ರೈತರಿಗೆ ಹಗಲು ಹೊತ್ತಿನಲ್ಲೇ 7 ಗಂಟೆ ವಿದ್ಯುತ್‌

KannadaprabhaNewsNetwork |  
Published : Sep 11, 2025, 12:03 AM IST
ಸಸಸ | Kannada Prabha

ಸಾರಾಂಶ

ವಿದ್ಯುತ್ ಮಾರ್ಗ ಜಾಲದಿಂದ 500 ಮೀ ವ್ಯಾಪ್ತಿಯ ಹೊರಗಿರುವ ಪಂಪ್‍ಸೆಟ್‌ಗಳಿಗೆ ಕುಸುಮ್‌- ಬಿ ಯೋಜನೆಯಡಿ ಸೋಲಾರ್‌ ವಿದ್ಯುತ್‌ ಕಲ್ಪಿಸಲಾಗುವುದು

ಗದಗ: ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿಯೇ ನಿರಂತರ ಏಳು ಗಂಟೆಗಳ ಕಾಲ ವಿದ್ಯುತ್‌ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕುಸುಮ್‌- ಬಿ ಹಾಗೂ ಕುಸುಮ್‌- ಸಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಅವರು ಗದಗ ಜಿಪಂ ಸಭಾಂಗಣದಲ್ಲಿ ಬುಧವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ವಿದ್ಯುತ್ ಮಾರ್ಗ ಜಾಲದಿಂದ 500 ಮೀ ವ್ಯಾಪ್ತಿಯ ಹೊರಗಿರುವ ಪಂಪ್‍ಸೆಟ್‌ಗಳಿಗೆ ಕುಸುಮ್‌- ಬಿ ಯೋಜನೆಯಡಿ ಸೋಲಾರ್‌ ವಿದ್ಯುತ್‌ ಕಲ್ಪಿಸಲಾಗುವುದು. ಈ ಯೋಜನೆಗೆ ನಮ್ಮ ಸರ್ಕಾರದಿಂದ ನೀಡಲಾಗುವ ಸಬ್ಸಿಡಿಯನ್ನು ಶೇ. 30 ರಿಂದ ಶೇ 50ಕ್ಕೆ ಹೆಚ್ಚಳ ಮಾಡಿದೆ. ಅದೇ ರೀತಿ ಕುಸುಮ್- ಸಿ ಯೋಜನೆಯಡಿ ಕೃಷಿ ಫೀಡರ್ ಸೌರೀಕರಣ ಕಾರ್ಯ ನಡೆಯುತ್ತಿದ್ದು, ಇದರಿಂದ ಹಗಲು ವೇಳೆ ರೈತ ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ‌

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 4.5 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳು ಇದ್ದವು. ನಾವು ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಿ ಮೂಲ ಸೌರ್ಯ ಒದಗಿಸಲಾಗಿದೆ. ಇನ್ನೊಂದು ವರ್ಷದಲ್ಲಿ ಉಳಿದ ಪಂಪ್ ಸೆಟ್ ಗಳನ್ನೂ ಸಕ್ರಮಗೊಳಿಸುವ ಕಾರ್ಯ ಪೂರ್ಣಗೊಳ್ಳಲಿವೆ. ಇದರ ಜತೆಗೆ ತ್ವರಿತವಾಗಿ ವಿದ್ಯುತ್‌ ಸಂಪರ್ಕ ಪಡೆಯಲು ಬಯಸಿದ ರೈತರಿಗಾಗಿ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದ್ದೇವೆ. ರೈತರು ಸ್ವಂತ ಖರ್ಚಿನಲ್ಲಿ ವಿದ್ಯುತ್‌ ಜಾಲ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎಸ್ಕಾಂಗಳಿಂದ ಟ್ರಾನ್ಸ್ ಫಾರ್ಮರ್ ನೀಡಲಾಗುತ್ತಿದೆ ಎಂದರು.

ಸಮರ್ಪಕ ವಿದ್ಯುತ್ ಪೂರೈಕೆಗಾಗಿ ರಾಜ್ಯದಲ್ಲಿ ಮೂಲ ಸೌಕರ್ಯ ಹೆಚ್ಚಿಸಲಾಗುತ್ತಿದ್ದು, ಕೆಪಿಟಿಸಿಎಲ್ ವತಿಯಿಂದ ಹೊಸದಾಗಿ 100 ವಿದ್ಯುತ್‌ ಉಪಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ವರ್ಷವೂ ಹೆಚ್ಚೆಚ್ಚು ವಿದ್ಯುತ್‌ ಉಪಕೇಂದ್ರ ಸ್ಥಾಪಿಸಲು ಯೋಜಿಸಲಾಗಿದೆ. ಪವನ ಹಾಗೂ ಸೌರ ವಿದ್ಯುತ್‌ನ್ನು ಬ್ಯಾಟರಿ ಮೂಲಕ ಸಂಗ್ರಹ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು‌ ಜಾರ್ಜ್ ತಿಳಿಸಿದರು.

ರೈತರ ಪಂಪ್‌ಸೆಟ್‌ಗಳಿಗೆ ಸುಲಭ ಮತ್ತು ಸಮಪರ್ಕ ವಿದ್ಯುತ್‌ ಸರಬರಾಜು ಮಾಡುವ ನಿಟ್ಟಿನಲ್ಲಿ ಟ್ರಾನ್ಸ್‌ಫಾರ್ಮರ್ ಬ್ಯಾಂಕ್‌ ಮಾಡಿದ್ದೇವೆ. ರೈತರಿಗೆ ಹೊರೆಯಾಗದಂತೆ ಇಲಾಖೆಯ ವಾಹನದಲ್ಲಿಯೇ ಟ್ರಾನ್ಸ್‌ಫಾರ್ಮರ್ ಸಾಗಿಸುವಂತೆ ಅಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

3 ಸಾವಿರ ಲೈನ್ ಮನ್ ಪ್ರಕ್ರಿಯೆ ಪೂರ್ಣ

3 ಸಾವಿರ ಲೈನ್‍ಮನ್‍ಗಳ ನೇಮಕಾತಿ ಪ್ರಕ್ರಿಯೆ ಇನ್ನೊಂದು ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಮಳೆ-ಗಾಳಿಯಿಂದ ಸಮಸ್ಯೆಯಾದಾಗ ತ್ವರಿತವಾಗಿ ಸ್ಪಂದಿಸಿ ವಿದ್ಯುತ್ ಪೂರೈಕೆ ಪುನಃ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಲೈನಮನ್ ಗಳನ್ನು ಅಭಿನಂದಿಸಿದರು.

ಶೆ. 99% ಸಾಧನೆ

ಗೃಹ ಜ್ಯೋತಿ ರಾಜ್ಯದಲ್ಲಿ ಶೇ. 99ರಷ್ಟು ಸಾಧನೆಯಾಗಿದೆ. ಗದಗ ಜಿಲ್ಲೆಯಲ್ಲಿ ಒಟ್ಟು ಶೇ. 98.49ರಷ್ಟು ಸಾಧನೆ ಮಾಡಲಾಗಿದೆ. ಗದಗ ನಗರದಲ್ಲಿ ಶೇ. 99.47, ಗ್ರಾಮೀಣ ಭಾಗದಲ್ಲಿ ಶೇ. 99.45ರಷ್ಟು ಸಾಧನೆಯಾಗಿದೆ ಎಂದು ಇಲಾಖೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಅಧಿಕಾರಾವಧಿಯಲ್ಲಿ ಕೇವಲ ಒಂದು ತಿಂಗಳು ಮಾತ್ರ ವಿದ್ಯುತ್‌ ಕೊರತೆ ಉಂಟಾಗಿತ್ತು. ಉತ್ತರ ಪ್ರದೇಶ ಹಾಗೂ ಪಂಜಾಬ್‌ ರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ವಿದ್ಯುತ್‌ ಪಡೆದು ಸಮಸ್ಯೆ ಬಗೆಹರಿಸಲಾಗಿತ್ತು. ಸದ್ಯ ನಮ್ಮಲ್ಲಿ ವಿದ್ಯುತ್‌ ಕೊರತೆಯಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ