ಮಡಿಕೇರಿಯಲ್ಲಿ 70 ನೇ ವನ್ಯಜೀವಿ ಸಪ್ತಾಹ: ಕಾಲ್ನಡಿಗೆ ಜಾಗೃತಿ ಜಾಥಾ

KannadaprabhaNewsNetwork | Published : Oct 4, 2024 1:03 AM

ಸಾರಾಂಶ

ಗುರುವಾರ ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ‘ವನ್ಯಜೀವಿಗಳೊಂದಿಗೆ ಸಹಬಾಳ್ವೆ’ ಎಂಬ ಧ್ಯೇಯ ವಾಕ್ಯದೊಂದಿಗೆ 70ನೇ ವನ್ಯಜೀವಿ ಸಪ್ತಾಹ ಅಂಗವಾಗಿ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ‘ವನ್ಯಜೀವಿ ಸಂರಕ್ಷಣೆಗಾಗಿ ಕಾಲ್ನಡಿಗೆ ಜಾಗೃತಿ ಜಾಥಾ’ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಿಸರ್ಗದ ನಿಯಮಗಳನ್ನು ಪರಿಪಾಲಿಸುವ ಮೂಲಕ ಭವಿಷ್ಯದ ದೃಷ್ಟಿಯಿಂದ ಪರಿಸರ, ಪ್ರಕೃತಿ, ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ಹೊಂದಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಹೊಸಮನಿ ಪುಂಡಲೀಕ ಹೇಳಿದ್ದಾರೆ.

ಗುರುವಾರ ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ‘ವನ್ಯಜೀವಿಗಳೊಂದಿಗೆ ಸಹಬಾಳ್ವೆ’ ಎಂಬ ಧ್ಯೇಯ ವಾಕ್ಯದೊಂದಿಗೆ 70ನೇ ವನ್ಯಜೀವಿ ಸಪ್ತಾಹ ಅಂಗವಾಗಿ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ನಡೆದ ‘ವನ್ಯಜೀವಿ ಸಂರಕ್ಷಣೆಗಾಗಿ ಕಾಲ್ನಡಿಗೆ ಜಾಗೃತಿ ಜಾಥಾ’ಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಹಾಗೂ ವಿವಿಧ ಶಾಲಾ-ಕಾಲೇಜು ಸಹಯೋಗದೊಂದಿಗೆಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಜಿಲ್ಲಾಧಿಕಾರಿ ವೆಂಕಟರಾಜ್ ಮಾತನಾಡಿ, ಅರಣ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ವನ್ಯಜೀವಿ ಸಪ್ತಾಹ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವ ಮೂಲಕ ಅರಣ್ಯ ಮತ್ತು ವನ್ಯಜೀವಿಗಳ ಉಳಿವಿಗೆ ನಿರಂತರ ಪ್ರಯತ್ನ ಅಗತ್ಯ ಎಂದರು.

ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ ಮಾತನಾಡಿ, ಪ್ರತಿಯೊಬ್ಬರೂ ಅರಣ್ಯ ಇಲಾಖೆಯ ಇಂತಹ ಜನ ಜಾಗೃತಿ ಕಾರ್ಯಕ್ರಮಕ್ಕೆ ಸಹಕರಿಸುವಂತೆ ಕೋರಿದರು.

ಪ್ರಾಸ್ತಾವಿಕವಾಗಿ ಮಾತನಾಡಿ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಇಂದು ನಾವು ಅರಣ್ಯ ಮತ್ತು ವನ್ಯಜೀವಿಗಳ ಜೊತೆಯೇ ಬಾಳುವುದನ್ನು ಕಲಿಯಬೇಕು. ಆಗ ಮಾತ್ರ ಪ್ರಕೃತಿ ಮತ್ತು ಪರಿಸರ ಸಮತೋಲನದಿಂದ ಇರಲು ಸಾಧ್ಯ ಎಂದರು.

ಮಡಿಕೇರಿ ವನ್ಯಜೀವಿ ವಿಭಾಗದ ಡಿಸಿಎಫ್ ಕೆ.ಎ.ನೆಹರು ವನ್ಯಜೀವಿ ಸಪ್ತಾಹ ಆಚರಣೆಯ ಉದ್ದೇಶ ತಿಳಿಸಿದರು. ಜಾಥಾದಲ್ಲಿ ಭಾಗವಹಿಸಿದ್ದ ಡಿಡಿಪಿಐ ಸಿ.ರಂಗಧಾಮಪ್ಪ ಮಾತನಾಡಿ, ಮುಂದಿನ ಪೀಳಿಗೆಗಾಗಿ ನಾವು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.

ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸದಸ್ಯ ಎಂ.ಎನ್.ವೆಂಕಟನಾಯಕ್, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತ ಘೋಷವಾಕ್ಯಗಳನ್ನು ಹೇಳಿದರು.

ವನ್ಯಜೀವಿ ಸಪ್ತಾಹ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದ ಸಿಸಿಎಫ್ ಮನೋಜ್ ಕುಮಾರ್ ತ್ರಿಪಾಠಿ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನಾರ್ವಡೆ, ವಿರಾಜಪೇಟೆ ಪ್ರಾದೇಶಿಕ ವಿಭಾಗದ ಡಿಸಿಎಫ್, ಎನ್.ಎಚ್.ಜಗನ್ನಾಥ್, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಸಂದೀಪ್ ಪಿ.ಅಭಯಂಕರ್, ಅರಣ್ಯ ಸಂಚಾರಿ ದಳದ ಡಿಸಿಎಫ್ ಸೈಯದ್ ಅಹಮದ್ ಶಾ ಹುಸೇನ್, ಡಿಡಿಪಿಐ ಸಿ.ರಂಗಧಾಮಪ್ಪ, ಭಾರತ್ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಅವರು ವಿದ್ಯಾರ್ಥಿಗಳೊಂದಿಗೆ 4 ಕಿ.ಮೀ.ಕಾಲ್ನಡಿ ಜಾಥಾದಲ್ಲಿ ಕ್ರಮಿಸಿ ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದರು.

ಜಾಗೃತಿ ಜಾಥಾ: ಅರಣ್ಯ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ವನ್ಯಜೀವಿ ಸಪ್ತಾಹ ಜಾಥಾವು ಮಡಿಕೇರಿ ನಗರದ ಅರಣ್ಯ ಭವನದಿಂದ ಆರಂಭಗೊಂಡು ಮಡಿಕೇರಿ ನಗರದ ಮುಖ್ಯ ರಸ್ತೆಯ ಮೂಲಕ ಟೌನ್‌ಹಾಲ್, ಚೌಕಿ ಮತ್ತು ಮಹದೇವಪೇಟೆ ಮಾರ್ಗವಾಗಿ 4 ಕಿ.ಮೀ.ನಷ್ಟು ದೂರ ಕ್ರಮಿಸಿ ಸ್ವಾಗತಬೆಟ್ಟದ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ ಸಮಾಪನಗೊಂಡಿತು.

ವಿದ್ಯಾರ್ಥಿಗಳಿಂದ ಜಾಥಾ: ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಜಾಥಾದಲ್ಲಿ ತೆರಳಿದ ವಿದ್ಯಾರ್ಥಿಗಳು ನಾಗರಿಕರಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಿದರು.

ಕುಶಾಲನಗರ ತಾಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ,(ಎನ್ನೆಸ್ಸೆಸ್) ಘಟಕದ ವಿದ್ಯಾರ್ಥಿಗಳು, ನಗರದ ಸಂತ ಜೋಸೆಫರ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು, ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಘೋಷಣಾ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಪ್ರಚುರಪಡಿಸಿದರು.

ವನ್ಯಜೀವಿ ಸಪ್ತಾಹ ನಡಿಗೆ ಜಾಥಾದಲ್ಲಿ ಅರಣ್ಯ, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತಾದ ಭಿತ್ತಿಫಲಕಗಳನ್ನು ಹಿಡಿದು ಸಾಗಿದ ಸ್ವಯಂ ಸೇವಕರು ಅರಣ್ಯ, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಘೋಷಣೆಗಳನ್ನು ಕೂಗುವ ಮೂಲಕ ನಾಗರಿಕರ ಗಮನ ಸೆಳೆದರು.

ವನ್ಯಜೀವಿ ವಿಭಾಗದ ಎಸಿಎಫ್ ಶ್ರೀನಿವಾಸ್ ನಾಯಕ್, ಪುಷ್ಪಗಿರಿ ವನ್ಯಜೀವಿ ವಲಯದ ಆರ್‌ಎಫ್‌ಓ ಕೋಟ್ರೇಶ್ ಜಾಥಾದ ಉಸ್ತುವಾರಿ ವಹಿಸಿದ್ದರು.

Share this article