ಕೂಡ್ಲಿಗಿ: ಇಲ್ಲಿನ ಕೂಡ್ಲಿಗಿ ವಿಧಾನಸಭಾ ವ್ಯಾಪ್ತಿಯ 74 ಕೆರೆಗಳಿಗೆ ತುಂಗಾಭದ್ರ ನದಿಯಿಂದ ನೀರು ತುಂಬಿಸುವ ಅಂದಾಜು ₹670 ಕೋಟಿ ವೆಚ್ಚದ ಮಹತ್ವದ ಯೋಜನೆಗೆ ಅರಣ್ಯದಲ್ಲಿ ಪೈಪ್ ಲೈನ್ ಹಾಕಲು ಕಾನೂನು ತೊಡಕು ಸೇರಿದಂತೆ ಹಲವು ಅಡೆತಡೆಗಳು ನಿವಾರಣೆಯಾಗಿವೆ. ತಿಂಗಳೊಳಗೆ ಪೈಪ್ ಲೈನ್ ಕಾಮಗಾರಿ ಮುಗಿಯಲಿದೆ.
ಮೊದಲ ಹಂತದ ಕಾಮಗಾರಿಗೆ 4 ಕಿ.ಮೀ. ರೈತರ ಜಮೀನುಗಳಲ್ಲಿ ಪೈಪ್ ಲೈನ್ ಹಾಕುವುದು ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿತ್ತು. ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಜಿಲ್ಲಾಧಿಕಾರಿ ದಿವಾಕರ್, ಹರಪನಹಳ್ಳಿ ಎಸಿ ಚಿದಾನಂದ ಗುರುಸ್ವಾಮಿ, ಹೂವಿನಹಡಗಲಿ ತಹಶೀಲ್ದಾರ್ ಸಂತೋಷ್ ರೈತರೊಂದಿಗೆ ಚರ್ಚಿಸಿ ರೈತರ ಜಮೀನುಗಳಿಗೆ ಸರ್ಕಾರದಿಂದ ಪರಿಹಾರ ನೀಡಿ ಅಲ್ಲಿಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಬಾಕಿ ಇದ್ದ ಪೈಪ್ ಲೈನ್ ಕಾಮಗಾರಿ ಚುರುಕುಗೊಂಡಿದೆ.ಪೈಪ್ ಲೈನ್ ರೆಡಿಯಾದರೆ ಮೊದಲ ಹಂತದ 16 ಕೆರೆಗಳಿಗೆ ನೀರು ಬಂದಂತೆಯೇ ಸರಿ. ಮೊದಲ ಹಂತದ ನೀರು ಲಿಪ್ಟ್ ಆದರೆ 2ನೇ ಹಂತದ ಕೆರೆಗಳಿಗೂ ನೀರು ಹರಿಸುವುದು ಸುಲಭವಾಗುತ್ತದೆ.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಭಾಗದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪೈಪ್ ಲೈನ್ ಕಾಮಗಾರಿ ಮಾಡುವುದಷ್ಟೇ ಬಾಕಿ ಇತ್ತು. ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಬರುವುದಕ್ಕೆ ಎರಡು ವರ್ಷವೇ ಕಾಯಬೇಕಾಯಿತು.ಉಜ್ಜಯನಿಯಿಂದ ಪಾಲಯ್ಯನಕೋಟೆ ಕೆರೆಗೆ 2 ಹಂತದ ಕೆರೆ ನೀರು ಲಿಫ್ಟ್ ಮಾಡುವ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಾಮಗಾರಿ ಬಾಕಿ ಇತ್ತು. ಅದು 2 ದಿನಗಳ ಹಿಂದೆಯಷ್ಟೇ ವಿದ್ಯುತ್ ಕಾಮಗಾರಿ ಪೂರ್ಣಗೊಂಡಿದೆ. ಪಾಲಯ್ಯಕೋಟೆ ಕೆರೆಯಲ್ಲಿ ಮಳೆಯಿಂದ ನೀರು ತುಂಬಿದ್ದರಿಂದ 2 ಹಂತದಲ್ಲಿರುವ 40 ಕೆರೆಗಳಿಗೆ ನೀರು ಹರಿಸಲು ಪ್ರಾಯೋಗಿಕವಾಗಿ ಚೆಕ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ನಂತರ ಅರಣ್ಯದಲ್ಲಿ ಪೈಪ್ ಲೈನ್ ಹಾಕಿದರೆ ಉಳಿದ ಕೆರೆಗಳಿಗೂ ನೀರು ಹರಿಸಬಹುದು. ಆ ಸಮಯಕ್ಕಾಗಿ ಕೂಡ್ಲಿಗಿ ಕ್ಷೇತ್ರದ ರೈತರು ಕಾಯುತ್ತಿದ್ದಾರೆ.
ರೈತರ ಮನವೊಲಿಕೆ ನಂತರ ಮೊದಲ ಹಂತದಲ್ಲಿ ಬಾಕಿ ಇದ್ದ ನಾಲ್ಕು ಕಿ.ಮೀ. ವ್ಯಾಪ್ತಿಯ ಪೈಪ್ ಲೈನ್ ಕಾಮಗಾರಿಗೆ ಇದ್ದ ಅಡೆತಡೆ ನಿವಾರಣೆಯಾಗಿದೆ. ರೈತರಿಗೂ ಭೂಸ್ವಾಧೀನ ಇಲಾಖೆಯಿಂದ ಪರಿಹಾರ ನೀಡಲಾಗಿದೆ. ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾರ್ಯ ನಿರ್ವಾಹಕ ಅಭಿಯಂತರ ಗೌಳಿ ಶಿವಮೂರ್ತಿ.