ಹರಪನಹಳ್ಳಿಯಲ್ಲಿ 67 ಪೋಕ್ಸೋ ಪ್ರಕರಣ ದಾಖಲು

KannadaprabhaNewsNetwork |  
Published : Jun 08, 2026, 03:30 AM IST
1)- 7ಎಚ್‌ ಆರ್‌ ಪಿ 1 - ಸಂತೋಷ ಚೌವ್ಹಾಣ್-ಡಿವೈಎಸ್ಪಿ 2)- 7ಎಚ್‌ ಆರ್‌ ಪಿ 2 - ಅಶೋಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ,3)- 7ಎಚ್‌ ಆರ್‌ ಪಿ 3 -ಮಹಾಂತೇಶ್ ಸಜ್ಜನ್, ಸಿಪಿಐ, ಹರಪನಹಳ್ಳಿ  | Kannada Prabha

ಸಾರಾಂಶ

ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿ, ಪ್ರೇಮದ ಪಾಶಕ್ಕೆ ಸಿಲುಕಿ ದಾರಿ ತಪ್ಪುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪೋಕ್ಸೊ ಪ್ರಕರಣ ಹೆಚ್ಚುತ್ತಿವೆ.

ಬಿ. ರಾಮಪ್ರಸಾದ್ ಗಾಂಧಿ

ಹರಪನಹಳ್ಳಿ: ಪೋಷಕರ ನಿರ್ಲಕ್ಷ್ಯ, ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿ, ಪ್ರೇಮದ ಪಾಶಕ್ಕೆ ಸಿಲುಕಿ ದಾರಿ ತಪ್ಪುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪೋಕ್ಸೊ ಪ್ರಕರಣ ಹೆಚ್ಚುತ್ತಿವೆ. ಮೂರು ವರ್ಷಗಳಲ್ಲಿ 67 ಕೇಸ್‌ ದಾಖಲಾಗಿರುವುದು ಆತಂಕದ ಸಂಗತಿಯಾಗಿದೆ. ಹರಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ 20, ಅರಸೀಕೆರೆ ಠಾಣೆ 17, ಚಿಗಟೇರಿ 17, ಹಲವಾಗಲು 13 ಪೋಕ್ಸೊ ಪ್ರಕರಣ ದಾಖಲಾಗಿವೆ.

ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳುವ ಬಾಗಿಲಲ್ಲಿಯೇ ಪ್ರೀತಿ, ಪ್ರೇಮದ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ತಂದೆ, ತಾಯಿ ಗೌರವವನ್ನು ಮಣ್ಣುಪಾಲು ಮಾಡಿ, ಓಡಿ ಹೋಗಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಆನಂತರ ಜೀವನ ಹಾಳಾಯಿತು ಎಂದು ಪರಿತಪಿಸುತ್ತಿದ್ದಾರೆ.

ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಿಂದ ಶಾಲಾ- ಕಾಲೇಜುಗಳಲ್ಲಿ ಅವಿರತವಾಗಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದರೂ ಹದಿಹರೆಯದ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮಾತ್ರ ನಿಲ್ಲುತ್ತಿಲ್ಲ. ಪ್ರೇಮ ಪ್ರಕರಣದಲ್ಲಿ ಸಿಲುಕಿಯೋ, ಅತಿಯಾದ ಮೊಬೈಲ್ ಬಳಕೆಯಿಂದಲೋ, ರೀಲ್ಸ್‌ ಹುಚ್ಚಾಟದಿಂದಲೋ, ಬಾಲ್ಯ ವಿವಾಹದಿಂದಲೋ ಇನ್ನಿತರ ಕಾರಣಗಳಿಂದಲೋ ಬಾಲಕಿಯರು ಲೈಂಗಿಕ ಶೋಷಣೆ ಹಾಗೂ ಅತ್ಯಾಚಾರಕ್ಕೆ ಒಳಗಾಗುತ್ತಿರುವುದು ಗೊತ್ತಾಗುತ್ತಿದೆ. ಬಾಲಕಿಯರನ್ನು ಯುವಕರೋ, ಮತ್ಯಾರೋ ಪ್ರೀತಿಸಿ, ಲೈಂಗಿಕ ಆಸೆಗೆ ಬಳಸಿಕೊಂಡು ಪೊಲೀಸ್‌ ಠಾಣೆ ಮೆಟ್ಟಿಲೇರುವ ಹಾಗೂ ಜೈಲು ಪಾಲಾಗುತ್ತಿರುವ ಪ್ರಕರಣಗಳು ಎಲ್ಲೆಡೆ ಇದೀಗ ವ್ಯಾಪಕವಾಗಿ ಹೆಚ್ಚುತ್ತಿವೆ.

ಪೋಕ್ಸೊ ಪ್ರಕರಣದಲ್ಲಿ ಸಿಲುಕಿದವರಿಗೆ ಸಾಕ್ಷ್ಯ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಶಿಕ್ಷೆಯಾಗುವ ಪ್ರಮಾಣ ಕಡಿಮೆ ಆಗುತ್ತಿದೆ. ತನಿಖೆಗೆ ಸಂತ್ರಸ್ತರು ಹಾಗೂ ಕುಟುಂಬದಿಂದ ಸಹಕಾರ ಸಿಗದಿರುವುದು, ಪ್ರಕರಣ ಮುಂದುವರಿಸಿಕೊಂಡು ಹೋಗಲು ಹಿಂಜರಿಯುವುದು ಆರೋಪಿಗಳು ಬಚಾವ್‌ ಆಗಲು ದಾರಿ ಮಾಡಿಕೊಡುತ್ತಿದೆ.

ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಪ್ರೀತಿ, ಪ್ರೇಮದ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಪೋಷಕರ ನಿರ್ಲಕ್ಷ್ಯ, ಗುಳೆ ಹೋಗುವುದು, ಇತರ ಕೆಲಸ ಕಾರ್ಯಗಳ ಒತ್ತಡದಿಂದ ತಮ್ಮ ಮಕ್ಕಳ ಮೇಲೆ ನಿಗಾ ವಹಿಸದಿರುವುದು ಮತ್ತು ಬಾಲ್ಯ ವಿವಾಹಗಳು ಪೋಕ್ಸೊ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ನಮ್ಮ ಪೊಲೀಸ್ ಇಲಾಖೆ ತಾಲೂಕಿನ ಪ್ರತಿ ಶಾಲಾ- ಕಾಲೇಜುಗಳಲ್ಲಿ ನಿರಂತರವಾಗಿ ಪೋಕ್ಸೊ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಕ್ರಮ ಮಾಡುತ್ತಾ ಬಂದಿದೆ ಎನ್ನುತ್ತಾರೆ ಹರಪನಹಳ್ಳಿ ಉಪವಿಭಾಗದ ಡಿವೈಎಸ್ಪಿ ಸಂತೋಷ್ ಚವ್ಹಾಣ್.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೊ ಕಾಯಿದೆ ಕುರಿತಂತೆ ಗ್ರಾಪಂ, ಅಂಗನವಾಡಿ, ಗ್ರಾಮಸಭೆಗಳು, ಶಾಲೆ- ಕಾಲೇಜು ಮಟ್ಟದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ತಾಲೂಕು ಮಕ್ಕಳ ರಕ್ಷಣಾ ಘಟಕದಿಂದ ಅರಿವು ಮೂಡಿಸಲಾಗುತ್ತಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಅಶೋಕ.

ಪೋಷಕರು ತಮ್ಮ ಮಕ್ಕಳ ಮೇಲಿನ ನಿರ್ಲಕ್ಷ್ಯದಿಂದ ಲೈಂಗಿಕ ದೌರ್ಜನ್ಯ ಪ್ರಕರಣ ಜಾಸ್ತಿಯಾಗುತ್ತಿವೆ. ಅತಿಯಾದ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣದ ಪರಿಣಾಮದಿಂದಾಗಿ ಪ್ರೀತಿ, ಪ್ರೇಮದ ಪಾಶಕ್ಕೆ ಸಿಲುಕಿ, ದಾರಿ ತಪ್ಪುತ್ತಿದ್ದಾರೆ. ಇದು ಪೋಕ್ಸೊ ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದೆ. ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು ಎನ್ನುತ್ತಾರೆ ಸಿಪಿಐ ಮಹಾಂತೇಶ್ ಸಜ್ಜನ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾತ್ಮಾಗಾಂಧಿ ಪ್ರೌಢಶಾಲೆಗೆ ಸಲಕರಣೆಗಳ ಹಸ್ತಾಂತರ
ಘನತ್ಯಾಜ್ಯ 2026ರ ನಿಯಮ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ