ರಂಗೂಪುರ ಶಿವಕುಮಾರ್
ಇಲ್ಲಿನ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ನಗರ ನಿವೇಶನ ಯೋಜನೆಯಲ್ಲಿ ಹಂಚಿಕೆ ಮಾಡಲಾಗಿದ್ದ ೬೫೧ ನಿವೇಶನಗಳನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿಯ ರದ್ದು ಪಡಿಸಿದೆ.
ಪುರಸಭೆ ವ್ಯಾಪ್ತಿಯ ವಿಜಯಪುರ ಸ.ನಂ.೧೩೦/೧,೧೩೧/೨,೧೩೧/೩ ಮತ್ತು ೧೩೧/೨ ಹಾಗೂ ಮಡಹಳ್ಳಿ ಗ್ರಾಮದ ಸ.ನಂ.೨೧೯/೧,೨೨೦/೧.೨೨೧/೧ ರಲ್ಲಿ ಒಟ್ಟು ೧೮.೩೦ ಎಕರೆ ಪ್ರದೇಶದಲ್ಲಿ ಪುರಸಭೆ ರಚಿಸಿದ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಮುಖ್ಯಮಂತ್ರಿಗಳ ನಗರ ನಿವೇಶನ ಯೋಜನೆಯ ನಿವೇಶನ ಹಂಚಿಕೆ ಮಾಡುವಲ್ಲಿ ಸುತ್ತೋಲೆ, ನಿಯಮ ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅನರ್ಹ ಫಲಾನುಭವಿಗಳಿಗೆ, ಹಣ ನೀಡಿದವರಿಗೆ, ಮೂರು-ನಾಲ್ಕು ಸ್ವಂತ ಮನೆ ಉಳ್ಳವರಿಗೆ, ಈ ಹಿಂದೆಯೇ ಪುರಸಭೆಯಿಂದ ನಿವೇಶನ ಪಡೆದಿರುವವರಿಗೆ, ಪುರಸಭೆ ಬಿಲ್ ಕಲೆಕ್ಟರ್‌ಗಳಾಗಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ, ಹಣ ಪಡೆದು ಸೂಚಿಸಿದವರಿಗೆ, ಪರಾಭವಗೊಂಡ ಅಭ್ಯರ್ಥಿಗಳ ರಕ್ತ ಸಂಬಂಧಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೀಡಿರುವ ಉಚಿತ ನಿವೇಶನಗಳ ಹಕ್ಕು ಪತ್ರ ರದ್ದು ಪಡಿಸಿ, ಈ ಅಕ್ರಮದ ಬಗ್ಗೆ ತನಿಖೆ ನಡೆಸಿ. ಈ ಅಕ್ರಮದಲ್ಲಿ ಭಾಗಿಯಾಗಿರುವ ಮತ್ತು ಕರ್ತವ್ಯ ನಿರ್ಲಕ್ಷ್ಯತೆ ಎಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವಂತೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತಕ್ಕೆ ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ,ಮಹಮ್ಮದ್ ಇಲಿಯಾಸ್, ದೊಡ್ಡಣ್ಣ,ಎನ್.ಕುಮಾರ್.ರಾಜಗೋಪಾಲ ಎಚ್.ಆರ್,ವಕೀಲ ಬಂಗಾರನಾಯಕ ೨೦೨೩ ಜಜ.೧೭ ಮತ್ತು ಮಾ.೩ ರಂದು ದೂರು ಸಲ್ಲಿಸಿದ್ದರು.ದೂರಿನ ಆಧಾರದ ಮೇಲೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವಸತಿ/ಮಾರ್ಗಸೂಚಿಗಳನ್ವಯ ಫಲಾನುಭವಿಗಳನ್ನು ಆಯ್ಕೆ ಮಾಡಿರುವ ಬಗ್ಗೆ ಹಾಗು ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸಲು ಜಿಲ್ಲಾ ಮಟ್ಟಡ ತನಿಖಾ ತಂಡ ನೇಮಿಸಿ ಫಲಾನುಭವಿಗಳ ಅರ್ಹ/ಅನರ್ಹರಿರುವ ಬಗ್ಗೆ ವಿವಿರವಾದ ವರದಿ ಪಡೆದು ಅರ್ಹವಿರುವ ಫಲಾನುಭವಿಗಳ ಪಟ್ಟಿಗೆ ನಗರ ಆಶ್ರಯ ಸಮಿತಿಯ ಅನುಮೋದನೆ ಹಾಗೂ ಆಶ್ರಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿ ಸಹಿ ಹಾಗೂ ತಮ್ಮ ಶಿಪಾರಸ್ಸಿನೊಂದಿಗೆ ವರದಿ ಸಲ್ಲಿಸಲು ಕೋರಲಾಗಿತ್ತು.ವರದಿ ಸಲ್ಲಿಕೆ:
ತನಿಖಾ ವರದಿ ಹಾಗೂ ಶಿಪಾರಸ್ಸಿನನ್ವಯ ಅನರ್ಹ ಫಲಾನುಭವಿಗಳ ಆಯ್ಕೆ ಮತ್ತು ನಿವೇಶನವನ್ನು ಕಂದಾಯ ನಿಯಮಾವಳಿಗಳ ಪ್ರಕಾರ ರದ್ದು ಪಡಿಸಿ ಹೊರಡಿಸಲಾದ ಅಧಿಕೃತ ಜ್ಞಾಪನ ಹಾಗೂ ಆಶ್ರಯ ಮಾರ್ಗ ಸೂಚಿಗಳನ್ವಯ ನಿಯಮಾನುಸಾರ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಆನ್ ಲೈನ್ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುವುದು ಎಂದು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಜಿಲ್ಲಾಧಿಕಾರಿಗಳಿಗೆ ಅವಗಾಹನೆಗೆ ಸಲ್ಲಿಸಿದೆ.
ಬಿಜೆಪಿಗೆ ತೀವ್ರ ಮುಖಭಂಗಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯ ಅರ್ಹರಿಗೆ ನಿವೇಶನ ಕೊಟ್ಟಿಲ್ಲದಿರುವುದು ಸಾಬೀತಾಗಿದ್ದು, ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಸತಿ ಸಚಿವ ವಿ.ಸೋಮಣ್ಣ ಹಕ್ಕುಪತ್ರ ವಿತರಿಸಿದ್ದರು. ಅಂದಿನ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಹಾಗೂ ಪುರಸಭೆ ಸದಸ್ಯರು ಸಾಕ್ಷಿಯಾಗಿದ್ದರು. ನಿವೇಶನ ಹಕ್ಕು ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌ನ ಪುರಸಭೆ ಸದಸ್ಯರು ದೂರನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಹಾಗೂ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು.