ್ಕೆ ರಾಜ್ಯದಲ್ಲಿರುವ ಪೂರಕ ಸೌಲಭ್ಯಗಳ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು ಎಂದು ಹೇಳಿದರು.

ಪ್ರವಾಸದ ವೇಳೆ 35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿದ ನಿಯೋಗವು, ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ಮತ್ತು ಇನ್ವೆಸ್ಟ್ ಕರ್ನಾಟಕ 2025ರಲ್ಲಿ ಭಾಗವಹಿಸಲು 200ಕ್ಕೂ ಹೆಚ್ಚು ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ. ಜಪಾನ್‌ನಲ್ಲಿ ನಡೆದ ರೋಡ್‌ಶೋಗಳಲ್ಲಿ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್, ಟೊಯೊಟಾ ಮೋಟಾರ್ ಕಾರ್ಪೊರೇಷನ್, ಯಮಹಾ ಮೋಟಾರ್ ಕಂಪನಿ, ಸುಮಿಟೊಮೊ ಹೆವಿ ಇಂಡಸ್ಟ್ರೀಸ್, ಪ್ಯಾನಾಸೋನಿಕ್ ಎನರ್ಜಿ, ನಿಡೆಕ್ ಕಾರ್ಪೊರೇಷನ್, ನಿಸಾನ್ ಮೋಟಾರ್ ಕಾರ್ಪೊರೇಷನ್, ಬ್ರದರ್ ಇಂಡಸ್ಟ್ರೀಸ್, ಶಿಮಾಡ್ಜು ಕಾರ್ಪೊರೇಷನ್, ಹಿಟಾಚಿ ಮತ್ತಿತರ ಕಂಪನಿಗಳು ಪ್ರಮುಖವಾಗಿವೆ. ಇನ್ನು, ದಕ್ಷಿಣ ಕೊರಿಯಾದಲ್ಲಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್, ಎಲ್ಜಿ ಎನರ್ಜಿ ಸೆಲ್ಯೂಷನ್ಸ್, ಎಲ್ಎಕ್ಸ್ ಎಲೆಕ್ಟ್ರಾನಿಕ್ಸ್, ನಿಫ್ಕೊ ಕೊರಿಯಾ, ಒಸಿಐ ಹೋಲ್ಡಿಂಗ್ಸ್, ಕ್ರಾಫ್ಟನ್, ಎಚ್‌ವೈಎಸಿ, ಹುಂಡೈ ಮೋಟಾರ್ಸ್, ವೈಜಿ-1, ಹೊಯ್ಸಂಗ್ ಅಡ್ವಾನ್ಸಡ್ ಮಟೇರಿಯಲ್ಸ್ ಮುಂತಾದ ಕಂಪನಿಗಳ ಜತೆ ಸಮಾಲೋಚನೆ ನಡೆಸಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್‌ ಇತರರು ಉಪಸ್ಥಿತರಿದ್ದರು.

ಹೂಡಿಕೆಗೆ ಆಸಕ್ತಿ ಮತ್ತು ಒಪ್ಪಂದ ಮಾಡಿಕೊಂಡ ಕಂಪನಿಗಳ ವಿವರ:

*ಜಪಾನಿನ ಪ್ರಮುಖ ಇಂಧನ ಕಂಪನಿಯಾಗಿರುವ ಒಸಾಕಾ ಗ್ಯಾಸ್, ಮುಂದಿನ 5 ವರ್ಷಗಳಲ್ಲಿ ಅನಿಲ ವಿತರಣಾ ಮೂಲಸೌಲಭ್ಯ ವಿಸ್ತರಿಸಲು ಐದು ಸಾವಿರ ಕೋಟಿ ರು. ಮೊತ್ತದ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿದೆ. *ಕೊರಿಯಾದ ಮಷಿನ್ ಟೂಲ್ಸ್ ಕಂಪನಿ ಡಿಎನ್ ಸಲ್ಯೂಷನ್ಸ್ ಸಂಸ್ಥೆಯು ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ತಯಾರಿಕಾ ಘಟಕ ಸ್ಥಾಪಿಸಲು ಒಂದು ಸಾವಿರ ಕೋಟಿ ರು. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

*ವಾಹನ ಬಿಡಿಭಾಗಗಳನ್ನು ಪೂರೈಸುವ ಜಪಾನಿನ ಅವೊಯಮಾ ಸೈಸಕುಶೊ ಸಂಸ್ಥೆಯು ತುಮಕೂರು ಬಳಿಯ ಜಪಾನ್ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ತಯಾರಿಕಾ ಘಟಕ ಸ್ಥಾಪಿಸಲು 210 ಕೋಟಿ ರು. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.*ಬ್ಯಾಟರಿ ಸೆಲ್‌ಗಳ ಸಂಗ್ರಹ ಮತ್ತು ಪರೀಕ್ಷಾ ಕೇಂದ್ರ ಹಾಗೂ ಪರಿಸರ ಸಂರಕ್ಷಣೆ ಸಲಕರಣೆ ತಯಾರಿಸುವ ಘಟಕ ಸ್ಥಾಪಿಸಲು ಡೈಕಿ ಆ್ಯಕ್ಸಿಸ್, ಹೈವಿಷನ್ ಮತ್ತು ಇಎಂಎನ್ಐ ಕಂಪನಿ ಜಂಟಿಯಾಗಿ 210 ಕೋಟಿ ರು. ಹೂಡಿಕೆಗೆ ಒಪ್ಪಂದಕ್ಕೆ ಸಹಿ ಹಾಕಿವೆ.

*ಸುಮಿಟೊಮೊ ಹೆವಿ ಇಂಡಸ್ಟ್ರೀಸ್ ಬೆಂಗಳೂರಿನಲ್ಲಿ ತನ್ನ ಪ್ರಮುಖ ಕಚೇರಿ ಆರಂಭಿಸಲು ಸಜ್ಜಾಗಿದ್ದು, 2024ರ ಅಂತ್ಯಕ್ಕೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!