ಸಿಎಂ ಆಗಿ 7 ವರ್ಷ: ಅರಸು ದಾಖಲೆಯತ್ತ ಸಿದ್ದು!

KannadaprabhaNewsNetwork |  
Published : May 20, 2025, 01:06 AM IST
32 | Kannada Prabha

ಸಾರಾಂಶ

ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮೇ 20ಕ್ಕೆ ಎರಡು ವರ್ಷ ಪೂರೈಸಲಿದ್ದು, 3ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಮೂಲಕ ಮಾಜಿ ಸಿಎಂ ಡಿ.ದೇವರಾಜ ಅರಸು ಆಡಳಿತಾವಧಿಗೆ ಹತ್ತಿರವಾಗಿದ್ದಾರೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮೇ 20ಕ್ಕೆ ಎರಡು ವರ್ಷ ಪೂರೈಸಲಿದ್ದು, 3ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಮೂಲಕ ಮಾಜಿ ಸಿಎಂ ಡಿ.ದೇವರಾಜ ಅರಸು ಆಡಳಿತಾವಧಿಗೆ ಹತ್ತಿರವಾಗಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರಿನಿಂದ 6 ಬಾರಿ ಆಯ್ಕೆಯಾಗಿದ್ದ ಡಿ.ದೇವರಾಜ ಅರಸು ಅವರು 2 ಬಾರಿ ಮುಖ್ಯಮಂತ್ರಿ ಆಗಿದ್ದರು. ಮೊದಲ ಬಾರಿ ಪೂರ್ಣಾವಧಿ ಆಳ್ವಿಕೆ ನಡೆಸಿದ ಅರಸು 2ನೇ ಅವಧಿಯಲ್ಲಿ 3 ವರ್ಷ ಇದ್ದರು. ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ 5 ವರ್ಷ (2013-2018) ಪೂರ್ಣಾವಧಿ ಆಡಳಿತ ನಡೆಸಿದ್ದು, ಅರಸು ಅವರ ನಂತರ ಪೂರ್ಣಾವಧಿ ಆಡಳಿತ ನಡೆಸಿದ ಸಿಎಂ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 2023ರಲ್ಲಿ ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಇದೀಗ ಎರಡು ವರ್ಷ ಪೂರೈಸಿದ್ದಾರೆ.

ಬಜೆಟ್‌ ಮಂಡನೆಯಲ್ಲಿ ರೆಕಾರ್ಡ್‌:

ಹಣಕಾಸು ಸಚಿವರೂ ಆಗಿದ್ದ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ 16 ಬಾರಿ ಬಜೆಟ್‌ ಮಂಡಿಸಿದ್ದು, ಅತೀ ಹೆಚ್ಚು ಬಜೆಟ್ ಮಂಡನೆಯ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರು 13 ಬಾರಿ ಬಜೆಟ್‌ ಮಂಡಿಸಿದ್ದರು.

ಚಾಮರಾಜನಗರಕ್ಕೂ ಭೇಟಿ:

ಸಿಎಂ ಆದವರೂ ಚಾಮರಾಜನಗರಕ್ಕೆ ಭೇಟಿ ನೀಡಿದರೇ 6 ತಿಂಗಳೊಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿಗೆ ಸಡ್ಡು ಹೊಡೆದ ಸಿದ್ದರಾಮಯ್ಯ ಅವರು, ಸಿಎಂ ಆದ ನಂತರ ಚಾಮರಾಜನಗರಕ್ಕೆ 20 ಬಾರಿ ಭೇಟಿ ನೀಡಿದ್ದಾರೆ. ಆ ಮೂಲಕ ಚಾಮರಾಜನಗರಕ್ಕೆ ಅಂಟಿದ್ದ ಪ್ರತೀತಿ ಸುಳ್ಳಾಗಿಸಿದ್ದಾರೆ.

ಜಿಲ್ಲೆಯಿಂದ ಅತಿ ಹೆಚ್ಚು ಬಾರಿ ಶಾಸಕ:

ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದವರು ಎಂಬ ದಾಖಲೆ ಕೂಡ ಸಿದ್ದರಾಮಯ್ಯ ಅವರ ಹೆಸರಿಗೆ ಸೇರಿದೆ. ಸಿದ್ದರಾಮಯ್ಯ ಅವರು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ 1983, 1985, 1994, 2004, 2006ರಲ್ಲಿ, ವರುಣದಿಂದ 2008, 2013, 2023 ಹಾಗೂ ಬಾದಾಮಿ ಕ್ಷೇತ್ರದಿಂದ 2018ರಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ಗುಂಡ್ಲುಪೇಟೆಯ ಕೆ.ಎಸ್‌.ನಾಗರತ್ನಮ್ಮ ಅವರು 7 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ಟಿ.ನರಸೀಪುರದ ಡಾ.ಎಚ್‌.ಸಿ.ಮಹದೇವಪ್ಪ, ಪಿರಿಯಾಪಟ್ಟಣದ ಕೆ.ವೆಂಕಟೇಶ್‌, ನರಸಿಂಹರಾಜ ಕ್ಷೇತ್ರದ ತನ್ವೀರ್‌ ಸೇಠ್‌ 6ನೇ ಬಾರಿ ಶಾಸಕರಾಗಿದ್ದಾರೆ. ಡಿ.ದೇವರಾಜ ಅರಸು ಅವರು ಹುಣಸೂರು ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿ ಗೆದ್ದಿದ್ದರು.

ಒಂದಲ್ಲ ಒಂದು ಅಧಿಕಾರ:

ಸಿದ್ದರಾಮಯ್ಯ ಅವರಿಗೆ 2004ರಿಂದಲೂ ಒಂದಲ್ಲ ಒಂದು ಅಧಿಕಾರ ಸಿಕ್ಕಿದೆ. 2004ರಲ್ಲಿ 2ನೇ ಬಾರಿ ಡಿಸಿಎಂ ಆಗಿದ್ದ ಸಿದ್ದರಾಮಯ್ಯ 2008ರಲ್ಲಿ ವರುಣಾದಿಂದ ಗೆದ್ದಾಗ 1 ವರ್ಷದ ನಂತರ ಪ್ರತಿಪಕ್ಷ ನಾಯಕ ಆಗಿದ್ದರು. 2013ರಲ್ಲಿ 2ನೇ ಬಾರಿ ಗೆದ್ದಾಗ ಸಿಎಂ ಆದರು. 2018ರಲ್ಲಿ ಬಾದಾಮಿಯಿಂದ ಗೆದ್ದಾಗ 14 ತಿಂಗಳ ಪ್ರತಿಪಕ್ಷ ನಾಯಕ ಆಗಿದ್ದು, 2023ರಲ್ಲಿ ವರುಣಾದಿಂದ 3ನೇ ಬಾರಿ ಗೆದ್ದಾಗ 2ನೇ ಬಾರಿ ಮುಖ್ಯಮಂತ್ತಿ ಆಗಿದ್ದಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?