ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಮಣಿಪಾಲಉಡುಪಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯಡಿ ಸುಮಾರು 7151 ಅರ್ಜಿದಾರರರು ಐ.ಟಿ, ಜಿ.ಎಸ್.ಟಿ, ಇ-ಕೆವೈಸಿ ಮ್ಯಾಪಿಂಗ್ ಇತ್ಯಾದಿ ಕಾರಣಗಳಿಗೆ ಸೌಲಭ್ಯವಂಚಿತರಾಗಿದ್ದಾರೆ. ಅವರ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿದ್ದಲ್ಲಿ ಅವರಿಗೂ ಯೋಜನೆಯ ಲಾಭ ತಲುಪಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಂಗಳವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಕುಟುಂಬದ ಯಜಮಾನಿ ಮರಣ ಹೊಂದಿದ್ದಲ್ಲಿ ಯಜಮಾನಿ ಬದಲಾವಣೆಗೆ, ಹೊಸಮನೆ ಕಟ್ಟಿದಾಗ ಹೊಸ ಅರ್ಜಿಯ ಸೇರ್ಪಡೆಗೆ, ಹೊಸ ರೇಷನ್ ಕಾರ್ಡುದಾರರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಪ್ರಾರಂಭದ 3- 4 ಕಂತುಗಳ ಹಣ ಬಂದಿದೆ. ನಂತರ ಬಂದಿಲ್ಲ ಎಂಬ ದೂರುಗಳು ಬಂದಿವೆ ಎಂದವರು ಹೇಳಿದರು.ಗೃಹಜ್ಯೋತಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಗರಿಷ್ಠ 200 ಯೂನಿಟ್ ಉಚಿತ ನೀಡಲಾಗುತ್ತಿದೆ. ಆದರೆ ಬೇಸಿಗೆಯಾದ್ದರಿಂದ ಸ್ವಲ್ಪ ಹೆಚ್ಚು ವಿದ್ಯುತ್ ಬಳಕೆಯಾದರೂ, ಸಾವಿರಾರು ರು. ವಿದ್ಯುತ್ ಬಿಲ್ ಬಂದಿದೆ. ಬಿಲ್ ಕಟ್ಟುವುದಕ್ಕೆ ವಿಳಂಬವಾದರೇ ಮೆಸ್ಕಾಂ ಸಿಬ್ಬಂದಿ ಫ್ಯೂಸ್ ತೆಗೆಯುತಿದ್ದಾರೆ. ಹೀಗೆ ಮಾಡದೇ ಬಿಲ್ ಕಟ್ಟುವುದಕ್ಕೆ ಹೆಚ್ಚುವರಿ ಸಮಯ ನೀಡಿ ಎಂದವರು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ಮಂಗಳೂರು ವಿಭಾಗಕ್ಕೆ 100 ಹೊಸ ಸರ್ಕಾರಿ ಬಸ್‌ಗಳನ್ನು ನೀಡಲಿದ್ದು, ಅವುಗಳಲ್ಲಿ 40 ಬಸ್‌ಗಳು ಉಡುಪಿ ಜಿಲ್ಲೆಗೆಆಗಮಿಸಲಿದೆ. ಅಗತ್ಯವಿರುವ ರೂಟ್‌ಗಳನ್ನು ಗುರುತಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದ ಅವರು, ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎಸ್ಕಲೇಟರ್ ಕಳಪೆ ನಿರ್ವಹಣೆ ಮತ್ತು ಶೌಚಾಲಯದ ಶುಚಿತ್ವದ ಗಮನವ ಹರಿಸುವಂತೆ ಹೇಳಿದರು.
ಜಿಪಂ ಸಿಇಓ ಪ್ರತೀಕ್ ಬಾಯಲ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಯಾವುದೇ ಸಮಸ್ಯೆಗಳನ್ನು ತಂದಲ್ಲಿ ಅದನ್ನು ಸಮಾಧಾನಯುತವಾಗಿ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪ್ರಶಾಂತ ಜತ್ತನ್ನ, ಸತೀಶ್, ಸಂತೋಷ್ ಕುಲಾಲ್ ಹಾಗೂ ಗೀತಾ ವಾಗ್ಲೆ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರು, ತಾಲೂಕುಗಳ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.