ಕೆರೆಯಂಗಳ ಅಭಿವೃದ್ಧಿಗೆ ೭೦ ಕೋಟಿ ರು.: ಪಿ.ರವಿಕುಮಾರ್

KannadaprabhaNewsNetwork |  
Published : Jul 22, 2026, 01:30 AM IST
೨೧ಕೆಎಂಎನ್‌ಡಿ-೭ಮಂಡ್ಯದ ಕೆರೆಯಂಗಳದಲ್ಲಿರುವ ಕೆಹೆಚ್‌ಬಿ ಕಾಲೋನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪಿ.ರವಿಕುಮಾರ್ ಗುದ್ದಲಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಕೆಎಚ್‌ಬಿ ಕಾಲೋನಿ, ಮುಡಾ, ವಿವೇಕಾನಂದ ನಗರ ಹಾಗೂ ಬಿಡಿ ಕಾಲೋನಿಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದರೂ ಸುಮಾರು ೨೫ ವರ್ಷಗಳಿಂದ ಉಳಿದಿದ್ದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಈಗ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯನಗರದ ಕೆರೆಯಂಗಳ ವ್ಯಾಪ್ತಿಯ ವಾರ್ಡ್‌ಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಸುಮಾರು ೭೦ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೂಲಸೌಕರ್ಯ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ಕೆಎಚ್‌ಬಿ ಕಾಲೋನಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರೊಂದಿಗೆ ಸಂವಾದಕಾರ್ಯಕ್ರಮದಲ್ಲಿ ಮಾತನಾಡಿ, ಕೆಹೆಚ್‌ಬಿ ಕಾಲೋನಿಯ ೫೦*೬೦ ಅಳತೆಯ ಖಾಲಿ ನಿವೇಶನಗಳ ಸ್ವಚ್ಛತೆ, ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ೨.೫೦ ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ಕೆಎಚ್‌ಬಿ ಕಾಲೋನಿ, ಮುಡಾ, ವಿವೇಕಾನಂದ ನಗರ ಹಾಗೂ ಬಿಡಿ ಕಾಲೋನಿಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದರೂ ಸುಮಾರು ೨೫ ವರ್ಷಗಳಿಂದ ಉಳಿದಿದ್ದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಈಗ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಜನರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮಬದ್ಧವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ:

ಕೆಎಚ್‌ಬಿ ಕಾಲೋನಿಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮೊದಲ ಹಂತದಲ್ಲಿ ೭೫ ಲಕ್ಷ ರು. ಬಿಡುಗಡೆ ಮಾಡಲಾಗಿದ್ದು, ಎರಡನೇ ಹಂತದಲ್ಲಿ ೧.೨೦ ಕೋಟಿ ರು. ಮಂಜೂರು ಮಾಡಲಾಗುತ್ತಿದೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ಪ್ರಮುಖ ರಸ್ತೆ ಅಭಿವೃದ್ಧಿಗೆ ೧೦ ಕೋಟಿ ರು.:

ನಾಗಮಂಗಲ ರಸ್ತೆ (ತೆರಿಗೆ ಇಲಾಖೆ ಕಚೇರಿ)ಯಿಂದ ಮೇಲುಕೋಟೆ ರಸ್ತೆಯವರೆಗೆ ರಾಜ್ಯ ಹೆದ್ದಾರಿ ಪ್ರಾಧಿಕಾರದ ಮೂಲಕ ೧೦ ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಟೆಂಡರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಶುರುವಾಗಲಿದೆ ಎಂದರು.

ಕೆಎಚ್‌ಬಿ-ವಿವೇಕಾನಂದ ನಗರಕ್ಕೆ ೨೦ ಕೋಟಿ ರು.

ಕಾವೇರಿ ನೀರಾವರಿ ನಿಗಮದಿಂದ ಗೃಹಮಂಡಳಿ ಬಡಾವಣೆ ಹಾಗೂ ವಿವೇಕಾನಂದ ನಗರಗಳ ರಸ್ತೆ ಮತ್ತು ಸ್ಲ್ಯಾಬ್ ಕಾಮಗಾರಿಗಳಿಗೆ ೨೦ ಕೋಟಿ ರು. ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ಮಳೆಗಾಲದಲ್ಲಿ ಉಂಟಾಗುತ್ತಿದ್ದ ಪ್ರವಾಹ ಸಮಸ್ಯೆ ತಡೆಗಟ್ಟುವ ಉದ್ದೇಶದಿಂದ ೧೦ ಕೋಟಿ ರು. ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಯ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿಗೆ ೫ ಕೋಟಿ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ವಾರ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕಳೆದ ೨೫ ವರ್ಷಗಳಿಂದ ಈ ಭಾಗದ ಜನರು ಎದುರಿಸುತ್ತಿದ್ದ ಪ್ರವಾಹ ಭೀತಿ ಹಾಗೂ ಮೂಲಸೌಕರ್ಯ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ನಾನು ಶಾಸಕನಾದ ನಂತರ ಈ ಭಾಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಅನೇಕ ಕಾಮಗಾರಿಗಳನ್ನು ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ಅಧ್ಯಕ್ಷ ನಹೀಮ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ಜಿಡಿಪಿಗೆ ಹೈನುಗಾರಿಕೆಯಿಂದ ಶೇ. ೨೫ ರಷ್ಟು ಕೊಡುಗೆ
ನೀರನ್ನು ಮಿತವಾಗಿ ಬಳಸಲು ಮನವಿ