ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸಿಐಟಿಯು ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ 6ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಕನಿಷ್ಠ ಕೂಲಿ ಸೇರಿ ಇತರ ಸೌಲಭ್ಯ ಗಳನ್ನು ಕಲ್ಪಿಸಿಕೊಡಬೇಕು. ಸರ್ಕಾರಗಳು ಅಂಗನವಾಡಿಗಳ ಖಾಸಗೀಕರಣ ನಿಲ್ಲಿಸಬೇಕು, ಇಲ್ಲದಿದ್ದರೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸರ್ಕಾರಗಳು ಅಂಗನವಾಡಿ ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸುವುದರಲ್ಲಿ ಪಕ್ಷಪಾತ ಮಾಡುತ್ತಿವೆ. ಪ್ರಬಲ ಹೋರಾಟದ ಮೂಲಕ ಸರ್ಕಾರಗಳನ್ನು ಎಚ್ಚರಿಸಲಾಗುವುದು. ಇಎಸ್ಐ, ಪಿಂಚಣಿ ಸೌಲಭ್ಯ ಸೇರಿ ಇತರೆ ಮೂಲ ಸೌಲಭ್ಯಗಳನ್ನು ನೀಡಿ ಸರ್ಕಾರಿ ನೌಕರರಂತೆ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರನ್ನು ಪರಿಗಣಿಸಬೇಕೆಂದು ಆಗ್ರಹಿಸಿದರು.ಅಂಗನವಾಡಿ ನೌಕರರ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಮಾತನಾಡಿ, ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಐಸಿಡಿಎಸ್ ಯೋಜನೆಗೆ ಅನುದಾನ ಕಡಿತಗೊಳಿಸುವ ಮೂಲಕ ಯೋಜನೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕನಿಷ್ಠ ವೇತನ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿ ನವೆಂಬರ್ 4 ರಂದು ರಾಜ್ಯದಾದ್ಯಂತ ಸಂಸದರ ಮನೆ ಬಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು. ಇದಕ್ಕೆ ಸ್ಪಂದಿಸಿ ನಮ್ಮ ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 1, 2 ಹಾಗೂ 3 ರಂದು ದೆಹಲಿ ಚಲೋ ಹಮ್ಮಿಕೊಳ್ಳುತ್ತೇವೆ. ದೇಹಲಿಗೆ ಪ್ರವೇಶ ನಿರ್ಬಂಧಿಸಿದರೆ ಮೆಟ್ರೋ, ರೈಲುಗಳಲ್ಲಿ ಎಲ್ಲಿದ್ದರೆ ಅಲ್ಲಿಯೇ ಅಂಗನವಾಡಿ ಕಾರ್ಯಕರ್ತರು 48 ಗಂಟೆಗಳ ಕಾಲ ಪ್ರತಿಭಟನೆ ನಡೆಸಿಯೇ ತೀರುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ದೇಶದಲ್ಲಿ ಐಸಿಡಿಎಸ್ ಜಾರಿಗೆ ಬಂದು 51 ವರ್ಷವಾಗಿದ್ದರೂ ಕನಿಷ್ಠ ವೇತನಕ್ಕೆ ಅಂಗನವಾಡಿ ನೌಕರರು ಒಳಗಾಗದೆ ಇರುವುದು ಅಚ್ಚರಿಯ ವಿಷಯ. ಈಚೆಗೆ ಮಾಡಲಾದ ಕನಿಷ್ಠ ವೇತನ ಪಡೆಯಲು ಅರ್ಹರೆನಿಸಿದವರ ಪಟ್ಟಿಯಲ್ಲಿ ಅಂಗನವಾಡಿ ಕಾರ್ಯಕರ್ತರನ್ನು ಕೈಬಿಟ್ಟಿರುವುದು ಅಕ್ಷಮ್ಯ. ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ ಗೌರವಧನ ಎನ್ನುವ ಹಣೆಪಟ್ಟಿಯನ್ನು ತೆಗೆದು ತಮ್ಮನ್ನು ಕಾಯಂ ನೌಕರರೆಂದು ಪರಿಗಣಿಸಿ, ಕಾರ್ಯಕರ್ತರಿಗೆ ಕನಿಷ್ಠ ₹41 ಸಾವಿರ, ಸಹಾಯಕಿಯರಿಗೆ ₹35 ಸಾವಿರ, ಕನಿಷ್ಠ ₹18 ಸಾವಿರ ಮಾಸಿಕ ಪಿಂಚಣಿಗಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ನಿಶ್ಚಿತ ಎಂದರು.
ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಆರೋಗ್ಯ ತಪಾಸಣೆ, ವಿಶೇಷ ಮಕ್ಕಳನ್ನು ಎನ್ಆರ್ಸಿಗೆ ಕಳುಹಿಸುವುದು, ಪೌಷ್ಟಿಕ ಆಹಾರ ಮತ್ತು ಸಂಬಂಧಪಟ್ಟ ಔಷಧಿಗಳನ್ನು ಕೊಡಿಸುವುದು, ಬಿಎಲ್ಓ ಗಳಾಗಿ ಕೆಲಸ ಮಾಡುತ್ತಿರುವುದು, ಗರ್ಭಿಣಿಯರ ಮಾತೃ ವಂದನ ಅರ್ಜಿ ತುಂಬುವುದು, ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡುವುದು, ಗೃಹಲಕ್ಷ್ಮಿ ಸರ್ವೇ, ಶಾಲೆ ಬಿಟ್ಟ ಮಕ್ಕಳ ಸರ್ವೇ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೀಗೆ ಹಲವು ಸರ್ವೇಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದ್ದಾರೆ. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗೌರವಧನ ಎಂಬ ಹೆಸರಿನಲ್ಲಿ ಗೌರವ ಕಾರ್ಯಕರ್ತೆಯರನ್ನಾಗಿ ತೆಗೆದುಕೊಂಡು ಸರ್ಕಾರ ಮಹಿಳೆಯರನ್ನು ಶೋಷಿಸುತ್ತಿದೆ. ನಮಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಸಬಲೀಕರಣ ಮಾಡುವುದಾಗಿ ಹೇಳುತ್ತಿವೆ. ಆದರೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಈಗಲಾದರೂ ಕನಿಷ್ಠ ವೇತನ ಜಾರಿ ಮಾಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಆಸರೆಯಾಗಬೇಕೆಂದು ಆಗ್ರಹಿಸಿದರು.